Friday, September 20, 2024

ಪ್ರಾಯೋಗಿಕ ಆವೃತ್ತಿ

ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಕುಟುಂಬ:ಮಿಮ್ಸ್ ನಲ್ಲಿ ಚಿಕಿತ್ಸೆ

ಸಾಲಕ್ಕೆ ಹೆದರಿ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿದ್ದು,ಅದರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಉಳಿದ ಆರು ಮಂದಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

3 ಮಕ್ಕಳು ಸೇರಿದಂತೆ ಒಟ್ಟು 6 ಮಂದಿಗೆ ಮಿಮ್ಸ್ ವೈದ್ಯರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. 7 ಮಂದಿಯಲ್ಲಿ ಮಂಗಳಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು, ಸವಿತಾ ಎಂಬುವರ ಸ್ಥಿತಿ ಗಂಭೀರವಾಗಿದೆ.ಉಳಿದವರಿಗೆ ಮಿಮ್ಸ್ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಘಟನೆ ವಿವರ
ರಾಮನಗರ ಜಿಲ್ಲೆಯ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ನಡೆದಿರುವ ಹೃದಯ ವಿದ್ರಾಹಕ ಘಟನೆ ಇದಾಗಿದೆ.ಕುಟುಂಬದ 7 ಮಂದಿ ಪೈಕಿ ರಾಜು ಎಂಬಾತನ ಪತ್ನಿ ಮಂಗಳಮ್ಮ(28) ಸಾವನ್ನಪ್ಪಿದ್ದಾರೆ.

ರಾಜು(31), ಸೊಲ್ಲಾಪುರದಮ್ಮ (48), ರಾಜು ಮಕ್ಕಳಾದ ಆಕಾಶ್ (9), ಕೃಷ್ಣ (13), ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ(4) ತೀವ್ರ ಅಸ್ವಸ್ಥರಾಗಿದ್ದು, ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಲಗಾರರ ಕಾಟ
ಬೆಂಗಳೂರಿನಲ್ಲಿ ವಾಸವಿದ್ದ ರಾಜು ಸುಮಾರು 11 ಲಕ್ಷ ರೂ. ಸಾಲ ಮಾಡಿದ್ದ.ಸಾಲಗಾರರು ಬಡ್ಡಿಗೆ ಬಡ್ಡಿ ಹಾಕಿ ಲಕ್ಷಾಂತರ ರೂ.ಸಾಲ ಕಟ್ಟುವಂತೆ ಪ್ರತಿನಿತ್ಯ ಮನೆ ಬಳಿ ಬಂದು ಒತ್ತಡ ಹೇರುತ್ತಿದ್ದರು.ಇದರಿಂದ ಆತ ರಾಮನಗರದ ದೊಡ್ಡಮಣ್ಣುಗುಡ್ಡೆ ಗ್ರಾಮದ ಸೋದರತ್ತೆ ಮನೆಗೆ ಬಂದು ವಾಸವಿದ್ದ.

ಸಾಲಗಾರರ ಕಾಟದಿಂದ ಬೇಸತ್ತು ಸಾಯುವ ನಿರ್ಧಾರ ಮಾಡಿದ್ದ ರಾಜು ಕುಟುಂಬ ಗುರುವಾರ ಮಧ್ಯಾಹ್ನ 2:30ಕ್ಕೆ ಊಟ, ತಿಂಡಿಗಳ ಜೊತೆ ಇಲಿ ಪಾಷಣ ತೆಗೆದುಕೊಂಡು ಊರ ಹೊರಗಿದ್ದ ಮಾವನ ಸಮಾಧಿ ಬಳಿ ಸೇವಿಸಿದ. ಇಲಿ ಪಾಷಾಣ ಸೇವಿಸಿದ ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ತಿಂದಿದ್ದರು.

ಸಾವಿಗಾಗಿ ಕಾದು ಸೋದರ ಮಾವನ ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದ ಕುಟುಂಬ. ಕೆಲ ಹೊತ್ತಿನ ಬಳಿಕ ಮಂಗಳಮ್ಮ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದರು. ಬಳಿಕ ಅಲ್ಲಿಂದ ಹೊರಟು ಊರ‌ ಕಡೆಗೆ ಬಂದಿದ್ದ ಉಳಿದವರು ಗ್ರಾಮದ ಜನರಿಗೆ ವಿಷ ಸೇವಿಸಿರುವುದಾಗಿ ಹೇಳಿದ್ದರು. ಕೂಡಲೇ ಗ್ರಾಮಸ್ಥರು ಆಸ್ಪತ್ರೆಗೆ ದಾಖಲು ಮಾಡಿದರು.

ತಾನು ಮಾತ್ರ ಸತ್ತರೆ ಕುಟುಂಬಸ್ಥರಿಗೆ ಸಾಲಗಾರರ ಕಾಟ ತಪ್ಪುವುದಿಲ್ಲ‌ ಎಂದು ರಾಜು ಎಲ್ಲರಿಗೂ ವಿಷವುಣಿಸುವ ನಿರ್ಧಾರ ಮಾಡಿದ್ದನು ಎಂದು ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!