ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಭಾಗಶಃ ಜಖಂ ಗೊಂಡಿದೆ.
1ರಿಂದ 5ನೇ ತರಗತಿಯಿರುವ ಗ್ರಾಮದ ಶಾಲೆಯ ಆವರಣದಲ್ಲಿ ಬೆಳೆದಿದ್ದ ತೆಂಗಿನ ಮರ ಬಿರುಗಾಳಿ ರಭಸಕ್ಕೆ ಶಾಲೆಯ ಹೆಂಚಿನ ಮೇಲೆ ಉರುಳಿದ ಪರಿಣಾಮವಾಗಿ ಕಟ್ಟಡ ಜಖಂಗೊಂಡಿದೆ. ಹೆಂಚುಗಳು ಪುಡಿ ಪುಡಿಯಾಗಿ ಕಟ್ಟಡಕ್ಕೂ ಹಾನಿಯಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
ಶಾಲೆ ಆರಂಭವಾಗುವಷ್ಟರಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು, ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಒಟ್ಟುಗೂಡಿ ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಸಿದರು.
ಗ್ರಾಮದ ಬಸವೇಗೌಡ, ರಾಜು, ನಂಜುಂಡ, ದೇವರಾಜ್, ಸ್ವಾಮಿ, ಶಂಕರಪ್ಪ, ಪರಮೇಶ್ ಗ್ರಾಮದ ಮುಖಂಡರಿದ್ದರು.