Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ದಲಿತರ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಖಂಡಿಸಿ ಪ್ರತಿಭಟನೆ

ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ 11,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡು ದಲಿತ ಸಮುದಾಯವನ್ನು ವಂಚಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಕೋಮುವಾದಿ ಬಿಜೆಪಿ ಸರ್ಕಾರ ತೊಲಗಿಸಲು ದಲಿತ ಸಂಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಕೊಟ್ಟ ಮಾತಿನಂತೆ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ತರಲಾಯಿತು, ಜತೆಗೆ ಎಸ್‌ಸಿಪಿ, ಟಿಎಸ್‌ಪಿ ಉಪ ಕಾಯ್ದೆ 7ಡಿ ಕಾಲಂ ತೆಗೆದು ಒಳ್ಳೆಯ ಕೆಲಸ ಮಾಡಿಕೊಡಲಾಯಿತು. ಆದರೆ ಇದೀಗ ಪರಿಶಿಷ್ಟರ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಕೂಡಲೇ ಮೀಸಲು ಹಣವನ್ನು ಬೇರೆ ಯೋಜನೆಗೆ ಬಳಸುವ ನಿರ್ಧಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯ
ಚಿತ್ರದುರ್ಗದಲ್ಲಿ ಅಪ್ರಾಪ್ತ ದಲಿತ ಹೆಣ್ಣು ಮಗಳ ಅತ್ಯಾಚಾರ, ಹತ್ಯೆ ಪ್ರಕರಣ, ಉಡುಪಿಯಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಜಾಹೀರಾತು

ಬೆಂಗಳೂರಿನ ಪಶ್ಚಿಮ ವಲಯ ಡಿಸಿಪಿ ಲಕ್ಷ್ಮಣ್ ನಿಂಬರಗಿ ವಿಜಯನಗರ ಠಾಣೆಗೆ ಭೇಟಿ ನೀಡಿದಾಗ ಅಲ್ಲಿನ ಇನ್ಸ್ಸ್ಪೆಕ್ಟರ್ ಡಿ. ಸಂತೋಷ್ ಕುಮಾರ್ ಕುಳಿತುಕೊಳ್ಳುವ ಕುರ್ಚಿಯನ್ನು ತೆಗೆಸಿ ಬೇರೆ ಕುರ್ಚಿ ಹಾಕಿಸಿಕೊಂಡು ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದ್ದು, ಇವರನ್ನು ಸೇವೆಯಿಂದ ವಜಾಗೊಳಿಸಿ ಪರಿಶಿಷ್ಟ ಜಾತಿ,ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಮತ್ತು ದೌರ್ಜನ್ಯ ನಡೆದಿದ್ದು, ರಾಷ್ಟ್ರಪತಿ ಮಧ್ಯಪ್ರವೇಶಿಸಿ ದೌರ್ಜನ್ಯ ತಡೆಗೆ ಅಲ್ಲಿನ ಮುಖ್ಯಮಂತ್ರಿಗಳಿಗೆ ನಿರ್ದೇಶನ ಮಾಡಬೇಕು ಎಂದು ಆಗ್ರಹಿಸಿದರು

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ಕದಂಬಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಮುಖಂಡರಾದ ಡಿ.ಕೆ.ಅಂಕಯ್ಯ, ಎಂ. ಶಿವು, ಅಣ್ಣೂರು ರಾಜಣ್ಣ, ಉಮೇಶ್ ಉಮ್ಮಡಹಳ್ಳಿ, ಶ್ರೀನಿವಾಸ್, ಬೆಸಗರಹಳ್ಳಿ ರಂಗಸ್ವಾಮಿ, ನಿರಂಜನ್ ಬೌದ್ಧ, ಜಯಶಂಕರ, ಗುರುಶಂಕರ, ಥಾಮಸ್ ಬೆಂಜಮಿನ್ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!