Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮತದಾನದ ಅಂಕಿ-ಅಂಶ ಬಿಡುಗಡೆ ವಿಳಂಬ| ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಡಿಆರ್‌ ಸಂಸ್ಥೆ

ಮತದಾನವಾದ 48 ಗಂಟೆಯೊಳಗೆ ಮತದಾನದ ಅಧಿಕೃತ ಅಂಕಿಅಂಶಗಳನ್ನು ಪ್ರಕಟಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ದಿ ಅಸೋಷಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್(ಎಡಿಆರ್‌) ಸಂಸ್ಥೆ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದೆ.

ಲೋಕಸಭೆ ಚುನಾವಣೆ ನಡೆಯುತ್ತಿರುವಾಗ ಕೇಂದ್ರ ಚುನಾವಣಾ ಆಯೋಗವು ಮತದಾನದ ಅಂಕಿಅಂಶಗಳನ್ನು ಮತದಾನದ ಹಲವು ದಿನಗಳ ನಂತರ ಪ್ರಕಟಿಸಿದೆ. ಮೊದಲ ಹಂತದ ಮತದಾನ ಏ.19 ರಂದು ನಡೆದಿದ್ದು ಇದನ್ನು 11 ದಿನಗಳ ನಂತರ ಹಾಗೂ ಏ.26ರಂದು ನಡೆದ ಎರಡನೇ ಹಂತದ ಮತದಾನದ ಶೇಕಡಾವಾರು ಪ್ರಮಾಣವನ್ನು 4 ದಿನಗಳ ನಂತರ ಪ್ರಕಟಿಸಲಾಗಿದೆ.

ಚುನಾವಣಾ ದಿನದಲ್ಲಿ ನಡೆದ ಶೇಕಡವಾರು ಪ್ರಮಾಣಕ್ಕೂ ಬಿಡುಗಡೆಗೊಳಿಸಿದ ಶೇಕಡವಾರು ಪ್ರಮಾಣಕ್ಕೂ ಶೇ.5 ರಷ್ಟು ವ್ಯತ್ಯಾಸ ಕಾಣುತ್ತಿದೆ ಎಂದು ಎಡಿಆರ್‌ ತನ್ನ ಅರ್ಜಿಯಲ್ಲಿ ತಿಳಿಸಿದೆ.

“ಅಂಕಿಅಂಶವನ್ನು ಚುನಾವಣಾ ಆಯೋಗವು ಏ.30 ರಂದು ಪತ್ರಿಕಾ ಪ್ರಕಟಣೆ ಮೂಲಕ ಹೊರಡಿಸಿದ್ದು,ಚುನಾವಣೆ ದಿನದಂದು ಸಂಜೆ ನೀಡಿದ ಶೇಕಡವಾರು ಪ್ರಮಾಣಕ್ಕೆ ಹೋಲಿಸಿದರೆ ಶೇ. 5ರಿಂದ 6 ರಷ್ಟು ಮತ ಪ್ರಮಾಣ ಹೆಚ್ಚಾಗಿದೆ. ಎರಡು ಮತ ಪ್ರಮಾಣ ವ್ಯತ್ಯಾಸವಿರುವುದರಿಂದ ಹಲವು ಪ್ರಶ್ನೆಗಳನ್ನು ಮೂಡಿಸಿದ್ದು, ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ” ಎಂದು ಎಡಿಆರ್‌ ಪರ ವಕೀಲರಾದ ಪ್ರಶಾಂತ್ ಭೂಷಣ್‌ ತಿಳಿಸಿದ್ದಾರೆ.

“ಈ ಆತಂಕಗಳನ್ನು ನಿವಾರಿಸಿ, ವಾಸ್ತವಾಂಶಗಳನ್ನು ಒದಗಿಸಬೇಕು. ಮತದಾರರ ವಿಶ್ವಾಸವನ್ನು ಎತ್ತಿಹಿಡಿಯಲು ಮತದಾನದ ಅಧಿಕೃತ ಅಂಶಗಳನ್ನು ಒಳಗೊಂಡಿರುವ ಎಲ್ಲ ಮತಗಟ್ಟೆಗಳ ವಿವರಗಳನ್ನು ಫಾರ್ಮ್‌ 17ಸಿ ವಿಭಾಗ-1ರ ಪ್ರತಿಗಳಲ್ಲಿ ಮತದಾನವಾದ 48 ಗಂಟೆಯೊಳಗೆ ತಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಫಲಿತಾಂಶ ಪ್ರಕಟಗೊಂಡ ನಂತರ ಅಭ್ಯರ್ಥಿವಾರು ಫಲಿತಾಂಶ ಒಳಗೊಂಡಿರುವ ಮಾಹಿತಿಯನ್ನು 17ಸಿ ವಿಭಾಗ-2ರ ಪ್ರತಿಗಳಲ್ಲಿ ವೆಬ್‌ಸೈಟ್‌ ಮೂಲಕ ಅಪ್‌ಲೋಡ್‌ ಮಾಡಬೇಕು ಎಂದು ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!