ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರದಿಯು ಅತ್ಯಂತ ವೈಜ್ಞಾನಿಕವಾಗಿದ್ದು ರಾಜ್ಯ ಸರ್ಕಾರ ಕೂಡಲೇ ಜಾರಿಗೆ ತರಬೇಕೆಂದು ಅಖಿಲ ಕರ್ನಾಟಕ ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಡಾ.ಬಾಬುಜಗಜೀವರಾಂ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಕುಟುಂಬಗಳ ದತ್ತಾಂಶ ಸಂಗ್ರಹಿಸಲು ರಾಜ್ಯದಾದ್ಯಂತ ಮೇ 5ರಿಂದ ವಿವಿಧ ಹಂತಗಳಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿಗಳ ಸಮಗ್ರ ಸಮೀಕ್ಷೆ ನಡೆದಿತ್ತು. ಸಂಗ್ರಹಿಸಲಾದ ಇ-ಆಡಳಿತ ಇಲಾಖೆಯ ದತ್ತಾಂಶಗಳನ್ನು ಸಹಯೋಗದಲ್ಲಿ ವಿಶ್ಲೇಷಿಸಲಾಗಿದೆ. ಮೂಲ ವರದಿಗೆ ಪೂರಕವಾಗಿ ಸಂಪುಟಗಳಲ್ಲಿ ದತ್ತಾಂಶಗಳನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂದರು.
ಎಸ್ಸಿ ಸಮುದಾಯದಲ್ಲಿ ಕೆಲವು ಉಪ ಜಾತಿಗಳಿಗೂ ಆರ್ಥಿಕವಾಗಿ ರಾಜಕೀಯ, ಶೈಕ್ಷಣಿಕ ಹಿಂದುಳಿದಿವೆ. ಆ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಆದ್ದರಿಂದ ಬರುವ ಆಗಸ್ಟ್ 19ರಂದು ನಡೆಯುವ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಒಕ್ಕೂಟದ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಕಾವಲುಕಾಂತರಾಜು, ತಾಲ್ಲೂಕು ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೆಚ್. ಎಂ.ಪುಟ್ಟರಾಜು, ಪದಾಧಿಕಾರಿಗಳಾದ ಸುಧಾಕರ್, ಸುರೇಶ್ ಹರಿಜನ, ಗೋಪಿನಾಥ್, ಧನಂಜಯ, ದೇವರಾಜು, ಪ್ರಸನ್ನ, ಉಮೇಶ್, ಧರ್ಮ, ಸ್ವಾಮಿ.ಎಂ, ಹರೀನಹಳ್ಳಿ ಪೂಜಾರಿ ಯಾಲಕ್ಕಯ್ಯ ಮತ್ತಿತರರು ಉಪಸ್ಥಿತರಿದ್ದರು.




