Thursday, September 19, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಕನ್ನಡ | ಸುರತ್ಕಲ್‌: ಪ್ರತಿಭಟನೆ ಮುಗಿದ ಬೆನ್ನಲ್ಲೇ ಮತ್ತೆ ಟೋಲ್‌ ಸಂಗ್ರಹ ಆರಂಭ


ಪೊಲೀಸ್ ಕೋಟೆ ಭೇದಿಸಿ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿದ್ದ ಹೋರಾಟಗಾರರು

ಟೋಲ್‌ಗೇಟ್‌ ವಿರೋಧಿ ಹೋರಾಟಗಾರರನ್ನು ಬಂಧಿಸಿದ ಪೊಲೀಸರು


ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸುರತ್ಕಲ್‌ ಟೋಲ್‌ಗೇಟ್ ತೆರವುಗಾಗಿ ಮಂಗಳವಾರ ಬೃಹತ್ ಹೋರಾಟ ನಡೆದಿದೆ. ಪೊಲೀಸರ ಸರ್ಪಗಾವಲನ್ನು ಭೇದಿಸಿ ಪ್ರತಿಭಟನಾಕಾರರು ಟೋಲ್ ಬೂತ್‌ಗೆ ಮುತ್ತಿಗೆ ಹಾಕಿದ್ದಾರೆ. ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದು, ಪ್ರತಿಭಟನೆ ಮುಗಿದ ಬೆನ್ನಲ್ಲೇ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಿ ಮತ್ತೆ ಆರಂಭವಾಗಿದೆ.

ಶಾಂತಿಯುತವಾಗಿಯೇ ಆರಂಭವಾದ ಪ್ರತಿಭಟನೆ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೆದ್ದಾರಿಯಲ್ಲಿ ಕುಳಿತು ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ಏಕಾಏಕಿ ಟೋಲ್‌ಗೇಟ್‌ನತ್ತ ಮುನ್ನುಗ್ಗಿದ್ದರು. ಬ್ಯಾರಿಕೇಡ್‌ಗಳನ್ನು ತಳ್ಳಿ, ಟೋಲ್‌ಬೂತ್‌ನತ್ತ ನುಗ್ಗಿ ಬಂದರು.

ಟೋಲ್‌ಗೇಟ್ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಕೋಟೆ ಕಟ್ಟಿನಿಂತಿದ್ದ ಪೊಲೀಸರನ್ನು ತಳ್ಳಿ ಮುನ್ನುಗ್ಗಿದ್ದ ಪ್ರತಿಭಟನಾಕಾರರು ಟೋಲ್ ಬೂತ್‌ಗಳನ್ನು ಸುತ್ತುವರೆದು, ಟೋಲ್ ಬೂತ್ ಒಂದರ ಮೇಲೆ ಹತ್ತಿ ಘೋಷಣೆ ಕೂಗಿದರು. ಅಷ್ಟರಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

“ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ, ನಮ್ಮ ಹೋರಾಟ ಟೋಲ್ ಗೇಟ್ ಹೆಸರಿನಲ್ಲಿ ನಡೆಯುತ್ತಿರುವ ಲೂಟಿಯ ವಿರುದ್ಧವಷ್ಟೇ, ಧೈರ್ಯವಿದ್ದರೆ ಲೂಟಿಕೋರರನ್ನು ಬಂಧಿಸಿ, ನಮ್ಮನ್ನಲ್ಲ” ಎಂದು ಪ್ರತಿಭಟನಾಕಾರರು ಪೊಲೀಸರಿಗೆ ಸವಾಲೆಸೆದರು.

ಬಂಧನದ ವೇಳೆ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು “ಅಕ್ರಮ ಟೋಲ್ ಗೇಟ್ ಬೇಡವೇ ಬೇಡ… ಸುರತ್ಕಲ್ ಟೋಲ್‌ಗೇಟ್ ತೊಲಗಲೇ ಬೇಕು… ಅಕ್ರಮ ಲೂಟಿ ತಡೆಯಲಾಗದ ಶಾಸಕ ಸಂಸದರು ಬೇಕಾಗಿಲ್ಲ…” ಎಂದು ಘೋಷಣೆ ಕೂಗಿದರು. 

ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ. ಕೆ. ಇಮ್ತಿಯಾಜ್, ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್ ಸೊರಕೆ, ಮಿಥುನ್‌ರೈ, ಐವನ್ ಡಿಸೋಜಾ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ಜೆ. ಆರ್. ಲೋಬೊ, ಪಿ. ವಿ. ಮೋಹನ್, ಪ್ರತಿಭಾ ಕುಳಾಯಿ, ಕುಳಾಯಿ, ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೊ, ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಬಿಲ್ಲವ ಮುಖಂಡ ಪದ್ಮರಾಜ್ ಸೇರಿದಂತೆ ನೂರಾರು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಇಬ್ಬರು ಗಾಯಗೊಂಡಿದ್ದು, ಒಬ್ಬರ ಕಣ್ಣಿಗೆ ಹಾಗೂ ಇನ್ನೊಬ್ಬರ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಪ್ರತಿಭಟನೆ ನಡೆಯುವ ವೇಳೆ ಕೆಲ ಕಾಲ ಸುರತ್ಕಲ್ ಟೋಲ್‌ಗಲ್ಲಿ ವಾಹನಗಳಿಂದ ಸುಂಕ ಪಡೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಪ್ರತಿಭಟನಾಕಾರರ ಬಂಧನವಾದ ಅರ್ಧ ಗಂಟೆಯಲ್ಲಿ ಸುಂಕ ಸಂಗ್ರಹ ಮತ್ತೆ ಆರಂಭವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!