ಲೋಕಸಭಾ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಸದ್ಯಕ್ಕೆ ಪಕ್ಷ ಸೇರ್ಪಡೆ ಆಗುವ ಮಾತೇ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟ ಪಡಿಸಿದರು.
ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗ್ತಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಚುನಾವಣೆಗೆ ಇನ್ನು ಎರಡು ವರ್ಷವಿದೆ.ಸದ್ಯಕ್ಕೆ ಪಕ್ಷ ಸೇರ್ಪಡೆ ಇಲ್ಲ ಎಂದರು.
ನನ್ನ ಜಿಲ್ಲೆಗೆ,ನನ್ನ ಜನರಿಗೆ ಹಾಗೂ ನನ್ನ ಗೌರವಕ್ಕೆ ಬೆಲೆ ಕೊಡುವ ಪಕ್ಷ ಇದ್ದರೆ ಮುಂದೊಂದು ದಿನ ಸೇರಬಹುದು. ಬೇರೆ ಪಕ್ಷ ಸೇರುವ ಮುನ್ನ ಜನರ ಅಭಿಪ್ರಾಯ ಪಡೆಯುತ್ತೇನೆ. ಅವರ ಅಭಿಪ್ರಾಯ ಪಡೆಯದೆ ಏನನ್ನೂ ಮಾಡುವುದಿಲ್ಲ ಎಂದು ತಿಳಿಸಿದರು.
ಮದ್ದೂರಿನಲ್ಲಿ ಸಭೆ ಕರೆದಿರುವುದು ಸಂಸದರ ನಿಧಿ ಬಗ್ಗೆ ತಿಳಿಸಲು.ಕೊರೊನಾ ಕಾರಣದಿಂದ ಎರಡು ವರ್ಷ ಸಂಸದರ ನಿಧಿ ಅಮಾನತಿನಲ್ಲಿ ಇಟ್ಟಿದ್ದರು. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಇದನ್ನುತಿಳಿಸಲು ಸಭೆ ಕರೆದಿದ್ದೇನೆ ಎಂದರು.
ಪಕ್ಷ ಸೇರ್ಪಡೆ ಕಾರಣದಿಂದ ಮುಖಂಡರ ಸಭೆ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ. ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದರೆ ಅದು ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ.
ಸಚಿವ ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದು ಹೇಳಿದ್ದಾರೆ. ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ನಾನು ಏನು ಹೇಳಲ್ಲ. ಅವರೆಲ್ಲರೂ ಸ್ವತಂತ್ರರು. ಯಾವ ಪಕ್ಷಕ್ಕಾದ್ರು ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ ಎಂದರು.
ಅಭಿಷೇಕ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಆತನಿಗೆ ಬಿಟ್ಟಿದ್ದು. ಅವನನ್ನು ಸಿನಿಮಾಗೆ ಬಾ ಎಂದು ಹೇಳಿರಲಿಲ್ಲ.ಈಗ ರಾಜಕೀಯಕ್ಕೆ ಬರುವ ವಿಚಾರ ಆತನ ವೈಯಕ್ತಿಕ ಎಂದರು.