Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಧುಮೇಹ ಭಯ ಬೇಡ:ಎಚ್ಚರಿಕೆ ಇರಲಿ

ಮಧುಮೇಹ ಅಥವಾ ಡಯಾಬಿಟಿಸ್ ಎಂಬುದು ಇಂದು ವಿಶ್ವವನ್ನು ಅತಿ ಹೆಚ್ಚು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಾದ್ಯಂತ ಪ್ರತಿವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ.

ಮಧುಮೇಹ ಬಂದರೆ ಭಯ ಪಡುವ ಅಗತ್ಯವಿಲ್ಲ.ಆದರೆ ಎಚ್ಚರಿಕೆಯಿಂದ ಜೀವನ ಸಾಗಿಸಬೇಕು.ವೈದ್ಯರ ಸಲಹೆ,ಸಕ್ಕರೆ ಪ್ರಮಾಣ ನಿಯಂತ್ರಣ, ನಿಯಮಿತ ವ್ಯಾಯಾಮ, ಕಟ್ಟುನಿಟ್ಟಾದ ಆಹಾರ ಕ್ರಮಗಳಿಂದ ಮಧುಮೇಹದೊಂದಿಗೆ ದೀರ್ಘ ಕಾಲ ಜೀವನ ಸಾಗಿಸಬಹುದು ಎನ್ನುತ್ತಾರೆ ಮಂಡ್ಯ ನಗರದ ಗುತ್ತಲು ರಸ್ತೆಯಲ್ಲಿರುವ ಡಯಾಕೇರ್ ಡಯಾಬೆಟಿಕ್ ಹೆಲ್ತ್ ಸೆಂಟರ್ ನ ಮಧುಮೇಹ ತಜ್ಞ ಡಾ.ಅರುಣ್ ಎಸ್.

ಮಧುಮೇಹ ಅಂದರೆ
ಮನುಷ್ಯನ ದೇಹದಲ್ಲಿರುವ ಮೇದೋಜೀರಕ ಗ್ರಂಥಿ ಅವಶ್ಯವಿರುವಷ್ಟು ಇನ್ಸುಲಿನ್​ ಅನ್ನು ಉತ್ಪಾದನೆ ಮಾಡುವುದನ್ನು ನಿಲ್ಲಿಸಿದಾಗ ಮಧುಮೇಹ (ಡಯಾಬಿಟಿಸ್) ಉಂಟಾಗುತ್ತದೆ. ಇದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಿ ಹೈಪರ್​ಗ್ಲೈಸೇಮಿಯಾ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ಸೂಕ್ತವಾದ ಜೀವನಶೈಲಿಯಿಂದ ಮಧುಮೇಹ ನಿಯಂತ್ರಣದಲ್ಲಿ ಇಟ್ಟುಕೊಂಡು ಧೀರ್ಘಕಾಲ ಬದುಕಬಹುದು.

ಟೈಪ್ 1 ಡಯಾಬಿಟಿಸ್
ಡಯಾಬಿಟಿಸ್ ನಲ್ಲಿ ಎರಡು ವಿಧ ಇದೆ‌
ಟೈಪ್ ಒನ್ ಡಯಾಬಿಟಿಸ್ ಇದನ್ನು ಹೆಚ್ಚಾಗಿ ಮಕ್ಕಳಲ್ಲಿ ಕಾಣಬಹುದು. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪತ್ತಿಯಾಗದೆ ಇರುವುದು. ಮಕ್ಕಳ ದೇಹದಲ್ಲಿ ಸ್ವಲ್ಪವೂ ಇನ್ಸುಲಿನ್ ಉತ್ಪಾದನೆ ಆಗುವುದಿಲ್ಲ.ಇವರಿಗೆ ಮಾತ್ರೆಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇವರಿಗೆ ಜೀವಿತಾವಧಿಯವರೆಗೂ ಇನ್ಸುಲಿನ್ ಕೊಡಲೇಬೇಕು. ಒಂದು ವರ್ಷ, 5 ವರ್ಷ, 9 ವರ್ಷ, 15 ವರ್ಷದ ಮಕ್ಕಳಲ್ಲಿ ಟೈಪ್ ಒನ್ ಡಯಾಬಿಟಿಸ್ ಕಾಣಿಸಿಕೊಳ್ಳಬಹುದು.

ಒಂದು ವರ್ಷ,ಎರಡು ವರ್ಷದ ಮಕ್ಕಳಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದಾಗ ಅತಿಯಾಗಿ ಬೆವರುವುದು, ವಾಂತಿ ಮಾಡಿಕೊಳ್ಳುವುದು, ಹಾಲು ಕುಡಿಯಲು ನಿರಾಕರಿಸುವುದು, ಸುಸ್ತು ಕಾಣಿಸಿಕೊಂಡರೆ, ಐದು ವರ್ಷದ ಮಕ್ಕಳಲ್ಲಿ ಸದಾ ಮಂಕಾಗಿರುವುದು, ಓದಿನಲ್ಲಿ ಆಸಕ್ತಿ ಇರದಿರುವುದು, ಊಟ ಸೇರದಿರುವುದು, ವಾಂತಿ, ಸುಸ್ತಾಗಿ ಬೀಳುವುದು, ತೂಕದ ಪ್ರಮಾಣ ಕಡಿಮೆಯಾಗುವುದು, ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಆಗ ನಾವು ಅಂತಹ ಮಕ್ಕಳಿಗೆ ಸಿ ಪೆಪ್ ಟೈಡ್ ಪರೀಕ್ಷೆಯನ್ನು ಮಾಡಿಸಿ ಮಧುಮೇಹ ಕಂಡುಹಿಡಿಯುತ್ತೇವೆ. ನಂತರ ಅವರಿಗೆ ಅಗತ್ಯ ಚಿಕಿತ್ಸೆ ನೀಡುತ್ತೇವೆ.

ಟೈಪ್ 2 ಡಯಾಬಿಟಿಸ್
ಇದರಲ್ಲಿ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತದೆ. 2ನೇ ವಿಧದ ಮಧುಮೇಹದ ಲಕ್ಷಣದಲ್ಲಿ ಆಯಾಸ, ತೂಕ ಕಡಿಮೆಯಾಗುವುದು, ಆಗಾಗ ಮೂತ್ರ ವಿಸರ್ಜನೆ, ದೃಷ್ಟಿ ಮಂದವಾಗುವುದು, ಅತಿಯಾದ ಹಸಿವು, ಕಾಲು ನೋವು, ಕಾಲಿನಲ್ಲಿ ಸ್ಪರ್ಶಜ್ಞಾನ ಇಲ್ಲದಿರುವುದು, ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರದಿದ್ದರೆ ಕಣ್ಣಿನ ದೃಷ್ಟಿ ಕಾಣಿಸದಿರುವುದು,ಹೀಗೆ ಹಲವು ಲಕ್ಷಣಗಳನ್ನು ನಾವು ಕಾಣಬಹುದು. ಮಧುಮೇಹ 2 ನಲ್ಲಿ ಸುಮಾರು 25 ವರ್ಷದಿಂದ 90-92 ವರ್ಷದವರೆಗೂ ಮಧುಮೇಹಿಗಳು ನಮ್ಮ ಕ್ಲಿನಿಕ್ ಗೆ ಬರುತ್ತಾರೆ.

ನಿಯಮಿತವಾದ ಆಹಾರ ಸೇವನೆ, ಕಾಲ ಕಾಲಕ್ಕೆ ಮಾತ್ರೆ ಎಲ್ಲವನ್ನು ತೆಗೆದುಕೊಂಡರೆ ನೂರು ವರ್ಷದವರೆಗೂ ಬದುಕಬಹುದು.

ವರ್ಷಕ್ಕೊಮ್ಮೆ ತಪಾಸಣೆ ಇರಲಿ
ಎಷ್ಟೋ ಸಂದರ್ಭದಲ್ಲಿ ಅನೇಕರಿಗೆ ಸಕ್ಕರೆ ಕಾಯಿಲೆ ಲಕ್ಷಣಗಳು ಕಂಡುಬರುವುದಿಲ್ಲ. ಆದ್ದರಿಂದ ವರ್ಷಕ್ಕೊಮ್ಮೆ ಪ್ರತಿಯೊಬ್ಬರೂ ಮಧುಮೇಹ (ಡಯಾಬಿಟಿಸ್) ಪರೀಕ್ಷೆ ಮಾಡಿಸಿಕೊಳ್ಳಬೇಕು. ಪದೇ ಪದೇ ಮೂತ್ರ ವಿಸರ್ಜನೆ, ತುಂಬಾ ಬಾಯಾರಿಕೆ, ಕಣ್ಣು ಸ್ವಲ್ಪ ಮುಂಜಾಗುವುದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು, ಕೈ ಕಾಲು ಉರಿ, ಜೋಗು, ಹೊಟ್ಟೆ ಹಸಿವಾಗದಿರುವುದು ಇವೆಲ್ಲವೂ ಕಂಡುಬಂದರೆ ತಕ್ಷಣ ಮಧುಮೇಹ ತಜ್ಞರ ಬಳಿ ಹೋಗಿ ಡಯಾಬಿಟಿಸ್ ಪರೀಕ್ಷೆ ಮಾಡಿಸಿ ನಂತರ ವೈದ್ಯರ ಸಲಹೆಯಂತೆ ಮುಂದುವರೆಯಬೇಕು.

ಆಹಾರ ಕ್ರಮ ಹೀಗಿರಲಿ
ಸಕ್ಕರೆ ಕಾಯಿಲೆ ಬಂದೊಡನೆ ಅನ್ನ ತಿನ್ನಬಾರದು, ಮುದ್ದೆ ತಿನ್ನಬಾರದು, ಗೋಧಿ ತಿನ್ನಬಾರದು ಎಂದೆಲ್ಲ ಹೇಳುವುದು ಸರಿಯಲ್ಲ. ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ಕೊಬ್ಬು ಎಲ್ಲವೂ ಸಮ ಪ್ರಮಾಣದಲ್ಲಿ ಬೇಕು. ಒಂದು ಕಪ್ ಅನ್ನ ತಿಂದಾಗ,ಮುದ್ದೆ ತಿಂದಾಗ,ಚಪಾತಿ ತಿಂದಾಗ ಅದಕ್ಕಿಂತ ಹೆಚ್ಚಾಗಿ ಕಾಳುಗಳನ್ನು, ತರಕಾರಿಗಳನ್ನು ತಿನ್ನಬೇಕು. ಅನ್ನ ತಿಂದರೆ ಸಕ್ಕರೆ ಪ್ರಮಾಣ ಜಾಸ್ತಿಯಾಗುತ್ತದೆ ಎನ್ನುವುದು ತಪ್ಪು ತಿಳುವಳಿಕೆ.ನಿಯಮಿತವಾಗಿ ಸೇವಿಸಿದರೆ ಯಾವ ತೊಂದರೆಯೂ ಆಗುವುದಿಲ್ಲ. ಪಚ್ಚಬಾಳೆಯಲ್ಲಿ ಸಕ್ಕರೆ ಪ್ರಮಾಣ ಹೆಚ್ಚು, ಏಲಕ್ಕಿ ಬಾಳೆ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಇಲ್ಲ ಎನ್ನುವುದು ಸರಿಯಲ್ಲ. ಏಲಕ್ಕಿ ಬಾಳೆಹಣ್ಣಿನಲ್ಲಿ ಸಾಕಷ್ಟು ಸಕ್ಕರೆ ಪ್ರಮಾಣ ಇರುತ್ತದೆ.

ಕಾಫಿ,ಟೀ ನಿಯಮಿತವಾಗಿ ದಿನಕ್ಕೆ ಒಂದೆರಡು ಬಾರಿ ಕುಡಿಯಬೇಕು.ಬೆಲ್ಲದ ಕಾಫಿ ಕುಡಿದರೂ ಸಕ್ಕರೆ ಪ್ರಮಾಣ ಏರುತ್ತದೆ. ಊಟದಲ್ಲಿ ತರಕಾರಿ ಪಲ್ಯ ಹೆಚ್ಚಾಗಿರಲಿ. ಮೊಟ್ಟೆ, ಚಿಕನ್ ಮತ್ತು ಮೀನು ಬಳಸಬಹುದು. ಸೌತೆಕಾಯಿ, ನೀರು ಮಜ್ಜಿಗೆ, ಟಮೊಟೊ ಸಲಾಡ್, ತರಕಾರಿ ಎಲ್ಲವನ್ನು ತಿನ್ನಬಹುದು.

ಹಣ್ಣುಗಳಲ್ಲಿ ಮಾವಿನ ಹಣ್ಣು, ಹಲಸಿನ ಹಣ್ಣು,ದ್ರಾಕ್ಷಿ ಮುಂತಾದ ಸಕ್ಕರೆ ಪ್ರಮಾಣ ಜಾಸ್ತಿ ಇರುವ ಹಣ್ಣುಗಳನ್ನು ಬಿಟ್ಟು ಅರ್ಧ ಭಾಗ ಸೇಬು, ಪಪ್ಪಾಯ ಒಂದೆರಡು ಹೋಳು ತಿಂದರೆ ಯಾವುದೇ ತೊಂದರೆ ಇಲ್ಲ.

ಭಯಬೇಡ
ಡಯಾಬಿಟಿಕ್ ಬಂದೊಡನೆ ಅಯ್ಯೋ ಎಂದು ಕೂರುತ್ತ ಕೊರಗುವುದು ಬೇಡ. ನಿಯಮಿತವಾಗಿ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸಂತೋಷದಿಂದ ಜೀವನ ಸಾಗಿಸಬಹುದು. ಪ್ರತಿನಿತ್ಯ ವಾಕಿಂಗ್, ಜಾಗಿಂಗ್,ವ್ಯಾಯಾಮ ಮಾಡಿಕೊಂಡು ಇತರರಂತೆ ನೆಮ್ಮದಿಯಿಂದ ಇರಬಹುದು.

ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನತೆ ಸಿಕ್ಕಿದ್ದನ್ನು ತಿಂದು, ಕುಡಿದು ವಿಲಾಸಿ ಜೀವನದ ಮನಸ್ಥಿತಿಯನ್ನು ಅಳವಡಿಸಿಕೊಂಡಿರುವುದು,ದಿನನಿತ್ಯ ವಾಕಿಂಗ್,ಜಾಗಿಂಗ್ ಯಾವುದನ್ನೂ ಮಾಡದಿರುವುದು ಕೂಡ ಮಧುಮೇಹ ಬರಲು ಕಾರಣವಾಗಿದೆ.

ಆದ್ದರಿಂದ ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್, ಜಾಕಿಂಗ್ ಶಟಲ್ ಮತ್ತಿತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಸಕ್ಕರೆ ಕಾಯಿಲೆ ಹತ್ತಿರವೂ ಸುಳಿಯುವುದಿಲ್ಲ ಎನ್ನುತ್ತಾರೆ ಡಾ.ಅರುಣ್.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!