ಕವಿತೆ :
ನಾನು ವ್ಯವಸ್ಥೆಯ ವಿರುದ್ಧ ಬಂಡೇಳ ಬೇಕೆಂದಿದ್ದೆ
ಅಷ್ಟರಲ್ಲಿ ವ್ಯವಸ್ಥೆ ನನ್ನ ಕಟ್ಟಿ ಹಾಕಿ ಬಿಟ್ಟಿತು
ನಾನು ವ್ಯವಸ್ಥೆ ವಿರುದ್ಧ ಕತ್ತಿ ಮಸೆಯಲು
ಪ್ರಾರಂಭಿಸಿದ ಕೂಡಲೇ ನನ್ನ ಎದರು
ಸುಂದರ ಹುಡುಗಿಯರು ಸುಳಿದಾಡುವಂತೆ
ನೋಡಿಕೊಂಡಿತು ಈ ವ್ಯವಸ್ಥೆ
ನಾನು ವ್ಯವಸ್ಥೆಯನ್ನು ವಿರೋಧಿಸಿ
ಸಮಾಜವನ್ನು ಪ್ರೀತಿಸತೊಡಗಿದ ಕೂಡಲೇ
ಪ್ರೀತಿಸುವುದಾದರೆ ಸಮಾಜವನ್ನು ಪ್ರೀತಿಸಬೇಡ
ಸವಿತಾ, ಸಹನಾ, ಸ್ನೇಹ, ಸಂಕಲ್ಪಳನ್ನು ಪ್ರೀತಿಸುವಂತೆ
ಪಾಠ ಹೇಳಿತು ವ್ಯವಸ್ಥೆ
ನಾನು ಪ್ರೀತಿಸುವುದೇ ವ್ಯವಸ್ಥೆ ವಿರುದ್ದದ ಬಂಡಾಯವೆಂದು ಕೊಂಡು ಪ್ರೀತಿಸಲು ತೊಡಗಿದ ಕೂಡಲೇ ಪ್ರೀತಿಯನ್ನು ಮದುವೆಯಲ್ಲಿ ಬಂಧಿಸಿಡುವಂತೆ ಪಾಠ ಹೇಳಿತು ವ್ಯವಸ್ಥೆ
ನಾನು ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಯಾಗುವುದೇ ಬಂಡಾಯವೆಂದು ಕೊಂಡು
ಮದುವೆಯಾದ ಕೂಡಲೇ ಮಕ್ಕಳು ಮರಿಗಳಿಲ್ಲದ ಜೀವನ ಬರಡು-ಕೊರಡು ಎಂದು ತಿಳಿ ಹೇಳಿತು ವ್ಯವಸ್ಥೆ
ನಾನು ಮಕ್ಕಳು ಮರಿಗಳನ್ನು ಸಾಕಿಕೊಂಡು ಸಲಹಿಕೊಂಡು ಇರುವಾಗಲೇ ನಾಯಿ, ನರಿ, ಕೊತ್ತಿ, ಬೆಕ್ಕುಗಳನ್ನು ಸಾಕದಿದ್ದರೆ ಜೀವನ ನಶ್ವರ ಎಂದು
ಪಾಠ ಹೇಳಿತು ವ್ಯವಸ್ಥೆ
ನಾನು ವ್ಯವಸ್ಥೆ ವಿರುದ್ದ ಬಂಡೆಳಲು ಮಸಿದಿದ್ದ ಕತ್ತಿ
ತುಕ್ಕು ಹಿಡಿದು ಮೊಂಡಾಗಿ ಕುಳಿತಿದ್ದು ಆ ಮೊಂಡು
ಕತ್ತಿಯಲ್ಲಿ ಸಾಕು ನಾಯಿಯ ಕತ್ತಿನ ದಾರ ಹರಿದು
ನಾಯಿಯನ್ನು ಕಟ್ಟಿ ಹಾಕುವಾಗ ವ್ಯವಸ್ಥೆ ನನ್ನ ನೋಡಿ ಗಹಗಹಿಸಿ ನಗುತ್ತೆ !!!
~ ನಿಮ್ಮವನು