Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಜಾತ್ರೆ | ಮಂಡ್ಯ ಸೊಗಡಿನ ರುಚಿಯಾದ ಆಹಾರ ಉಣಬಡಿಸಲು ಸಿದ್ಧತೆ; ಊಟದಲ್ಲಿ ಏನೇನಿರಲಿದೆ ಗೊತ್ತೇ ?

ಸಕ್ಕರೆಯ ನಾಡು ಮಂಡ್ಯದಲ್ಲಿ ಮುಂಬರುವ ಡಿಸೆಂಬರ್ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಮಂಡ್ಯ ಸೊಗಡಿನ ರುಚಿಯಾದ ಆಹಾರವನ್ನು ಉಣಬಡಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಆಹಾರ ಸಮಿತಿ ಅಧ್ಯಕ್ಷರೂ ಆದ ಶಾಸಕ ರಮೇಶ್ ಬಾಬು ಬಂಡಿಸಿದ್ಧೇಗೌಡ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಅಹಾರ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿನ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಿಗೂ ಯಾವುದೇ ತೊಂದರೆ ನೂಕು ನುಗ್ಗಲು ಉಂಟಾಗದಂತೆ 3 ದಿನಗಳ ಕಾಲ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ದೊರಕಬೇಕು. ಆಹಾರ ಬಿಸಿಯಾಗಿ ಸವಿಯುವ ಪ್ರತಿಯೊಬ್ಬರು ಮಂಡ್ಯ ಜಿಲ್ಲೆಯನ್ನು ಸದಾ ನೆನಪಿನಲ್ಲಿ ಇಡುವ ರೀತಿ ಇರಬೇಕು ಎಂದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ಅತಿಥಿಗಳಾಗಿ ಬಹಳ ಆತ್ಮೀಯತೆಯಿಂದ ಸ್ವಾಗತಿಸಿ ಅತಿಥಿ ಸತ್ಕಾರ ಮಾಡಲು ಎಲ್ಲರೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಬೇಕು ಎಂದರು‌.

ವಿವಿಧ ಪಾನಕದ ವ್ಯವಸ್ಥೆ

ವಿವಿಧ ಪಾನಕ ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಿರುತ್ತದೆ. ತಂಪಾಗಿ ಮೂರು ದಿನಗಳ ಕಾಲ ಒಂದೊಂದು ಪಾನಕ ನೀಡಿ. ನಿಂಬೆಹಣ್ಣಿನ ಪಾನಕ, ಕಬ್ಬಿನ ಹಾಲು, ಹಿರಳಿಕಾಯಿ ಜ್ಯೂಸ್, ಖರಬೂಜದ ಪಾನಕ ಸೇರಿದಂತೆ ಸೂಕ್ತವಾದ ಪಾನಕ ನೀಡಲು ವ್ಯವಸ್ಥೆ ಮಾಡಿ ಎಂದರು.

ಊಟದಲ್ಲಿ ಏನೇನಿರಲಿದೆ….

ಸಮ್ಮೇಳನಕ್ಕೆ ಆಗಮಿಸುವವರಿಗೆ ರಾಗಿಮುದ್ದೆ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಬೆಲ್ಲದ ಮಿಠಾಯಿ, ಬೆಲ್ಲದ ಮೈಸೂರುಪಾಕ್, ಕಜ್ಜಾಯ, ರವೆ ಹುಂಡೆ, ಚಪಾತಿ, ಶೇಂಗಾ ಚಟ್ನಿ, ಒಬ್ಬಟ್ಟು, ಪೊಂಗಲ್, ಪುಳಿಯೋಗರೆ, ಜೋಳದ ರೊಟ್ಟಿ, ಹುರುಳಿಕಾಳು ಬಸ್ಸಾರು, ಮೊಳಕೆ ಕಾಳು ಸಾರು, ಮೊಸಪ್ಪಿನ ಸಾರು, ಉಪ್ಸಾರು, ಮುಂತಾದ ವಿವಿಧ ರೀತಿಯ ತಿನಿಸುಗಳನ್ನು ಉಣಬಡಿಸುವ ಬಗ್ಗೆ ಚರ್ಚಿಸಲಾಯಿತು.

ಬಾಳೆ ಎಲೆ ಊಟ ನೊಂದಣಿ ಮಾಡಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಿಶೇಷವಾಗಿ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಬಹುದೇ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಭಾಗದ ಜನರು ಹೆಚ್ಚು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕ ಆಹಾರ ಖಾದ್ಯವನ್ನು ಸಹ ನೀಡುವುದು ಉತ್ತಮ ಎಂದರು.

ಆಹಾರ ಸಮಿತಿ ಸದಸ್ಯ ಚಂದ್ರಶೇಖರ್ ಮಾತನಾಡಿ ಮಂಡ್ಯ ಜಿಲ್ಲೆಯ ಜನರು ಊಟ ಬಡಿಸುವುದರಲ್ಲಿ ಎತ್ತಿದ ಕೈ. ಬರುವ ಜನರಿಗೆ ವಿವಿಧ ರೀತಿಯ ಊಟವನ್ನು ಬಡಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ ಬಾಬು, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ಸೋಮಶೇಖರ್, ಕಸಾಪ ಗೌರವ ಕಾರ್ಯದರ್ಶಿ ವಿ. ಹರ್ಷ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!