Friday, September 20, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಜಮೀನಿಗೆ ನುಗ್ಗಿ ದಾಯಾದಿಗಳಿಂದಲೇ 2,000 ಬಾಳೆಗಿಡಗಳ ನಾಶ: ₹15 ಲಕ್ಷ ನಷ್ಟ

ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿಯ ನ್ಯಾಮನಹಳ್ಳಿ ಗ್ರಾಮದ ಜವರೇಗೌಡ ಎಂಬ ವಿಕಲಚೇತನ ವ್ಯಕ್ತಿಗೆ ಸೇರಿದ ಜಮೀನಿಗೆ ನುಗ್ಗಿ ಆತನ ಅಣ್ಣ-ತಮ್ಮಂದಿರೇ ಬೆಳೆನಾಶ ಮಾಡಿ, ಬೋರೆವೆಲ್ ನ ಕೇಸಿನ್ ವೈರ್ ಗಳನ್ನು ಕಿತ್ತುಹಾಕಿದ್ದಲ್ಲದೇ, ಬೋರ್ ವೆಲ್ ಮೋಟರನ್ನು ಕಳವು ಮಾಡಿರುವ ಘಟನೆ ಕಳೆದ ಶನಿವಾರ ನಡೆದಿದ್ದು, ಇತ್ತಿಚೇಗೆ ಬೆಳಕಿಗೆ ಬಂದಿದೆ.

ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಜವರೇಗೌಡರ ಸ್ವತಃ ಅಣ್ಣ ರಾಮೇಗೌಡ ಹಾಗೂ ತಮ್ಮಂದಿರಾದ ಭಾಸ್ಕರ,  ಕೃಷ್ಣ, ನಾರಾಯಣ ಎಂಬುವವರು ಏಕಾಏಕಿ ಜಮೀನಿಗೆ ನುಗ್ಗಿ, ಹನಿ ನೀರಾವರಿಗೆ ಹಾಕಲಾಗಿದ್ದ ಪೈಪುಗಳು ಮತ್ತು ನೀರಿನ ಮೋಟಾರನ್ನು ಕಿತ್ತು ಹಾಕಿದ್ದಲ್ಲದೆ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ 2000 ಬಾಳೆ ಗಿಡಗಳನ್ನು ಕಿತ್ತು ಹಾಕಿ ಸಂಪೂರ್ಣ ನಾಶ ಮಾಡಿದ್ದಾರೆ.

ಕಳೆದ ಶನಿವಾರ ಕುಟುಂಬದವರೆಲ್ಲ ಆದಿಚುಂಚನಗಿರಿ ತೆರಳಿದ್ದ ಸಮಯದಲ್ಲಿ ದಾಳಿ ನಡೆಸಿರುವ ದಾಯಾದಿಗಳು ಬೆಳೆಯನ್ನು ನಾಶ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಜವರೇಗೌಡ ಅವರ ಪುತ್ರಿ ಸುಷ್ಮಾ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸುಷ್ಮಾ ಮೇಲುಕೋಟೆ ಪೊಲೀಸರಿಗೆ ದೂರು ನೀಡಿದ್ದರು, ಇದೂವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜವರೇಗೌಡ ಅವರ ಪುತ್ರ ಆನಂದ್ ನುಡಿಕರ್ನಾಟಕ.ಕಾಂಗೆ ತಿಳಿಸಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ಜವರೇಗೌಡರ ಪುತ್ರಿ ಸುಷ್ಮಾ ನ್ಯಾಮನಹಳ್ಳಿ ಗ್ರಾಮದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಆ ಸಮಯದಲ್ಲಿ ಜವರೇಗೌಡರ ಅಣ್ಣ ತಮ್ಮಂದಿರೆಲ್ಲ ಸೇರಿ ನ್ಯಾಯ ಪಂಚಾಯಿತಿ ಮಾಡಿ, ಯಾವುದೇ ಕಾರಣಕ್ಕೂ ಸುಷ್ಮಾ ಹಾಗೂ ಆತನ ಗಂಡನನ್ನು ಮನೆಗೆ ಸೇರಿಸಬಾರದು ಎಂದು ಜವರೇಗೌಡ ಅವರ ಕುಟುಂಬದವರಿಗೆ ಎಚ್ಚರಿಕೆ ನೀಡಿದರು. ಆದರಂತೆ 2 ವರ್ಷಗಳ ಕಾಲ ಸುಷ್ಮಾ ಕುಟುಂಬವನ್ನು ದೂರವಿಡಲಾಗಿತ್ತು. ಆನಂತರ ಸುಷ್ಮಾ ಅವರಿಗೆ ಮಗುವಾದ ಹಿನ್ನೆಲೆಯಲ್ಲಿ ಬಿಟ್ಟಿರಲಾಗದೇ ಆಕೆಯನ್ನು ಜವರೇಗೌಡರ ಕುಟುಂಬ ಮನೆಗೆ ಕರೆತಂದಿತ್ತು. ಇದರಿಂದ ಕುಪಿತಗೊಂಡ ದಯಾದಿಗಳು ಜಮೀನಿಗೆ ನುಗ್ಗಿ ದಾಂಧಲೆ ನಡೆಸಿ, ₹ 15 ಲಕ್ಷಕ್ಕಿಂತ ಹೆಚ್ಚು ನಷ್ಟ ಉಂಟು ಮಾಡಿದ್ದಾರೆಂದು ಆನಂದ್ ತಿಳಿಸಿದ್ದಾರೆ.

ಈ ದಾಂಧಲೆ ಪ್ರಕರಣದಲ್ಲಿ ಕೆನರಾ ಬ್ಯಾಂಕಿನ ನೌಕರ ಭಾಸ್ಕರ, ದೊಡ್ಡಪ್ಪ ರಾಮೇಗೌಡ, ಚಿಕ್ಕಪ್ಪಂದಿರಾಧ ನಾರಾಯಣ, ಕೃಷ್ಣೇಗೌಡ, ಅವರ ಕುಟುಂಬದ ಯೋಗ, ಜಯಮ್ಮ, ಶಶಿಕಲಾ, ಭವ್ಯ, ಮಂಜುಳಾ, ವರಲಕ್ಷ್ಮಿ ಭಾಗಿಯಾಗಿದ್ದರು ಎಂದು ಅವರು ದೂರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!