Thursday, September 19, 2024

ಪ್ರಾಯೋಗಿಕ ಆವೃತ್ತಿ

”ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬುದು ಏನನ್ನು ಹೇಳಲು ಹೊರಟಿದೆ….

✍️ ಪೂರ್ಣಿಮ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಜನಶಕ್ತಿ

‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ….’ ಬದಲಿಗೆ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂಬ ನಾಮಫಲಕದ ಬದಲಾವಣೆಯ ಕುರಿತ ಚರ್ಚೆಯನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ… ಇದಕ್ಕೆ ನನ್ನ ಅಭಿಪ್ರಾಯ ಮತ್ತು ಕೆಲವು ಪ್ರಶ್ನೆಗಳು….ಕೆಳಕಂಡಂತಿವೆ….

ಈಗ ಜ್ಞಾನ ದೇಗುಲದಲ್ಲಿ ಕೈ ಮುಗಿದು ಒಳ ಬಂದು ಸರಿತಪ್ಪುಗಳನ್ನು ಚರ್ಚಿಸುವುದು ಸರಿಯಾದ ಶಿಕ್ಷಣದ ಮಾದರಿಯಲ್ಲವೇ ?

ಜ್ಞಾನ ದೇಗುಲದಲ್ಲಿ ಪ್ರಶ್ನಿಸುವುದನ್ನು, ಸರಿ ತಪ್ಪುಗಳ ಚರ್ಚೆ ನಡೆಸುವುದನ್ನು ಕಲಿಸಬೇಕಲ್ಲವೆ…? ಪ್ರಶ್ನಿಸಿ ಅಂತಾ ಹೇಳಿಕೊಟ್ಟರೆ ನಿಮಗೆ ಉರಿಯಾಕ್ರಪ್ಪಾ. ಯಾಕೆ ಮಕ್ಕಳಿಗೆ ತಪ್ಪು ಹೇಳಿ ಕೊಡುವವರ ಬಂಡವಾಳ ಬಯಲಾಗುತ್ತೆ ಅಂತಾ ಈಗಲೆ ಭಯವೆ…? ಇಲ್ಲವೇ ನಿಮ್ಮ ನಾಟಕ ಮಂಡಳಿಯ ಅಜೆಂಡಾಗಳು ಫಲಿಸದೆ ಹೋದರೆ ಅನ್ನುವ ಗಾಬರಿಯೋ…?

ಕುವೆಂಪುರವರು ಬರೆದಿರುವ ಸಾಲನ್ನು ಬದಲಿಸಲಾಗಿದೆ, ಅವಮಾನ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವ ಮಾಧ್ಯಮಗಳಾ..? ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚಿ ಕೋಮು ಗಲಭೆ ಎಬ್ಬಿಸುವಾಗ ಮಕ್ಕಳಲ್ಲಿ ಭೇದ ಭಾವದ ಭಾವನೆಯನ್ನು ತುಂಬುವಾಗ ಅದು ಕುವೆಂಪು ಅವರ ಆಶಯಕ್ಕೆ ಧಕ್ಕೆ ತಂದಂಗೆ ಅಂತಾ ನಿಮಗೆ ಅನ್ನಿಸಲೆ ಇಲ್ಲ,ಅಲ್ಲವೇ…?

ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನವನ್ನೇ ಬದಲಿಸುತ್ತೇವೆ ಅಂತ, ಸಂವಿಧಾನ ವಿರೋಧಿಗಳು ಹೇಳಿಕೆ ಕೊಟ್ಟಾಗ, ನಿಮ್ಮ ಮಾಧ್ಯಮಗಳ ಗಂಟಲು ಮುಚ್ಚಿಹೋಗಿತ್ತು ಅಲ್ಲವಾ..? ಅಥವಾ ತಲೆಯಲ್ಲಿ ಇರುವ ಬುದ್ದಿ ಸಗಣಿ ತಿನ್ನಲು ಹೋಗಿತ್ತಾ..?

ಕುವೆಂಪುರವರ ಆಶಯವೆಂದರೆ ಮತೀಯ ಭ್ರಾಂತಿಗಳಿಗೆ ಒಳಗಾಗದೆ, ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ ಎಂಬುದಾಗಿದೆ. ಜ್ಞಾನ ದೇಗುಲಕ್ಕೆ ಕೈ ಮುಗಿದು ಒಳ ಬನ್ನಿ… ಅಂದರೆ ಶಾಲೆಯ ಕ್ಲಾಸ್ ರೂಂಗಳು ತಾರತಮ್ಯವಿಲ್ಲದ, ಸೌಹಾರ್ದತೆ ಇರುವ ಜಾಗ ಎಂಬ ನಂಬಿಕೆಯ ಮೇಲೆ ಈ ಮಾತನ್ನು ಹೇಳಿದ್ದಾರೆ. ಆದರೆ ಈಗ ಆ ಜಾಗಗಳನ್ನು ಮತೀಯವಾದದ ಅವಿವೇಕಿಗಳು ಆವರಿಸಿಕೊಂಡು ಮಕ್ಕಳ ಕಲಿಕೆ ಮತ್ತು ಅವರ ಜೀವನವನ್ನು ಕೋಮುವಿನ ಪ್ರಯೋಗ ಶಾಲೆ ಮಾಡುತ್ತಿರುವಾಗ, ಸುಮ್ಮನೆ ಕೈ ಕಟ್ಟಿ ಕೂರಲು ಸಾಧ್ಯವೇ..?

ಮಕ್ಕಳನ್ನು ಜಾಗೃತೆಗೊಳಿಸುವ ನೈತಿಕ ಜವಾಬ್ದಾರಿ ಮಾಧ್ಯಮಗಳು ಸೇರಿದಂತೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರು ಮಾಡಬೇಕಾದ ಕೆಲಸವಾಗಿದೆ. ಆದರೆ ದುರದೃಷ್ಟಕರ ನಮ್ಮ ದೇಶದ ಮತ್ತು ರಾಜ್ಯದ ಮಾಧ್ಯಮಗಳು ಬಂಡವಾಳಿಗರಿಗೆ ಕೋಮುವಾದಿಗಳಿಗೆ ಮಾರಾಟವಾಗಿರುವುದರಿಂದ ಇದನ್ನು ನಿರೀಕ್ಷಿಸುವುದು ವಾಸ್ತವಕ್ಕೆ ದೂರವಾದ ಮಾತು.

ನಮ್ಮ ಪ್ರಧಾನಿಗಳು ದೇವಾಲಯಗಳಿಗಿಂತ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಮಾನ್ಯತೆ ಕೊಡಬೇಕಲ್ಲವೇ ? ಈ ದೇಶ, ಮಂದಿರ, ಮಸೀದಿ, ಚರ್ಚುಗಳಿಂದ ಪ್ರಗತಿ ಸಾಧಿಸುವುದಿಲ್ಲ, ಬದಲಿಗೆ ಶಿಕ್ಷಣದ ಕ್ರಾಂತಿಯಿಂದ ಮಾತ್ರ ಪ್ರಗತಿ ಸಾಧ್ಯ. ಭಾರತ ವಿಶ್ವಕ್ಕೆ ಗುರುವಾಗಲು ಸಾಧ್ಯ ಎಂಬುದನ್ನು ಪ್ರಗತಿಪರ ಬೆರಳೆಣಿಕೆಯ ಮಾಧ್ಯಮಗಳನ್ನು ಬಿಟ್ಟರೆ ಉಳಿದ ಯಾವ ಮಾಧ್ಯಮಗಳು ಹೇಳುವುದಿಲ್ಲ….

ಈ ದೇಶದ ಪ್ರಧಾನಿ ಸಮರ್ಥ ವಿಚಾರಗಳಿಗೆ ಪತ್ರಿಕಾಗೋಷ್ಠಿ ನಡೆಸಿ 10 ವರ್ಷಗಳು ಗತಿಸಿ ಹೋಗಿವೆ… ವಿದ್ಯಾರ್ಥಿ ಯುವ ಜನರೊಟ್ಟಿಗೆ ಶಿಕ್ಷಣಕ್ಕೆ ಸಂಬಂದಿಸಿದ ಚರ್ಚೆಗಳನ್ನು ನಡೆಸಿಲ್ಲ… ಇದ್ಯಾವುದು ದೊಡ್ಡದಾಗಿ ಕಾಣಿಸೊದಿಲ್ಲ… ಗೋದಿ ಮೀಡಿಯಾ (ಮಾರಾಟವಾದ ಮಾಧ್ಯಮಗಳು)ಗಳಿಗೆ, ಬದಲಿಗೆ ದೇವಸ್ಥಾನದ ಮುಂದೆ ಕಸ ಹೊಡೆಯುವುದನ್ನು ಬಹಳ ವಿಜೃಂಭಣೆಯಿಂದ ತೋರಿಸಲಾಗುತ್ತದೆ… ಅಂದರೆ ನಾಚಿಕೆ ಅನ್ನಿಸೋದಿಲ್ವೆ..? ಇದನ್ನೆಲ್ಲಾ ನಾವು ಪ್ರಶ್ನಿಸಿದರೆ ನಮ್ಮನ್ನು ಧರ್ಮ ವಿರೋಧಿಗಳು ಅಂತಾ ಹಣೆ ಪಟ್ಟಿ ಕಟ್ಟೊದು….ಆದರೆ ನಾವು ಯಾರ ವಿರೋಧಿಗಳು ಅಲ್ಲಾ, ನಾವು ಕೋಮುವಾದ ಮತ್ತು ಮೌಢ್ಯದ ವಿರೋಧಿಗಳು.

ಗುಲಾಮರಂತೆ ಹೌದಪ್ಪಗಳಾಗಿ ಬದುಕುವುದು ಬೇಡ, ವೈಚಾರಿಕಾವಗಿ ಆಲೋಚಿಸಿ, ತಪ್ಪನ್ನು ಹೇಳಿಕೊಡುವವರು ತಂದೆ ತಾಯಿಗಳಾಗಲಿ, ಗುರುಗಳಾಗಲಿ ನಮ್ಮ ಅವಿವೇಕಿ ರಾಜಕಾರಣಿಗಳಾಗಲಿ ಪ್ರಶ್ನೆ ಮಾಡಿ, ಪರಿಶೀಲಿಸಿ, ಚಿಂತನೆಗಳಿಗೆ ಒಳಪಡಿಸಿ ಒಪ್ಪಿಕೊಳ್ಳಬೇಕಲ್ಲವೇ ? ಯಾಕೆಂದರೆ ಇವತ್ತಿನ ಮಕ್ಕಳೇ ನಾಳಿನ ಪ್ರಜೆಗಳು, ಇವತ್ತಿನ ಯುವ ಸಮುದಾಯವೇ ನಾಳಿನ ಸರ್ಕಾರಗಳು, ಆಗಿದ್ದ ಮೇಲೆ ಜಾಗೃತೆ ಬೇಕಲ್ಲವೇ..? ಇಲ್ಲವಾದರೆ ಇವತ್ತಿನ ಕೆಲವು ಅವಿವೇಕಿಗಳಂತೆ ಬರಿ ಹೌದಪ್ಪಗಳಾದರೆ ಇನ್ನೂ ವಿದ್ಯೆ ಇಲ್ಲದ ತಲೆಯಲ್ಲಿ, ಬುದ್ದಿ ಇಲ್ಲದ ರಾಜಕಾರಣಿಗಳನ್ನು ಆಯ್ಕೆ ಮಾಡುತ್ತಾ… ಇವರಾಡುವ ದೊಂಬರಾಟದಲ್ಲಿ ನಿರುದ್ಯೋಗ, ಹಸಿವು ಬಡತನ, ದೌರ್ಜನ್ಯ, ದಬ್ಬಾಳಿಕೆ ಅತ್ಯಾಚಾರ ಇಂತವುದ್ದರ ವಿರುದ್ದ ಪ್ರಶ್ನೆಮಾಡದೇ… ಯುವ ಜನತೆ ಇದಕ್ಕೆಲ್ಲ ನಮ್ಮ ಹಣೆಬರಹ ಕಾರಣ ಅಂತ, ತಮ್ಮನ್ನು ತಾವೇ ಹೊಣೆ ಮಾಡಿಕೊಂಡು, ಯೋಚಿಸುವ ಶಕ್ತಿಯನ್ನು ಕಳೆದು ಕೊಂಡು ದೇವಸ್ಥಾನಗಳ ಮುಂದೆ ಕಸ ಪೊರಕೆ ಹಿಡಿದು, ಭಿಕ್ಷಾಪಾತ್ರೆಗಳನ್ನಿಡುದು ಕೂರಬೇಕಾಗುತ್ತೆ….

ದೇಶದ ಉನ್ನತಿ ಇರುವುದು ಗುಣಮಟ್ಟದ ಶಿಕ್ಷಣದಲ್ಲಿ, ವೈಚಾರಿಕ ಆಲೋಚನೆಯಲ್ಲಿ ಮತ್ತು ಪ್ರಜೆಗಳ ಸೇವೆಯಲ್ಲಿ…. ಇದೆಲ್ಲವೂ ಸರಿಯಾಗಿ ಸಿಗಬೇಕಾದರೆ ಪ್ರಶ್ನಿಸುವುದು ಬಹಳ ಅಗತ್ಯವಾಗಿದೆ. ಹಾಗಾಗಿ ವಿದ್ಯಾಲಯಗಳ ಮುಂದೆ ”ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ನಾಮಫಲಕಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸರ್ಕಾರದ ಈ ಚಿಂತನೆಯನ್ನು ಎಲ್ಲರೂ ಬೆಂಬಲಿಸಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!