Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಜೆಟ್ ನಲ್ಲಿ ರೈತರ ಬೇಡಿಕೆ ಈಡೇರಿಸಲು ರೈತಸಂಘದ ಆಗ್ರಹ

ರೈತ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ 2023-24ನೇ ಸಾಲಿನ ಆಯವ್ಯಯದಲ್ಲಿ ರೈತ ಪರವಾದ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇಷ್ಟು ದಿನ ರೈತ ಪರವಾದ ಒಂದೆ ಒಂದು  ಕೆಲಸವನ್ನು ಮಾಡಿಲ್ಲ, ಚುನಾವಣಾ ಸಂದರ್ಭವಾದ್ದರಿಂದ ಅಲ್ಪ ಪ್ರಮಾಣದಲ್ಲಿ ರೈತ ಪರವಾದ ಘೋಷಣೆಗಳನ್ನು ಮಾಡಬಹುದು ಎಂಬ ವಿಶ್ವಾಸವಿದೆ ಎಂದರು.

ರೈತಸಂಘದ ಬೇಡಿಕೆಗಳು

ರೈತ ಸಮುದಾಯಕ್ಕೆ ಮಾರಕವಾಗಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎ.ಪಿ.ಎಂ.ಸಿ. ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು.

ಆಂಧ್ರ ಸರ್ಕಾರದ ಮಾದರಿ ಮುಂಗಾರಿನಲ್ಲಿ ರೈತರಿಗೆ ಎಕರೆಯೊಂದಕ್ಕೆ 10 ಸಾವಿರ ನಗದು ಸಹಾಯ ಧನವನ್ನು ನೀಡಬೇಕು.

ನಾಟಿ ಹಸುಗಳನ್ನು ಸಾಕಲು ಗುಜರಾತ್ ಸರಕಾರದಂತೆ ನಮ್ಮ ರಾಜ್ಯದಲ್ಲೂ ಮಾಸಿಕ 400/- ರೂ ಸಹಾಯಧನ ನೀಡಬೇಕು. ಹಾಲು ಉತ್ಪಾದಕರಿಗೆ ಪ್ರತಿ  ಲೀಟರ್ ಗೆ 50 ರೂ ನೀಡಿ, ಹೈನುಗಾರಿಕೆಯನ್ನು ಉತ್ತೇಜಿಸಬೇಕು.

ಮಂಡ್ಯ ಮೈಶುಗರ್ ಕಾರ್ಖಾನೆಯನ್ನು ಆಧುನೀಕರಿಸಿ ಸುಶೂತ್ರವಾಗಿ ನಡೆಸಲು ಈ ಬಜೆಟ್ ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟು. ಎಥನಾಲ್ ಘಟಕವನ್ನು ಪ್ರಾರಂಭಿಸಬೇಕು

ಒಕ್ಕೂಟ ಸರ್ಕಾರ ತರಲು ಹೊರಟರುವ ವಿದ್ಯುತ್‌ಚಕ್ತಿ ತಿದ್ದುಪಡಿ ಕಾಯ್ದೆ 2022 ನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ಈ ಆಯವ್ಯಯದಲ್ಲಿ ಘೋಷಣೆ ಮಾಡಬೇಕು.

ಕರಾ ನಿರಾಕರಣ ಚಳುವಳಿಯಲ್ಲಿ ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಮನ್ನಾ ಮಾಡುವುದಾಗಿ ತಾವು ಭರವಸೆ ನೀಡಿದ್ದು, ಆದೇಶದ ದಿನಾಂಕದವರೆವಿಗೂ ಮನ್ನಾ ಮಾಡಿ ಮಾತು ಉಳಿಸಿಕೊಳ್ಳಬೇಕು, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಬಳಕೆದಾರರಿಗೆ ವಿಧಿಸಿರುವ ಯೂನಿಟ್ ಮಿತಿಯನ್ನು ತಗೆದು ಹಾಕಿ, ವಿದ್ಯುತ್ ಸಂಪರ್ಕವನ್ನು ಮುಂದುವರಿಸಬೇಕು. ಕೃಷಿ ಪಂಪ್‌ಸೆಟ್‌ಗಳು ಹಗಲು 10 ಗಂಟೆಗಳ ಕಾಲ, 3-ಪೇಸ್ ವಿದ್ಯುತ್ ಸರಬರಾಜು ಮಾಡಬೇಕು.

ಫಸಲು ಪಹಣಿಗೆ ಏರಿಸಿರುವ ಶುಲ್ಕವನ್ನು ಕೂಡಲೆ ರದ್ದು ಪಡಿಸಿ ಉಚಿತವಾಗಿ ನೀಡಬೇಕು. ಸರ್ವೆ ಮಾಡಿ ಹದ್ದುಬಸ್ತು ಅಳತೆ ಶುಲ್ಕವನ್ನು ಕಡಿಮೆ ಮಾಡಬೇಕು. ಸಾಲ ವಸೂಲಿಗಾಗಿ ರೈತರ ಮನೆ, ಆಸ್ತಿಗಳನ್ನು ಹರಾಜಿಗೆ ಪ್ರಕ್ರಿಯೆಯ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಸಿರಿಗೆರೆ ತರಳಬಾಳು ಮಠದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು, ಮಾತಿನಂತೆ ತಾವು ಕಾಯ್ದೆಯನ್ನು ಜಾರಿಗೆ ತರಬೇಕು.

ಹತ್ತಿಗೆ ಕ್ವಿಂಟಾಲ್ ಒಂದಕ್ಕೆ 10,500 ರೂ., ಕೊಬ್ಬರಿಗೆ ಕ್ವಿಂಟಾಲ್ ಒಂದಕ್ಕೆ 19,000 ರೂ ನಿಗದಿ ಮಾಡಬೇಕು. ತೊಗರಿಗೆ ಕ್ವಿಂಟಾಲ್ ಒಂದಕ್ಕೆ ಕನಿಷ್ಟ 6,500 ರೂ. ನಿಗದಿ ಮಾಡಿ ಸರ್ಕಾರವೇ ಕೊಳ್ಳಬೇಕು, ಆವರ್ತನಿಧಿಗಾಗಿ ಕನಿಷ್ಠ 20 ಸಾವಿರ ಕೋಟಿ ಮೀಸಲಿಡಬೇಕೆಂದು ಆಗ್ರಹಿಸಿದರು.

ಕೃಷಿ ಬೆಲೆ ಆಯೋಗವು ಮಾಡಿರುವ ಶಿಫಾರಸ್ಸನ್ನು ಜಾರಿ ಮಾಡಿ, ರಾಜ್ಯದ ಬೆಳೆಯಲಾಗುವ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣಿ ಮಾಡಿ, ವರ್ಷ ಪೂರ್ತಿ ಕೊಳ್ಳಬೇಕು. ಇದಕ್ಕೆ ಡಾ.ಸ್ವಾಮಿನಾಥನ್ ವರದಿಯನ್ನು ಆಧಾರ ಮಾಡಿಕೊಳ್ಳಬೇಕು ಮತ್ತು ರಾಗಿ, ಭತ್ತ, ತೊಗರಿ, ಎಣ್ಣಿಕಾಳು ಸಿರಿದಾನ್ಯಗಳನ್ನು ಪಡಿತರ ವ್ಯವಸ್ಥೆಗೆ ಲಿಂಕ್‌ ಮಾಡಿ ನೇರವಾಗಿ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ, ಅದೇ ರೀತಿ ಮಧ್ಯಾಹ್ನದ ಶಾಲಾ ಬಿಸಿಯೂಟ, ಸರ್ಕಾರಿ ಹಾಸ್ಟೆಲ್‌, ಜೈಲು ಇತ್ಯಾದಿಗಳಿಗೆ ರೈತರಿಂದಲೇ ನೇರವಾಗಿ ಆಹಾರ ಉತ್ಪನ್ನಗಳನ್ನು ಕೊಳ್ಳಲು ತೀರ್ಮಾನಿಸಬೇಕು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ನೀಡಿರುವಂತೆ ಎಲ್ಲಾ ಜಿಲ್ಲೆಯ ಭತ್ತದ ಬೆಳೆಗಾರರಿಗೂ ಕ್ವಿಂಟಾಲ್‌ಗೆ 500 ರೂ ಸಹಾಯ ಧನ ನೀಡಬೇಕು, ಕರಾವಳಿ ಪ್ರದೇಶದಲ್ಲಿ ಮತ್ತೆ ಇದನ್ನು ಮುಂದುವರೆಸಬೇಕು.

ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ನೈಸರ್ಗಿಕ ಕೃಷಿಕರಿಗೆ ಒಂದು ನಾಟಿ ಹಸುವನ್ನು ಉಚಿತವಾಗಿ ನೀಡಬೇಕು. 5 ಲಕ್ಷದ ವರೆಗೆ ಕೃಷಿ ಬೆಳೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಬೇಕು.

ಗೋಷ್ಠಿಯಲ್ಲಿ ರೈತ ಮುಖಂಡರಾದ ಎ.ಎಲ್.ಕೆಂಪೂಗೌಡ, ಲಿಂಗಪ್ಪಾಜಿ, ಪ್ರಸನ್ನ ಎನ್. ಗೌಡ, ಎಸ್.ಕೆ. ರವಿಕುಮಾರ್, ಬೊಮ್ಮೇಗೌಡ, ಶ್ರೀನಿವಾಸ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ