Friday, September 13, 2024

ಪ್ರಾಯೋಗಿಕ ಆವೃತ್ತಿ

ವಿವಾಹಿತ ಮಹಿಳೆ ನಾನು

ಇರಾನ್ ಮೂಲ : ಶಾರುಖ್ ಹೈದರ್
✍🏿ಅನು: ಮಂಜುಳ ಕಿರುಗಾವಲು

 

ನಾನು ಒಬ್ಬ ವಿವಾಹಿತ ಮಹಿಳೆ
ಇರಾನಿ ಮಹಿಳೆ

ಗಂಟೆ ರಾತ್ರಿ ಎಂಟಾಗಿತ್ತು
ಇಲ್ಲಿನ ಖಯಾಬನ್ ಸಹರುರ್ದಿ ಶಿಮಾಲಿಯಲ್ಲಿ
ರೊಟ್ಟಿ ಖರೀದಿಸಲು ಹೊರಟಿದ್ದೆ.

ನಾನೇನು ಸಿಂಗರಿಸಿಕೊಂಡಿರಲಿಲ್ಲ
ನಾ ತೊಟ್ಟ ಬಟ್ಟೆಯೂ ಚಂದವೂ ಇರಲಿಲ್ಲ
ಆದರೂ,
ನನ್ನನ್ನು
ಬಹಿರಂಗವಾಗಿ
ಏಳನೇ
ಕಾರು ಹಿಂಬಾಲಿಸುತ್ತಿತ್ತು…

ಕೇಳುತ್ತಾರೆ…
ಗಂಡ ಇರುವನೋ ಇಲ್ವೋ
ನನ್ನೊಂದಿಗೆ ಬಾ ಸುತ್ತಾಡೋಣ
ನಿನಗೆ ಏನೆಲ್ಲಾ ಇಷ್ಟವೋ ಅದೆಲ್ಲಾ ಕೊಡಿಸುವೆ..

ಇಲ್ಲೊಂದು ಕಾವಲಿ ಇದೆ
ಗಂಟೆ ಎಂಟು ವರೆಯಾಗಿತ್ತು
ಯಾಕೋ ಗೊತ್ತಿಲ್ಲ
ರೊಟ್ಟಿಗೆ ಹಿಟ್ಟು ಕಲಸುತ್ತಿದವನು
ನನ್ನ ನೋಡಿ ಕಣ್ಣು ಹೊಡೆಯುತ್ತಿದ್ದ

ನಾನ್ ನೀಡುತ್ತ
ನನ್ನ ಕೈ ಹಿಡಿದು
ಹಿಸುಕಾಡಿದ

ಇದು ಟೆಹ್ರಾನ್ ನಗರ (ಇರಾನಿನ ರಾಜಧಾನಿ)

ನಾನು ರಸ್ತೆ ದಾಡುವಾಗ
ವಾಹನ ಸವಾರ ನನ್ನೆಡೆಗೆ ಬಂದು
ಬೆಲೆ ಎಷ್ಟೆಂದ ?
ಒಂದು ರಾತ್ರಿಗೆಷ್ಟೆಂದ ?

ನನಗೇನು ಅರಿಯದು..!
ಈ ರಾತ್ರಿಗಳ ಬೆಲೆ ಏನು ?

ಇದು ಇರಾನ್
ನನ್ನ ಅಂಗೈಗಳು ಒದ್ದೆಯಾಗಿವೆ
ನನ್ನಿಂದ ಮಾತನಾಡಲಾಗಲಿಲ್ಲ
ನಾನು ಅವಮಾನ ಮತ್ತು ಭಯದಿಂದ ಕಂಪಿಸುತ್ತಲೇ
ಮನೆ ತಲುಪಿದ್ದೆ

ಇಂಜಿನಿಯರ್’ನನ್ನು ನೋಡಿದೆ
ಅವನೊಬ್ಬ ಸಭ್ಯ ವ್ಯಕ್ತಿ.
ಎರಡನೇ ಮಹಡಿಯಲ್ಲಿ
ಹೆಂಡತಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದ..

ಸಲಾಮ್ ಬೇಗಮ್,
ಹೇಗಿದೀರಿ?
ನಿಮ್ಮ ಮುದ್ದಿನ ಮಗಳು ಹೇಗಿದ್ದಾಳೆ.. ?

ವಾಸ್ಸಲಾಮ್
ನಾನು ಚೆನ್ನಾಗಿದೀನಿ
ನೀವು ಆರಾಮಾಗಿರುವಿರಾ ?
ಈಚೀಚೆಗೆ ಕಾಣಿಸುತ್ತಿಲ್ಲ?

ನಿಜವೇನೆಂದರೆ
ಇವತ್ತು ಮನೆಯಲ್ಲಿ ಯಾರು ಇಲ್ಲ
ಸಾಧ್ಯವಾದರೆ ಬನ್ನಿ
ನಿಲೋಫರ್’ಳ ಕಂಪ್ಯೂಟರ್ ಸರಿ ಪಡಿಸಿ ತುಂಬಾ ಕೆಟ್ಟಿದ್ದು, ಸಮಸ್ಯೆಯಾಗುತ್ತಿದೆ..

ನನ್ನ ಬಳಿ ಮೊಬೈಲ್ ಇದೆ
ಎಷ್ಟಾದರೂ ಮಾತನಾಡಿ ಆರಾಮಾಗಿ

ನಾನು ಭಾರವಾದ ಹೃದಯದಿಂದ ಹೇಳಿದೆ ಮತ್ತೆ ಎಂದಾದರೂ ಬರುವೆ ಬಿಡುವಿದ್ದಾಗ

ಇದು ಇಸ್ಲಾಮಿಕ್ ನೆಲ
ಇದು ಔಲಿಯಾ ಮತ್ತು ಸೂಫಿಗಳಿಗೆ ನೆಲೆಯಾಗಿದೆ
ಇಸ್ಲಾಮಿ ಕಾನೂನು ವ್ಯಾಪಕವಾಗಿದೆ. ಆದರೆ, ಲೈಂಗಿಕ ವ್ಯಸನಿಗಳು ಹೆಚ್ಚಿದ್ದು, ಧರ್ಮವಾಗಲಿ, ಕಾನೂನಾಗಲಿ
ನಿನ್ನ ರಕ್ಷಿಸುವುದಿಲ್ಲ

ಇದು ಇಸ್ಲಾಮ್ ಪ್ರಜಾಪ್ರಭುತ್ವ
ಮತ್ತು ನಾನು ಮಹಿಳೆ

ನನ್ನ ಗಂಡ
ಬಯಸಿದರೆ ನಾಲ್ಕು ಮದುವೆಯಾಗಬಹುದು
ನಲವತ್ತು ಮಹಿಳೆಯರ ಜೊತೆ ಸುಖಿಸಬಹುದು

ನನ್ನ ಕೂದಲು
ನನ್ನನ್ನು ನರಕಕ್ಕೆ ಕರೆದೊಯ್ಯುವುದು

ಗಂಡಸರ ದೇಹದ ಗಂಧ
ಅವರನ್ನು ಸ್ವರ್ಗಕ್ಕೆ ಕರೆದೊಯ್ಯತ್ತದೆ

ನನಗೆ
ನ್ಯಾಯಾಲಯದಲ್ಲಿ ಯಾವುದೇ ನ್ಯಾಯವಿಲ್ಲ
ಆದರೆ, ನನ್ನ ಪತಿ ನನಗೆ ತಲಾಕ್ ನೀಡಿದರೆ ಗೌರವಾನ್ವಿತ ಎನ್ನಿಸಿಕೊಳ್ಳುವ

ಆದರೆ, ನಾನು ತಲಾಕ್
ಕೇಳಿದರೆ,
ಎಲ್ಲೆ ಮೀರಿದ್ದಾಳೆ ಮಾನಗೇಡಿ ಎನ್ನುವುದು

ನನ್ನ ಮಗಳ ಮದುವೆಗೆ
ನನ್ನ ಅನುಮತಿಯ ಅಗತ್ಯವಿಲ್ಲ
ಆದರೆ, ಅಪ್ಪನ ಅನುಮತಿ ಬೇಕೇ ಬೇಕು

ನಾನು ಎರಡು ಕೆಲಸ ಮಾಡುತ್ತೇನೆ..
ಅವ ಕೆಲಸದಿಂದ ಬಂದು ವಿಶ್ರಾಂತಿ ಪಡೆಯುತ್ತಾನೆ
ನಾನು ಕೆಲಸದಿಂದ ಬಂದ ಮೇಲೂ ಕೆಲಸ ಮಾಡುತ್ತೇನೆ..
ಮತ್ತವನ ವಿಶ್ರಾಂತಿಗೆ ಅನುವು ಮಾಡಿಕೊಡುವುದು ಕೂಡ ನನ್ನದೇ ಕೆಲಸ

ನಾನು ಮಹಿಳೆ
ನನ್ನ ನೋಡುವುದು ಗಂಡಸಿನ ಅಧಿಕಾರ !
ಆದರೆ, ಆಕಸ್ಮಿಕವಾಗಿ ಗಂಡಸಿನ ಮೇಲೆ ನನ್ನ ದೃಷ್ಟಿ ಹಾಯಿಸಿದರೆ
ಮಾನಗೇಡಿ, ನಡತೆಗೆಟ್ಟವಳೆನ್ನುವರು

ನಾನು ಮಹಿಳೆ
ಈ ಎಲ್ಲಾ ನಿರ್ಬಂಧಗಳನ್ನು ನಂತರವೂ ನಾನು ಮಹಿಳೆ…
ನನ್ನ ಜನ್ಮದಲ್ಲಿ ಏನಾದರೂ ದೋಷವಿರುವುದಾ?
ಅಥವಾ ನಾನು ಬೆಳೆದು ದೊಡ್ಡವಳಾದ ಆ ಸ್ಥಳ ಸರಿ ಇಲ್ಲವೇ ?

ನನ್ನ ದೇಹ,
ನನ್ನ ಅಸ್ತಿತ್ವ
ಉತ್ತಮ ಉಡುಪಿನ ಗಂಡಿನ ಆಲೋಚನೆ ಮತ್ತು ಅರಬಿ ಭಾಷೆಯ ಜಾಲದಲ್ಲಿ ಮಾರಾಟವಾಗಿದೆ.

ನನ್ನ ಪುಸ್ತಕ ಬದಲಿಸಬೇಕು
ಇಲ್ಲವೇ
ಗಂಡಸಿನ ಆಲೋಚನೆ
ಅಥವಾ
ಕೋಣೆಯ ಮೂಲೆಯೊಂದರಲ್ಲಿ ಬಂಧಿಯಾಗಿರಬೇಕೇ ?
ನನಗೆ ತಿಳಿಯದು

ನನಗೆ ತಿಳಿಯದು
ನಾನು ಜಗತ್ತಿನಲ್ಲಿ ಯಾವ
ಕೆಟ್ಟ ಸ್ಥಳ ಮತ್ತು ಕೆಟ್ಟ
ಗಳಿಗೆಯಲ್ಲಿ ನಾನು ಹುಟ್ಟಿರುವೇನು

ಇರಾನ್ ಮೂಲದ ಕವಿತೆ


Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!