Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೆಣ್ಣುಭ್ರೂಣ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

ಸಮಾಜವೇ ತಲೆ ತಗ್ಗಿಸಬೇಕಾದ ಅಮಾನವೀಯ ಭ್ರೂಣಪತ್ತೆ ಮತ್ತು ಹತ್ಯೆ ಪತ್ತೆ ಪ್ರಕರಣ ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಂಡುಬಂದಿರುವುದರಿಂದ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ(ಎಎಪಿ) ಮಂಡ್ಯ ಜಿಲ್ಲಾಧ್ಯಕ್ಷ ಬೂದನೂರು ಬೊಮ್ಮಯ್ಯ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯೊಂದರಲ್ಲಿ ಭ್ರೂಣ ಪತ್ತೆ ಪ್ರಕರಣವನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದಕ್ಕೂ ಮುನ್ನ ಶ್ರೀರಂಗಪಟ್ಟಣ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ನಡೆಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಆರೋಗ್ಯಾಧಿಕಾರಿಗಳು ನಮಗೆ ಈ ಬಗ್ಗೆ ದೂರುಗಳು ಬಂದಿದೆ. ಇನ್ನೂ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದನ್ನು ಅಂದೇ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರೆ ಇಷ್ಟೊಂದು ದೊಡ್ಡ ಮಟ್ಟದವರೆಗೆ ಹೋಗುತ್ತಿರಲಿಲ್ಲ ಎಂದು ಹೇಳಿದರು.

ಮಂಡ್ಯ ಪೊಲೀಸರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರೇ ಬೇಧಿಸಬೇಕಾಗಿಯಿತು. ಹಳೇ ಮೈಸೂರು ಪ್ರದೇಶ ಸೇರಿದಂತೆ ಇದು ಎಲ್ಲೆಲ್ಲಿ ವ್ಯಾಪಿಸಿದೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇದನ್ನು ಸಿಬಿಐ ತನಿಖೆಯಿಂದ ಮಾತ್ರವೇ ಸಾಧ್ಯ ಎಂದು ಅಭಿಪ್ರಾಯಿಸಿದರು.

ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಲಿಂಗಾನುಪಾತದಲ್ಲಿ ಹೆಚ್ಚಿನ ವ್ಯತ್ಯಾಸವಾಗುತ್ತಿದೆ. ಈಗ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಯುವಜನರು ಮಹದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಹೋಗಿ ದೇವರ ಮೋರೆ ಹೋಗುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಇಂತಹ ಪ್ರಕರಣವನ್ನು ಕಟ್ಟುನಿಟ್ಟಾಗಿ ತಡೆಯಬೇಕಿದೆ. ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದ್ದು, ಇದನ್ನು ತಕ್ಷಣ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಆಗ್ರಹಿಸಿದರು.

ವೈದ್ಯ ವೃತ್ತಿಯಲ್ಲಿ ಮಾನವೀಯತೆ, ಮನುಷ್ಯತ್ವ ಇವು ಮರೆಯಾಗುತ್ತಿದ್ದು, ಇದರಿಂದ ಸಮಾಜದ ಮುಂದಿನ ಪೀಳಿಗೆಗೆ ಮಾರಕವಾಗಿ ಗಂಭೀರ ಸಮಸ್ಯೆಗಳನ್ನು ತಂದೊಡ್ಡುವ ಅಪಾಯವಿರುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಈ ಮೂರೂ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡುಬಂದಿರುವ ಭ್ರೂಣ ಹತ್ಯೆ ಪ್ರಕರಣಗಳು, ಇಡೀ ರಾಜ್ಯ ಮತ್ತು ದೇಶದಲ್ಲಿ ವ್ಯಾಪಿಸಿರಬಹುದಾದ ಸಂದೇಹಗಳಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಭಲರು ಕಾನೂನು ಬಾಹಿರವಾದ ಕೃತ್ಯಗಳಿಂದ ತಪ್ಪಿಸಿಕೊಳ್ಳಬಾರದು. ಮತ್ತು ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಶಿಕ್ಷಿಸುವ ಅಗತ್ಯತೆ ತುಂಬಾ ಇದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಇಂತಹ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗುವ ಸಂಭವವಿರುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಕ್ಷಾತೀತವಾಗಿ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ತನಿಖೆಗೆ ಒಪ್ಪಿಸಬೇಕು ಮುಖ್ಯಮಂತ್ರಿ, ರಾಜ್ಯಪಾಲರನ್ನು ಆಗ್ರಹಿಸಿದರು.

ಒಂದು ವೇಳೆ ಇದನ್ನು ನಿರ್ಲಕ್ಷಿಸಿದಲ್ಲಿ ಎಎಪಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮತ್ತು ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಸಿದರು.

ಎಎಪಿ ಮುಖಂಡರಾದ ಶಿವಕುಮಾರ್, ಸುರೇಶ್‌ಗೌಡ, ಯೋಗೇಶ್ ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!