Friday, September 20, 2024

ಪ್ರಾಯೋಗಿಕ ಆವೃತ್ತಿ

ನನ್ನ ಮೌಲ್ಯ ಸತ್ತ ಮೇಲೆ ತಿಳಿಯುತ್ತೆ ಎಂದು ಹೇಳಿದ್ದ ರೈತ ನಾಯಕ ಪುಟ್ಟಣ್ಣಯ್ಯ : ತಂದೆಯನ್ನು ನೆನೆದು ಭಾವುಕರಾದ ದರ್ಶನ್ ಪುಟ್ಟಣ್ಣಯ್ಯ

`ನನ್ನ ಮೌಲ್ಯ ನಾನು ಸತ್ತ ಮೇಲೆ ನಿನಗೆ ತಿಳಿಯುತ್ತೆ ಎಂದು ಪುಟ್ಟಣ್ಣಯ್ಯ ಯಾವಾಗಲು ಹೇಳುತ್ತಿದ್ದರು. ಅದರಂತೆ ಅವರು ನಿಧನರಾದ 5 ವರ್ಷಗಳ ನಂತರ ನನಗೆ ಅವರ ಮೌಲ್ಯ ಅರ್ಥವಾಗುತ್ತಿದೆ’ ಎಂದು ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಭಾವುಕರಾಗಿ ತಂದೆಯ ಅಗಲಿಕೆಯ ನೋವನ್ನು ಹಂಚಿಕೊಂಡರು.

ಪುಟ್ಟಣ್ಣಯ್ಯ ಅವರ 5ನೇ ಪುಣ್ಯಸ್ಮರಣೆಯ ಅಂಗವಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕ್ಯಾತನಹಳ್ಳಿಯಲ್ಲಿ ಶನಿವಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆಯ ಜೊತೆಗಿನ ಒಡನಾಟವನ್ನು ನೆನೆದು ಭಾವುಕರಾದರು.

ಪುಟ್ಟಣ್ಭಯ್ಯ ಅವರು ಮಾಡಿದ ಕೆಲಸಗಳು ಚಿರಸ್ಥಾಯಿಯಾಗಿವೆ. ರಾಜ್ಯ ಉದ್ದಗಲಕ್ಕೂ ಬೆಳಗಾವಿ, ಬಾಗಲಕೋಟೆಯಿಂದೆಲ್ಲ ಕರೆ ಮಾಡಿ ತಮ್ಮನ್ನು ಹೋರಾಟಕ್ಕೆ ಆಹ್ವಾನಿಸುತ್ತಿದ್ದಾರೆ. ಈಗಾಗಲೇ ಹೋರಾಟದಲ್ಲಿ ನಿರತರಾಗಿರುವ ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ. ಪುಟ್ಟಣ್ಣಯ್ಯ ಅವರ ಆದರ್ಶ ಹಾಗೂ ಹೋರಾಟದ ಗುಣಗಳನ್ನು ಅಳವಡಿಸಿಕೊಂಡು ನಾವು ಹೋರಾಟ ಮಾಡಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರು ಹೃದಯ ಶ್ರೀಮಂತಿಕೆಯಿಂದ ರೈತರು ಹಾಗೂ ದುಡಿಯುವ ವರ್ಗದ ಧ್ವನಿಯಾಗಿದ್ದರು. ತಮ್ಮ ಇಡೀ ಜೀವಮಾನವನ್ನೆ ಹೋರಾಟಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ 5ನೇ ಪುಣ್ಯಸ್ಮರಣೆಯಂದು ಒಂದು ದೊಡ್ಡ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಇಂದು ಶಿವರಾತ್ರಿಯಾದ್ದರಿಂದ ಅದು ಸಾಧ್ಯವಾಗಿಲ್ಲ. ಮಾರ್ಚ್ ನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಇಂದೂ ಕ್ಷೇತ್ರದಲ್ಲಿ ಎಲ್ಲೆ ಹೋದರೂ ಪುಟ್ಟಣ್ಣಯ್ಯನವರು ಇರಬೇಕಿತ್ತು ಎಂದು ಜನರು ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಅವರು ರಾಜ್ಯದ ರೈತರ ಆಶಾಕಿರಣವಾಗಿದ್ದರು. ಅವರ ನಿಧನ ನಂತರ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯನವರನ್ನು ಅವರ ಜಾಗಕ್ಕೆ ತರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಾವೆಲ್ಲ ಅದಕ್ಕಾಗಿ ದುಡಿಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!