Tuesday, September 17, 2024

ಪ್ರಾಯೋಗಿಕ ಆವೃತ್ತಿ

ಜಮ್ಮುವಿನಲ್ಲಿ ನದಿಗೆ ಹಾರಿದ್ದ ಯುವಕನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆ

ಜಮ್ಮು ಮತ್ತು ಕಾಶ್ಮೀರದ ಜಮ್ಮುವಿನಲ್ಲಿ ಕಳೆದ ತಿಂಗಳು ಚೆನಾಬ್ ನದಿಗೆ ಹಾರಿ ಸಾವನ್ನಪ್ಪಿದ ಯುವಕನ ಮೃತದೇಹವು ಪಾಕಿಸ್ತಾನದಲ್ಲಿ ಪತ್ತೆಯಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಂತ್ಯಕ್ರಿಯೆಗಾಗಿ ಆತನ ಮೃತದೇಹವನ್ನು ಭಾರತಕ್ಕೆ ತರಿಸಿಕೊಡಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಯುವಕನ ಕುಟುಂಬವು ಕೋರಿದೆ.

ಜಮ್ಮುವಿನ ಅಖ್ನೂರ್ ವಲಯದ ಗಡಿ ಗ್ರಾಮದ ನಿವಾಸಿ ಹರಶ್ ನಗೋತ್ರಾ ಜೂನ್ 11ರಂದು ನಾಪತ್ತೆಯಾಗಿದ್ದರು. ಆತನ ಮೋಟಾರ್ ಸೈಕಲ್ ನದಿಯ ದಡದಲ್ಲಿ ಪತ್ತೆಯಾಗಿತ್ತು. ಮರುದಿನ, ಯುವಕನ ಕುಟುಂಬವು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿತ್ತು.

ಖಾಸಗಿ ಟೆಲಿಕಮ್ಯುನಿಕೇಷನ್ ಕಂಪನಿಯಲ್ಲಿ ಹರಶ್‌ ಕೆಲಸ ಮಾಡುತ್ತಿದ್ದರು. ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 80,000 ರೂ.ಗಳಿಗೂ ನಷ್ಟ ಅನುಭವಿಸಿದ್ದ ಹರಶ್, ನದಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆತನ ಮೊಬೈಲ್‌ ಸಿಮ್ ಕಾರ್ಡ್ಅನ್ನು ಪೋಷಕರು ಮರುಆಕ್ಟಿವೇಟ್ ಮಾಡಿದ್ದಾರೆ. ಬಳಿಕ, ಪಾಕಿಸ್ತಾನಿ ಅಧಿಕಾರಿಯಿಂದ ವಾಟ್ಸಾಪ್ ಸಂದೇಶದ ಮೂಲಕ ಹರಶ್‌ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ ಎಂದು ವರದಿಯಾಗಿದೆ.

ಜೂನ್ 13ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನ ಕಾಲುವೆಯಲ್ಲಿ ಮೃತದೇಹವನ್ನು ಪಾಕ್ ಅಧಿಕಾರಿಗಳು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆತನ ಚೇಜಿನಲ್ಲಿ ಗುರುತಿನ ಚೀಟಿ ಪತ್ತೆಯಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ಯುವಕನ ತಂದೆ ಸುಭಾಷ್ ಶರ್ಮಾ ಹೇಳಿದ್ದಾರೆ.

“ನನ್ನ ಮಗನ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಮರಳಿ ಭಾರತಕ್ಕೆ ತರಲು ನಮಗೆ ಸಹಾಯ ಮಾಡುವಂತೆ ಪ್ರಧಾನಿ ಮೋದಿ ಅವರನ್ನು ವಿನಂತಿಸುತ್ತೇವೆ. ನಮ್ಮ ಧರ್ಮದ ಪ್ರಕಾರ ಆತನ ಅಂತ್ಯಕ್ರಿಯೆಯನ್ನು ಮಾಡಲು ನಾವು ಬಯಸುತ್ತೇವೆ” ಎಂದು ಶರ್ಮಾ ಹೇಳಿದ್ದಾರೆ.

ಮೃತ ಯುವಕನ ಸಂಬಂಧಿ ಅಮೃತ್ ಭೂಷಣ್ ಅವರು ಈ ವಿಷಯದ ಬಗ್ಗೆ ಈಗಾಗಲೇ ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಹಾಗೂ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!