Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿ.ಕೆ.ಶಿವಕುಮಾರ್ – ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಷಡ್ಯಂತ್ರ : ರಮೇಶ್ ಬಾಬು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಪಕ್ಷಗಳು ಷಡ್ಯಂತ ರೂಪಿಸಿ ಅವರನ್ನು ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಅವರ ಮೇಲಿನ ವೈಯಕ್ತಿಕ ದ್ವೇಷ, ಹಗೆತನವನ್ನು ಸಾಧಿಸುವುದಕ್ಕಾಗಿ ಲಖನ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಲಖನ್ ಜಾರಕಿಹೊಳಿ ಸುದ್ದಿಗೋಷ್ಠಿ ಮಾಡುವುದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು, ಆನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದಾರೆ, ಇದಕ್ಕೆ ಸಿಎಂ ಬೊಮ್ಮಾಯಿ ಪೂರಕವಾಗಿ ಸ್ಪಂದಿಸಿದ್ದಾರೆ. ಈ ಎಲ್ಲಾ ನಡವಳಿಕೆಗಳನ್ನು ಗಮನಿಸಿದರೆ ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಬಿಜೆಪಿ ನಾಯಕರೇ ಶಾಮೀಲಾಗುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ವಿವರಿಸಿದರು.

ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ತಮ್ಮ ನಾಯಕರ ಜೊತೆ ಷಡ್ಯಂತ್ರ ರೂಪಿಸಿ ಈ ರೀತಿ ವೃಥಾ ಆರೋಪ ಮಾಡುತ್ತಿದ್ದಾರೆ, ರಮೇಶ್ ಜಾರಕಿಹೊಳಿ ಅವರಿಗೆ ಸಿಡಿ ಪ್ರಕರಣದಲ್ಲಿ ಇಲ್ಲಿಯವರೆಗೂ ಕ್ಲೀನ್ ಚಿಟ್ ಸಿಕ್ಕಿಲ್ಲ. ಅವರೂ ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಲ್ಲ, ಆಗ ಈ ಪ್ರಕರಣವನ್ನು ಯಾವುದೇ ತನಿಖೆಗೆ ವಹಿಸಲಿಲ್ಲ. ಈಗ ಸಿಬಿಐಗೆ ಕೊಡುವ ಮಾತನಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಬಿಜೆಪಿ ತನಿಖಾ ಸಂಸ್ಥೆಗಳನ್ನು ಅಂಗಸಂಸ್ಥೆಗಳಂತೆ ಬಳಸಿಕೊಳ್ಳುತ್ತಿರುವುದರಿಂದ ಪ್ರಕರಣವನ್ನು ಸಿಬಿಐಗೆ ನೀಡಲು ಒತ್ತಾಯಿಸಲಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರನ್ನು ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ ತನ್ನ ನಿಜ ಬಣ್ಣ ಬಯಲು ಮಾಡಿದೆ. ಈ ಷಡ್ಯಂತ್ರದ ಭಾಗವಾಗಿ ಕೆಪಿಸಿಸಿ ಅಧ್ಯಕ್ಷರ ಮೇಲೆ ಅಪಪ್ರಚಾರಕ್ಕೆ ಮುಂದಾಗಿದೆ. ಸಿಡಿ ಪ್ರಕರಣ ಸಿಬಿಐಗೆ ವಹಿಸುವ ಸಂಬಂಧ ಮುಖ್ಯಮಂತ್ರಿಗಳ ಹೆಸರನ್ನೂ ಬಳಸಿಕೊಂಡಿದ್ದು, ಅವರೂ ಈ ಷಡ್ಯಂತ್ರದಲ್ಲಿ ಭಾಗಿಯಾದ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!