ನಮ್ಮ ಮಂಡ್ಯದ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸುತ್ತಿರುವ ನಾಗಮಂಗಲದ ಕನ್ನಡ ಸಂಘವು ಈ ಬಾರಿಯ ನಾಟಕೋತ್ಸವದಲ್ಲಿ ನಾವು ನೋಡಲೇಬೇಕಾದ ಡಾ.ಕೆ.ರಾಮಕೃಷ್ಣಯ್ಯ ನಿರ್ದೇಶನ, ಪ್ರಸ್ತುತಿ ಕಲಾಮೈತ್ರಿ, ಬೆಂಗಳೂರು ವತಿಯಿಂದ ಪ್ರದರ್ಶನಗೊಳ್ಳುತ್ತಿರುವ ದಾರಾಶಿಕೋ ನಾಟಕವನ್ನು ಇಂದು (ನವೆಂಬರ್ 29ರಂದು) ಆಯೋಜಿಸಿದೆ.
ದಾರಾಶಿಕೋ
ಮೊಗಲ್ ಸಾಮ್ರಾಜ್ಯದ ಸುಲ್ತಾನ ಶಹಜಹಾನ್ ನ ಹಿರಿಯ ಮಗ ರಾಜಕುಮಾರ ದಾರಾಶಿಕೋ ಒಬ್ಬ ಕವಿ, ದಾರ್ಶನಿಕ, ಅನುವಾದಕ ಸೂಫಿ. ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮಗಳ ಒಳಿತನ್ನು ಸಂಗಮಿಸಿಕೊಂಡ ಅನುಭಾವಿ. ರಾಜಕೀಯ ಪಿತೂರಿಯಿಂದಾಗಿ ಭಿಕಾರಿಯಾಗಿ ತಮ್ಮನಾದ ಔರಂಗಜೇಬನಿಂದ ಬಂಧಿಯಾಗಿ ಜ್ಯಾತ್ಯಾತೀತ ನಿಲುವಿನಿಂದಾಗಿ ಹತನಾದ ದುರಂತ ನಾಯಕನ ಕಥೆ ಈ ನಾಟಕದ ವಸ್ತು.
ನಾನು ಮೊದಲ ಬಾರಿಗೆ ಈ ಹೆಸರು ಕೇಳಿದ್ದು ಕಮಲೇಶ್ವರ್ ಅವರ ‘ಕಿತನೇ ಪಾಕಿಸ್ತಾನ್’ ಕಾದಂಬರಿಯಲ್ಲಿ. ಇದು ನನ್ನ All time favorite ಪುಸ್ತಕಗಳಲ್ಲಿ ಒಂದು. ನಾಲ್ಕೈದು ಬಾರಿ ಮತ್ತೆ ಮತ್ತೆ ಓದಿದ್ದೇನೆ. ‘ನೀನು ಒಳ್ಳೆಯವನಾಗಿದ್ದರೆ ಬದುಕೋದು ಕಷ್ಟ ಗುರೂ.. ಬದುಕೋದು ಕಲಿ’ ಅಂದಾಗಲೆಲ್ಲಾ ನನಗೆ ಈ ದಾರಾಶಿಕೋ ನೆನಪಾಗುತ್ತಾನೆ.
ನಿಮಗೆಲ್ಲ ತಾಜಮಹಲ್ ಗೊತ್ತಲ್ಲವೆ? ಅದನ್ನು ಕಟ್ಟಿಸಿದ ಷಹಜಹಾನನ ಹಿರಿಯ ಮಗ ಈ ದಾರಾಶಿಕೋ. ಕೆಲವು ಕಾಲ ದಿಲ್ಲಿಯ ಮೊಗಲ್ ಚಕ್ರಾಧಿಪತಿ ಆಗಿದ್ದವನು. ಹಿಂದೂ ~ ಮುಸ್ಲಿಂ ಭಾವೈಕ್ಯತೆಗಾಗಿ ಹಂಬಲಿಸಿದವನು. ಭಗವದ್ಗೀತೆ, ಉಪನಿಷತ್ತುಗಳ ಸಾಲುಗಳನ್ನು ಪ್ರೀತಿಸಿದವನು. ಇದೇ ಕಾರಣಕ್ಕೆ ಇಸ್ಲಾಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದವನು. ಕಡೆಗೆ ಸ್ವಂತ ತಮ್ಮನಿಂದಲೇ ಹತ್ಯೆಗೀಡಾದವನು.

ಬಹುಶಃ ಅವತ್ತು ಔರಂಗಜೇಬನ ಬದಲಾಗಿ ದಾರಾಶಿಕೋನ ಕೈ ಮೇಲಾಗಿದ್ದರೆ ಭಾರತದ ಇತಿಹಾಸ ಇಷ್ಟು ಕ್ರೂರವಾಗಿರುತ್ತಿರಲಿಲ್ಲ. ಇಂದು ಸಂಜೆ ಕನ್ನಡ ಸಂಘ ಈ ನಾಟಕ ಪ್ರದರ್ಶಿಸುತ್ತಿದೆ. ಯಾಕೆ ಗೊತ್ತೇ..? ಕೋಮುಗಲಭೆಯಿಂದ ಘಾಸಿಗೊಂಡ ನಾಗಮಂಗಲದ ಜನತೆ ಇತಿಹಾಸದ ಈ ಮಹಾಪುರುಷನನ್ನು ತಿಳಿಯಲಿ ಎಂದು. ಈ ಬಾರಿಯ ಎಲ್ಲ ನಾಟಕಗಳೂ ಇದೇ ಛಾಯೆಯನ್ನು ಹೊಂದಿವೆ. ಮನುಕುಲದ ನೋವಿಗೆ ಮದ್ದಾಗುವಂತಿವೆ.
ಸಂಜೆ 7ಕ್ಕೆ ದಾರಾಶಿಕೋನನ್ನು ಕಣ್ತುಂಬಿಕೊಳ್ಳಿ.
~ಅರವಿಂದ ಪ್ರಭು
🍁 ಚಿತ್ರಕೂಟ




