Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ : ಪಿಎಂಎನ್

ಮಳವಳ್ಳಿ ಕ್ಷೇತ್ರದಲ್ಲಿ ಯಾರ ಅವಧಿಯಲ್ಲಿ ಯಾವ್ಯಾವ ಅಭಿವೃದ್ದಿ ಕಾರ್ಯಗಳು ನಡೆದಿವೆ ಎನ್ನುವುದರ ಬಗ್ಗೆ ಚರ್ಚೆ ನಡೆಯಲಿ,ಬಹಿರಂಗ ಚರ್ಚೆಗೆ ತಾನು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಸವಾಲು ಹಾಕಿದರು.

ತಾಲ್ಲೂಕಿನ ಕಾಳಕೆಂಪನದೊಡ್ಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸರ್ಕಾರದಿಂದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿ ಮಾಡುವುದರ ಮೂಲಕ ಮತದಾರರ ಪ್ರಭುಗಳ ಋಣ ತೀರಿಸಬೇಕೇ ಹೊರತು ಚಂದದ ಮಾತಿನಿಂದಲ್ಲ.
ಯಾವುದೇ ವಿಶೇಷ ಯೋಜನೆಗಳು ಇಲ್ಲದ ಮಳವಳ್ಳಿ ಕ್ಷೇತ್ರದಲ್ಲಿ ಅಭಿವೃದ್ದಿ ಎಂಬುವುದು ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಕಾಡಿ,ಬೇಡಿಯಾದರೂ ಅನುದಾನ ತಂದು ಅಭಿವೃದ್ದಿ ಪಡಿಸುವುದು ಶಾಸಕರ ಕರ್ತವ್ಯವಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ಮಳವಳ್ಳಿಗೆ ಯಾವುದೇ ಹೊಸ ಯೋಜನೆಗಳು ಬಂದಿಲ್ಲ, ಜೊತೆಗೆ ಹಲಗೂರು ಭಾಗಕ್ಕೆ ನೀರಾವರಿ ಯೋಜನೆಯನ್ನು ತರುತ್ತೇನೆಂದು ಕೊಟ್ಟಿದ್ದ ಭರವಸೆ ಇಂದಿಗೂ ಈಡೇರಿಲ್ಲ ಎಂದರು.

ತನ್ನ ಅಧಿಕಾರದ ಅವಧಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಕನಕದಾಸ ಕ್ರೀಡಾಂಗಣ, ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಆದರ್ಶಶಾಲೆ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ಕಸ್ತೂರಿ ಬಾ ಶಾಲೆ, ಪಾಲಿಟೆಕ್ನಿಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕೊಡಲಾಗಿತ್ತು. ನಿರುದ್ಯೋಗಿ ಯುವಕರ ಅನುಕೂಲಕ್ಕಾಗಿ ಕೆ,ಎಸ್‌ಆರ್‌ಟಿಸಿ ತರಬೇತಿ ಕೇಂದ್ರ ತೆರೆದಿದ್ದು, ಸಾವಿರಾರು ಮಂದಿ ತರಬೇತಿ ಪಡೆದು ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು.

ಮೀನು ಮಾರಾಟಗಾರರಿಗೆ ಮಾರುಕಟ್ಟೆ ಕಲ್ಪಿಸಲು ಮಂಡ್ಯ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಮೀನು ಮಾರುಕಟ್ಟೆ ನಿರ್ಮಾಣ, ಮಹಿಳೆಯರ ಅನುಕೂಲಕ್ಕಾಗಿ ಸ್ತ್ರೀ ಶಕ್ತಿ ಭವನ, ಕೊನೆಯ ಭಾಗಕ್ಕೆ ನೀರು ಕಲ್ಪಿಸಲು ತಿಟ್ಟಮಾರನಹಳ್ಳಿ ಏತ ನೀರಾವರಿ, ಕಿರುಗಾವಲು ಬಹು ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ, ಪಟ್ಟಣಕ್ಕೆ ೨೪*೭ ನೀರು ಪೂರೈಕೆ,ನಾಲೆ ಆಧುನೀಕರಣ, ಪೂರಿಗಾಲಿ ಹನಿನೀರಾವರಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ತಂದು ಅಭಿವೃದ್ದಿ ಪಡಿಸಲಾಗಿದೆ. ಆದರೆ ಈಗಿನ ಶಾಸಕರು ಬಂದು ನಾಲ್ಕು ವರ್ಷವಾದರೂ ಇಂದಿಗೂ ಹಲವು ಯೋಜನೆಗಳು ಪೂರ್ಣಗೊಳ್ಳದಿರುವುದು ವಿಷಾದನೀಯ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ, ಪೆಟ್ಟಿ ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ರಾಜರೋಷವಾಗಿ ನಡೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಆಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಳ ಮಾಡುವುದರ ಮೂಲಕ ಬಡವರ ಬದುಕಿಗೆ ಬರೆ ಎಳೆಯುತ್ತಿದೆ. ಧರ್ಮದ ಮೂಲಕ ಯುವಕರ ಭಾವನೆಗಳನ್ನು ಕೆರಳಿಸುವುದರ ಮೂಲಕ ದೇಶದಲ್ಲಿ ಅಶಾಂತಿ ಉಂಟು ಮಾಡಲು ಹೊರಟಿದ್ದಾರೆ‌. ಯುವಕರು ಕೋಮುವಾದಿಗಳ ವಿರುದ್ದ ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಸುಂದರರಾಜು, ತಾ.ಪಂ ಮಾಜಿ ಅಧ್ಯಕ್ಷ ಆರ್.ಎನ್.ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಲಿಂಗರಾಜು, ಗ್ರಾ,ಪಂ ಮಾಜಿ ಅಧ್ಯಕ್ಷ ಸಿ.ಪಿ.ರಾಜು, ಮಹದೇವು, ಗ್ರಾ.ಪಂ ಸದಸ್ಯ. ಚನ್ನಿಗರಾಮು, ಮುಖಂಡರಾದ ವಿಶ್ವ, ರೋಹಿತ್,ರಘು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!