Friday, October 18, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ : ₹4 ಕೋಟಿ ದುರ್ಬಳಕೆ ಮಾಡಿದವರಿಂದಲೇ ಹಣ ವಸೂಲಿ – ದರ್ಶನ್ ಪುಟ್ಟಣ್ಣಯ್ಯ

ಪಾಂಡವಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದುರ್ಬಳಕೆಯಾಗಿರುವ 4 ಕೋಟಿಗೂ ಹೆಚ್ಚಿನ ಹಣವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಷೇರುದಾರರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು,‌
ಕಸಬಾ ಸೊಸೈಟಿಯಲ್ಲಿ ಷೇರುದಾರರು ಅಡವಿಟ್ಟಿದ್ದ ಚಿನ್ನಾಭರಣ, ಫಿಗ್ಮಿ ಮತ್ತು ಷೇರುದಾರರ ಡೆಫಾಸಿಟ್ ಹಣ ಸೇರಿದಂತೆ ಇತ್ಯಾದಿ ಹಣ ದುರ್ಬಳಕೆ ಆಗಿದೆ ಎಂಬ ದೂರುಗಳು ಕೇಳಿ ಬಂದ ತಕ್ಷಣ ವಸೂಲಾತಿ ಮತ್ತು ಅಗತ್ಯ ಕ್ರಮಕ್ಕೆ ಮುಂದಾಗಿದ್ದೇನೆ ಎಂದರು

ಸಹಕಾರ ಇಲಾಖೆಯ ಸಹಾಯಕ ನಿಬಂಧಕರಿಂದಲೂ ಈ ಬಗ್ಗೆ ಮಾಹಿತಿ ಕೇಳಲಾಗಿದೆ. ಪಟ್ಟಣದ ಡಿಸಿಸಿ ಬ್ಯಾಂಕ್ ಲಾಕರ್‌ನಲ್ಲಿ ಷೇರುದಾರರು ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಲಾಕರ್‌ನಿಂದ ತೆಗೆದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಡಲಾಗಿದೆ ಎಂದು ತಿಳಿದು ಬಂದಿದೆ. ಖಾಸಗಿ ಸಂಸ್ಥೆಗಳು ಸಹಕಾರ ಸಂಘಗಳಿಗಿಂತಲೂ ಚಿನ್ನಕ್ಕೆ ಹೆಚ್ಚಿನ ಹಣ ನೀಡುತ್ತವೆ ಎಂಬ ಕಾರಣಕ್ಕೆ ಲಾಕರ್‌ನಲ್ಲಿದ್ದ ಚಿನ್ನವನ್ನು ಬೇರೆಡಗೆ ವರ್ಗಾಯಿಸಿ ಅದರಿಂದ ಬಂದ ಹೆಚ್ಚುವರಿ ಹಣವನ್ನು ಕೂಡ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಅಕ್ರಮಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದರು.

ಕೃಷಿ ಪತ್ತಿನ ಸಹಕಾರ ಸಂಘ ಮಾತ್ರವಲ್ಲದೇ ಹಲವಾರು ಸಹಕಾರ ಸಂಘ ಸಂಸ್ಥೆಗಳಲ್ಲಿಯೂ ಹಣ ದುರ್ಬಳಕೆ ಆಗುತ್ತಿದೆ. ಹೀಗಾಗಿ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಹಣಕಾಸು ವಹಿವಾಟನ್ನು ತನಿಖೆ ಮಾಡಿ ವರದಿ ನೀಡುವಂತೆ ಡಿಆರ್ ಮತ್ತು ಅಆರ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಮತ್ತು ನೌಕರರ ವರ್ಗ ಸಾರ್ವಜನಿಕರ ಹಣವನ್ನು ತಮ್ಮ ಮನೆಯ ಹಣದಂತೆ ಬಳಸಿಕೊಳ್ಳುವುದು ಬಿಡಬೇಕು. ಸಹಕಾರ ಕ್ಷೇತ್ರ ಉಳಿದರೆ ಮಾತ್ರ ಜನರಿಗೆ ಆರ್ಥಿಕವಾಗಿ ಬಲ ತುಂಬಲು ಸಾಧ್ಯವಾಗುತ್ತದೆ. ಹೀಗಾಗಿ ರಾಜಕೀಯವನ್ನು ಬದಿಗಿಟ್ಟು ಸಮಗ್ರ ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ಕಸಬಾ ಸೊಸೈಟಿಯಲ್ಲಿ ದುರ್ಬಳಕೆಯಾಗಿರುವ ಹಣ ವಸೂಲಾತಿ ಜತೆಗೆ ಯಾರೇ ಆಗಲೀ
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ನಿವೇಶನಗಳ ಅಕ್ರಮ ಕಬಳಿಕೆ ವಿರುದ್ಧ ಸಿಒಡಿ ತನಿಖೆ : ಪುರಸಭೆ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ 2 ಸಾವಿರಕ್ಕೂ ಹೆಚ್ಚಿನ ನಿವೇಶನಗಳ ಅಕ್ರಮ ಕಬಳಿಕೆ ಮತ್ತು ಅವ್ಯವಹಾರಗಳನ್ನು ರಾಜ್ಯ ಸರ್ಕಾರ ಸಿಒಡಿ ತನಿಖೆಗೆ ಆದೇಶಿಸಿದ್ದು, ಅದರಂತೆ ಪೊಲೀಸರು ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪಾಂಡವಪುರ ಪಟ್ಟಣ ವ್ಯಾಪ್ತಿಯಲ್ಲಿ ೧೯೭೬ರಿಂದ ಇಲ್ಲಿಯವರೆಗೆ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಪುರಸಭೆ ಆಡಳಿತ ಮಂಡಳಿ ಮತ್ತು ಆಶ್ರಯ ಸಮಿತಿ ಮೂಲಕ ಸುಮಾರು ೨೫೦೦ಕ್ಕೂ ಹೆಚ್ಚು ನಿವೇಶನಗಳನ್ನು ವಿತರಿಸಲಾಗಿದೆ. ಆದರೆ ಇದರಲ್ಲಿ ಬಹುತೇಕ ನಿವೇಶನಗಳನ್ನು ಪ್ರಭಾವಿಗಳು ಅಕ್ರಮವಾಗಿ ಕಬಳಿಸಿದ್ಧಾರೆ ಮತ್ತು ಒಂದೇ ನಿವೇಶನಕ್ಕೆ ಎರಡ್ಮೂರು ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಮೂಲ ಫಲಾನುಭವಿಗಳನ್ನು ವಂಚಿಸಲಾಗಿದೆ. ಇದರಿಂದ ಸಾಕಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದು, ಇಡೀ ಪ್ರಕರಣವನ್ನು ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ಪಟ್ಟಣದಲ್ಲಿ ನಿವೇಶನ ಖರೀದಿಸುವ ಜನರು ದಾಖಲೆಗಳನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಖರೀದಿಸಬೇಕು. ಜನರಿಗೆ ಅನ್ಯಾಯವಾಗಬಾರದು ಎಂಬ ದೃಷ್ಠಿಯಿಂದ ನಿವೇಶನ ನೋಂದಣಿಗೂ ಮುನ್ನ ಪುರಸಭೆಯಿಂದ ಎನ್‌ಒಸಿ ಪಡೆದುಕೊಳ್ಳುವಂತೆ ಸಬ್‌ರಿಜಿಸ್ಟರ್ ಅವರಿಗೆ ಸೂಚಿಸಲಾಗಿದೆ. ನಿವೇಶನಗಳ ಅರ್ಹ ಫಲಾನುಭವಿಗಳು ನಿವೇಶನ ಕಳೆದುಕೊಂಡಿದ್ದರೆ ಅವರಿಗೆ ನಿವೇಶನವನ್ನು ಹಿಂದಿರುಗಿಸಲು ಕ್ರಮ ವಹಿಸಲಾಗುವುದು. ಸಿಒಡಿ ತನಿಖೆ ಬಳಿಕ ಇಡೀ ಪಟ್ಟಣವನ್ನು ಸರ್ವೇ ಮಾಡಿಸಿ ಮುಂದೆ ಅಕ್ರಮ ನಡೆಯದಂತೆ ತಡಗಟ್ಟಲಾಗುವುದು ಎಂದರು.

ಪುರಸಭೆ ವ್ಯಾಪ್ತಿಯಲ್ಲಿ ಹಂಚಿರುವ ನಿವೇಶನ
ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಕಾನೂನು ಕ್ರಮ ಖಚಿತ ಎಂದರಲ್ಲದೇ ತಾಲೂಕಿನಾದ್ಯಂತ ಕೆರೆ, ಕಟ್ಟೆ ಮತ್ತು ಹಳ್ಳಗಳನ್ನು ಒತ್ತುವರಿ ಮಡಿಕೊಂಡಿರುವವರು ತಾವಾಗಿಯೇ ಒತ್ತುವರಿ ತೆರವುಗೊಳಿಸಬೇಕು ನಿಮಗಾಗಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಂತರ್ಜಲ ಕಾಪಾಡಬೇಕಿದೆ. ಹೀಗಾಗಿ ಒತ್ತುವರಿ ತೆವುಗೊಳಿಸಿ ಕೆರೆ ಕಟ್ಟೆ ಉಳಿಸಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ಚಿಕ್ಕಾಡೆ ಹರೀಶ್, ಸಿ.ಎನ್.ವಿಜೇಂದ್ರ, ಉಮಾಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!