‘ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ ಧರ್ಮ ಮಾಡಿರುವ ಕೈ ಅಧಿಕಾರಕ್ಕೆ ಬಂದ್ರೆ ಚೆಂದ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮದ್ದೂರಿನಲ್ಲಿ ನಡೆದ ‘ಪ್ರಜಾಧ್ವನಿಯಾತ್ರೆ’ಯಲ್ಲಿ ಮಾತನಾಡಿದ ಅವರು, ಯುವಕನೋರ್ವ ವಾಟ್ಸಪ್‌ನಲ್ಲಿ ಕಳುಹಿಸಿದ್ದ ಕವಿತೆಯನನ್ನು ಉಲ್ಲೇಖಿಸಿ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸನ್ನು ಇಮ್ಮಡಿಕೊಳಿಸಿ, ಹೇಳಿ ಕಾಂಗ್ರೆಸ್‌ಗೆ ಅಧಿಕಾರ ತರುವಂತೆ ಡಿಕೆ ಮನವಿ ಮಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯ, ರಾಷ್ಟ್ರ ಕಾಪಾಡಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿ ಸರ್ಕಾರಕ್ಕೆ ಭ್ರಷ್ಟ ಸರ್ಕಾರ ಎಂಬ ಹೆಸರು ಬಂದಿದೆ. ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ, ಆದಾಯ ಹಾಗೇ ಇದೆ. ಪ್ರತಿ ತಿಂಗಳು ಮನೆ ಒಡತಿ ಖಾತೆಗೆ 2000 ಕೊಡುವ ತೀರ್ಮಾನ ಮಾಡಿದ್ದೇವೆ. ಗಂಡಸರ ಅಕೌಂಟಿಗೆ ಹಾಕಲ್ಲ, ಹೆಂಗಸರ ಅಕೌಂಟಿಗೆ ಹಣ ಹಾಕ್ತೀವಿ. 200 ಯೂನಿಟ್ ಕರೆಂಟ್ ಉಚಿತ ನೀಡ್ತೇವೆ. ನಾನು ಸಿದ್ದರಾಮಯ್ಯ ಗ್ಯಾರಂಟಿ ಚೆಕ್ ಸಹಿ ಮಾಡಿದ್ದೇವೆ. ₹ 2000 ದುಡ್ಡು, ಉಚಿತ ಕರೆಂಟ್ ಕೊಡಲಿಲ್ಲ ಅಂದ್ರೆ ನಿಮ್ಮ ಮುಂದೆ ಮತ್ತೆ ಬಂದು ಮತ ಕೇಳಲ್ಲ ಎಂದು ನುಡಿದರು.

ಸಮುದ್ರ ಪಾಲಾಗುವ ಕಾವೇರಿ ನೀರು ಉಳಿಸಲು ಮೇಕೆದಾಟು ಯೋಜನೆ ಅವಶ್ಯಕತೆ ಇದೆ, ಈ ಬಗ್ಗೆ ತಾಂತ್ರಿಕವಾಗಿ ಚರ್ಚೆ ಮಾಡಿದ್ದೇನೆ. ಈ ಯೋಜನೆ ಪೂರ್ಣ ಮಾಡುವ ಜವಾಬ್ದಾರಿ ನನ್ನ ಮೇಲಿದೆ, ಜನರ ಕಷ್ಟ ಸುಖ ಕೇಳಲು ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದೇವೆ. ಜನರಿಗಾಗಿ ಏನೆಲ್ಲಾ ಕೆಲಸಗಳು ಮಾಡುಬಹುದು ಎಂದು ತಿಳಿಯಯುತ್ತಿದ್ದೇವೆ, ರೈತರ ಬದುಕಿನಲ್ಲಿ ಬದಲಾವಣೆ ತರುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ
ಮಹಿಳೆಯರಿಗೂ ಅಧಿಕಾರ ಕೊಟ್ಟ ಜಿಲ್ಲೆ ಮಂಡ್ಯ
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಹಿಳೆಯರ ಪಟ್ಟಿ ಹೇಳುತ್ತಾ ಸುಮಲತಾ ಹೆಸರು ಹೇಳಿದ ಡಿ ಕೆ ಶಿವಕುಮಾರ್ ಅವರು, ರಮ್ಯಾ, ಸುಮಲತಾ ಸೇರಿದಂತೆ ಹಿರಿಯ ನಾಯಕಿಯರ ಹೆಸರು ಪ್ರಸ್ತಾಪ ಮಾಡಿದರು. ಮದ್ದೂರಿನಲ್ಲಿ ಅಭ್ಯರ್ಥಿ ಯಾರು ಅಲ್ಲ, ಡಿಕೆಶಿ ಅಂದುಕೊಂಡು ಮತ ನೀಡಿ.
ನಿಮ್ಮ ಮಗನಾದ ನನ್ನ ಕೈ ಬಲಪಡಿಸಿ, ನಿಮ್ಮ ಮಗನ ಆಡಳಿತ ನೀವು ನೋಡಬೇಕು. ನಿಮ್ಮ ಮನೆ ಮಗನಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ಧೃವನಾರಾಯಣ್, ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಲ್ಲಾಜಮ್ಮ, ಸಿ.ಡಿ.ಗಂಗಾಧರ್, ಶಾಸಕ ದಿನೇಶ್ ಗೂಳಿಗೌಡ, ಅಮರಾವತಿ ಚಂದ್ರಶೇಖರ್, ಕೀಲಾರ ಕೃಷ್ಣ, ಗುರುಚರಣ್ ಮತ್ತಿತರರಿದ್ದರು.




