Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿಗದ ವೇತನ| ಚಂದ್ರಯಾನ-3 ಗೆ ಶ್ರಮಿಸಿದ್ದ ಇಂಜಿನಿಯರ್‌, ಈಗ ಇಡ್ಲಿ ಮಾರಾಟಗಾರ !

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ-3ರ ಮೂಲಕ ಚಂದ್ರನ ಅಂಗಳಕ್ಕೆ ತಲುಪುವಲ್ಲಿ ಯಶಸ್ವಿಯಾಗಿ ವಿಶ್ವವೇ ಬೆರಗಾಗುವಂತೆ ಸಾಧನೆ ಮಾಡಿತ್ತು. ಆದರೆ ಆ ಬಳಿಕ ಪ್ರತಿಪಕ್ಷಗಳ ಕೆಲ ನಾಯಕರು ಚಂದ್ರಯಾನ-3ಕ್ಕೆ ಶ್ರಮಿಸಿದ್ದ ವಿಜ್ಞಾನಿಗಳಿಗೆ ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿದ್ದರು. ಇದೀಗ ಆರೋಪಕ್ಕೆ  ಪುಷ್ಠಿ ನೀಡುವಂತೆ ವೇತನ ಸಿಗದೆ ಇಂಜಿನಿಯರ್‌ ಓರ್ವರು ಇಡ್ಲಿ ಮಾರಾಟಕ್ಕೆ ಇಳಿದಿರುವುದು ಬಹಿರಂಗವಾಗಿದೆ.

ಚಂದ್ರಯಾನ-3ರ ಲಾಂಚ್‌ಪ್ಯಾಡ್ ನಿರ್ಮಿಸಲು ಕೆಲಸ ಮಾಡಿದ್ದ HEC (ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್)ನ ಇಂಜಿನಿಯರ್‌ ದೀಪಕ್ ಕುಮಾರ್ ಉಪ್ರಾರಿಯಾ ಅವರು ಜೀವನ ನಿರ್ವಹಣೆಗಾಗಿ ರಾಂಚಿಯ ರಸ್ತೆಬದಿಯ ಅಂಗಡಿಯಲ್ಲಿ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ.

BBC ವರದಿಯ ಪ್ರಕಾರ, ಉಪ್ರಾರಿಯಾ ಅವರು ರಾಂಚಿಯ ಧುರ್ವಾ ಪ್ರದೇಶದಲ್ಲಿನ ಹಳೆಯ ವಿಧಾನಸಭಾ ಕಟ್ಟಡದ ಎದುರು ಅಂಗಡಿಯನ್ನು ಹೊಂದಿದ್ದಾರೆ. ಚಂದ್ರಯಾನ-3ಗಾಗಿ ಫೋಲ್ಡಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್‌ ತಯಾರಿಸಲು ನೆರವಾಗಿದ್ದ ಇವರು HECಯ ಉದ್ಯೋಗಿ. ಆದರೆ ಅವರಿಗೆ ಕಳೆದ 18 ತಿಂಗಳಿನಿಂದ ಸಂಬಳವನ್ನು ಪಾವತಿಸದ ಕಾರಣ ಕುಟುಂಬದ ನಿರ್ವಹಣೆಗೆ ಅವರು ರಸ್ತೆ ಬದಿಯಲ್ಲಿ ಅಂಗಡಿಯನ್ನು ತೆರೆದಿದ್ದಾರೆ.

ಚಂದ್ರಯಾನ-3 ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಮಾಡಿತ್ತು. ಈ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು ಮತ್ತು ಚಂದ್ರಯಾನ ಮಿಷನ್‌ನ ಲಾಂಚ್‌ಪ್ಯಾಡ್ ನಿರ್ಮಿಸಿದ ವಿಜ್ಞಾನಿಗಳಿಗೆ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ BBC ವರದಿಯ ಪ್ರಕಾರ, ಉಪ್ರಾರಿಯಾ ಸೇರಿ HECಯ ಸುಮಾರು 2,800 ಉದ್ಯೋಗಿಗಳಿಗೆ ಕಳೆದ 18 ತಿಂಗಳುಗಳಿಂದ ವೇತನವನ್ನು ಪಾವತಿ ಮಾಡಲಾಗಿಲ್ಲ.

ಈ ಕುರಿತು ಮಾತನಾಡಿದ ಉಪ್ರಾರಿಯಾ ಅವರು, ಜೀವನ ನಿರ್ವಹಣೆಗೆ ಕಳೆದ ಕೆಲವು ದಿನಗಳಿಂದ ಇಡ್ಲಿಗಳನ್ನು ಮಾರುತ್ತಿದ್ದೇನೆ. ನಾನು ಅಂಗಡಿ ಜೊತೆಗೆ ಕಚೇರಿಯ ಕೆಲಸಗಳನ್ನು ಕೂಡ ಮಾಡುತ್ತೇನೆ. ಬೆಳಿಗ್ಗೆ ಇಡ್ಲಿ ಮಾರಾಟ ಮಾಡುತ್ತೇನೆ. ಮಧ್ಯಾಹ್ನ ಕಚೇರಿಗೆ ಹೋಗುತ್ತೇನೆ. ಸಂಜೆ ಕಚೇರಿಯಿಂದ ಬಂದು  ಇಡ್ಲಿ ಮಾರಾಟದ  ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಮೊದಲು ನಾನು  2 ಲಕ್ಷ ಲೋನ್‌ ಪಡೆದು ಮನೆಯನ್ನು ನಿರ್ವಹಿಸಿದೆ. ಬಳಿಕ ಕುಟುಂಬಸ್ಥರಿಂದ ಸಾಲ ಪಡೆಯಲು ಪ್ರಾರಂಭಿಸಿದೆ. ಇದುವರೆಗೆ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂತಿರುಗಿಸದ ಕಾರಣ ಈಗ ಜನರು ಸಾಲ ನೀಡುವುದನ್ನು ನಿಲ್ಲಿಸಿದ್ದಾರೆ. ನಂತರ ನಾನು ನನ್ನ ಹೆಂಡತಿಯ ಆಭರಣಗಳನ್ನು ಅಡಮಾನವಿಟ್ಟು ಕೆಲವು ದಿನ ಮನೆ ನಡೆಸಿದ್ದೇನೆ ಎಂದು ಅವರು ಹೇಳಿದರು.

ಹಸಿವಿನ ಸಮಯ ನನಗೆ ಎದುರಾಗಿದೆ ಎಂದು ಭಾವಿಸಿದಾಗ ನಾನು ಇಡ್ಲಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ನನ್ನ ಹೆಂಡತಿ ಇಡ್ಲಿಗಳನ್ನು ಮಾಡುತ್ತಾಳೆ. ಅದನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂಪಾಯಿಗಳು ಸಿಗುತ್ತವೆ. ಅದರಲ್ಲಿ ನಾನು 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆಯನ್ನು ಮುನ್ನೆಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಬಿಬಿಸಿ ಪ್ರಕಾರ, ಉಪ್ರಾರಿಯಾ ಅವರು ಮಧ್ಯಪ್ರದೇಶದ ಹರ್ದಾ ಜಿಲ್ಲೆಯವರು. 2012ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಬಿಟ್ಟು 8,000 ಸಂಬಳಕ್ಕೆ ಎಚ್‌ಇಸಿಗೆ ಸೇರಿದ್ದರು. ಸರ್ಕಾರಿ ಕಂಪನಿಯಾದ ಕಾರಣ ಅವರು ತಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಭಾವಿಸಿದ್ದರು. ಆದರೆ ಪರಿಸ್ಥಿತಿ ಇದೀಗ ಬೇರೆಯೇ ಆಗಿದೆ.

ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಶಾಲೆಗೆ ಹೋಗುತ್ತಾರೆ. ಈ ವರ್ಷ ನಾನು ಅವರ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಪ್ರತಿದಿನ ನೋಟಿಸ್ ಕಳುಹಿಸಲಾಗುತ್ತಿದೆ. ತರಗತಿಯಲ್ಲಿಯೂ ಸಹ ಶಿಕ್ಷಕರು ಹೆಚ್ಇಸಿಯಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳು ಯಾರು ಎಂದು ಕೇಳುತ್ತಾರೆ. ಎದ್ದು ನಿಲ್ಲಲು ಅವರು ಹೇಳುತ್ತಾರೆ. ನನ್ನ ಮಕ್ಕಳು ಅವಮಾನಕ್ಕೊಳಗಾಗಿದ್ದಾರೆ. ನನ್ನ ಹೆಣ್ಣು ಮಕ್ಕಳು ಅಳುತ್ತಾ ಮನೆಗೆ ಬರುತ್ತಾರೆ. ಅವರು ಅಳುವುದನ್ನು ನೋಡಿ ನನ್ನ ಹೃದಯ ಒಡೆಯುತ್ತದೆ ಎಂದು ಉಪ್ರಾರಿಯಾ ಹೇಳಿದ್ದಾರೆ.

ಬಿಬಿಸಿ ಪ್ರಕಾರ, ಈ ಪರಿಸ್ಥಿತಿ ದೀಪಕ್ ಉಪ್ರಾರಿಯಾಗೆ ಮಾತ್ರವಲ್ಲ. ಅವರಂತೆಯೇ HECಯಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗಳು ವೇತನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದೆ.

Related Articles

1 COMMENT

  1. I think HEC is not direct partner of ISRo. ISRo is not responsible for salaries of HEC staff. Any how government should take appropriate action

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!