Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಯಾಲಿಸಿಸ್ ಚಿಕಿತ್ಸೆ ಸರ್ಕಾರ ನಿರ್ವಹಣೆ ಮಾಡಲು ಆಗ್ರಹ

ಡಯಾಲಿಸಿಸ್ ಚಿಕಿತ್ಸೆಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸದೇ ಸರ್ಕಾರವೇ ಮಾಡಬೇಕೆಂದು ಡಯಾಲಿಸಿಸ್ ರೋಗಿಗಳು ಆಗ್ರಹಿಸಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದ ಮುಂದೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೋಗಿಗಳು ಪ್ರತಿಭಟನೆ ನಡೆಸಿ,ರೋಗಿಗಳಿಗೆ ಸಕಾಲಕ್ಕೆ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗುವಂತಹ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾವು ಈ ಹಿಂದೆ 4 ವರ್ಷಗಳ ಕಾಲ ಬಿ.ಆರ್.ಎಸ್. ಸಂಸ್ಥೆಗೆ ಡಯಾಲಿಸಿಸ್ ನಿರ್ವಹಣೆಯ ಗುತ್ತಿಗೆ ನೀಡಿತ್ತು. ಆಗ ಗುಣಮಟ್ಟದ ಚಿಕಿತ್ಸೆ ಸಿಗುತ್ತಿತ್ತು.

2021ರ ಆಗಸ್ಟ್ ನಿಂದ 6 ತಿಂಗಳು ಸರ್ಕಾರವೇ ನಿರ್ವಹಣೆ ವಹಿಸಿಕೊಂಡಿತ್ತು. ಆಗಲೂ ಉತ್ತಮ ಚಿಕಿತ್ಸೆ ದೊರೆಯುತ್ತಿತ್ತು. ಆದರೆ 2022ರ ಜನವರಿ 10ರಿಂದ ಸಂಜೀವಿನಿ ಎಂಬ ಖಾಸಗಿ ಸಂಸ್ಥೆಗೆ ರಾಜ್ಯದ ಎಲ್ಲಾ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡಲು ಹೊರಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆಯು ಡಯಾಲಿಸಿಸ್ ಕೇಂದ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಡಯಾಲಿಸಿಸ್ ಕೇಂದ್ರಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾಗಿ ವೇತನ ಪಾವತಿ ಮಾಡುತ್ತಿಲ್ಲ. ಡಯಾಲಿಸಿಸ್ ಯಂತ್ರಗಳು ಕೆಟ್ಟು ತಿಂಗಳಾದರೂ ರಿಪೇರಿ ಮಾಡಿಸಿಕೊಡುತ್ತಿಲ್ಲ.

ಇರುವ ಒಂದೇ ಒಂದು ಡಯಾಲಿಸಿಸ್ ಯಂತ್ರದಿಂದ ತಾಲ್ಲೂಕಿನಲ್ಲಿರುವ ಸುಮಾರು 17ಮಂದಿ ಡಯಾಲಿಸಿಸ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ತೊಂದರೆಯಾಗಿದೆ. 4ಗಂಟೆಗಳ ಕಾಲ ಡಯಾಲಿಸಿಸ್ ಮಾಡುವ ಬದಲು, ಕೇವಲ 2ಗಂಟೆ ಮಾತ್ರ ಡಯಾಲಿಸಿಸ್ ಮಾಡಲಾಗುತ್ತಿದೆ. ಇದರಿಂದ ರೋಗಿಗಳು ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಸಿಗುದೇ ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಡಯಾಲಿಸಿಸ್ ರೋಗಿಗಳು ಮೃತಪಟ್ಟಿರುತ್ತಾರೆ ಎಂದರು.

ಬೇರೆ ತಾಲ್ಲೂಕುಗಳಲ್ಲಿ 3ರಿಂದ 4 ಡಯಾಲಿಸಿಸ್ ಯಂತ್ರಗಳು ರೋಗಿಗಳಿಗೆ ಸೇವೆ ನೀಡುತ್ತಿವೆ. ಆದರೆ ಸಚಿವ ನಾರಾಯಣಗೌಡರ ತವರೂರು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕೇವಲ ಎರಡು ಡಯಾಲಿಸಿಸ್ ಯಂತ್ರಗಳು ಇದ್ದು, ಈ ಪೈಕಿ ಒಂದು ಕೆಟ್ಟು ಹೋಗಿ ಒಂದು ತಿಂಗಳು ಕಳೆದರೂ ರಿಪೇರಿಯಾಗಿರುವುದಿಲ್ಲ. ಹಾಗಾಗಿ ಕೂಡಲೇ ಸರ್ಕಾರವು ಈ ಬಗ್ಗೆ ಕ್ರಮ ವಹಿಸಿ ಡಯಾಲಿಸಿಸ್ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸುವ ಬದಲು ಸರ್ಕಾರವೇ ನಿರ್ವಹಣೆ ಮಾಡಿ ಗುಣಮಟ್ಟದ ಚಿಕಿತ್ಸೆ ಕ್ರಮ ವಹಿಸಬೇಕು.

ಅಲ್ಲಿಯವರೆಗೆ ಡಯಾಲಿಸಿಸ್ ಕೇಂದ್ರಗಳಿಗೆ ಸೂಕ್ತ ಸಿಬ್ಬಂದಿ ಹಾಗೂ ಅಗತ್ಯ ಚಿಕಿತ್ಸಾ ಪರಿಕರಗಳನ್ನು ಒದಗಿಸಿಕೊಡಬೇಕು. ಈ ಮೂಲಕ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಡಯಾಲಿಸಿಸ್ ರೋಗಿಗಳು ಸರ್ಕಾರವನ್ನು ಒತ್ತಾಯ ಮಾಡಿದರು.

ರೋಗಿಗಳ ಮನವಿಯನ್ನು ಆಲಿಸಿದ ದುಂಡಶೆಟ್ಟಿ, ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎ.ರವಿ ಅವರು ಖಾಸಗಿ ಏಜೆನ್ಸಿಯ ಸಿಬ್ಬಂದಿಗಳು ರಾಜ್ಯಾದ್ಯಂತ ತಮ್ಮ ವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ರೋಗಿಗಳಿಗೆ ತೊಂದರೆಯಾಗದಂತೆ ನಮ್ಮ ಆಸ್ಪತ್ರೆಯ ದಾದಿಯರಿಂದ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು.

ಅಲ್ಲದೆ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸುವ ಮೂಲಕ ಮುಂದಿನ ದಿನಗಳಲ್ಲಿ ಸೂಕ್ತ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಡಯಾಲಿಸಿಸ್ ರೋಗಿಗಳು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಡಯಾಲಿಸಿಸ್ ರೋಗಿಗಳಾದ ದುಡುಕನಹಳ್ಳಿ ಚಂದ್ರಪ್ಪ, ಮಹದೇವ್, ತೇಜಸ್ವಿನಿ, ತೋಯಜಾಕ್ಷಮ್ಮ, ಗಾಯಿತ್ರಿ, ಕೃಷ್ಣೇಗೌಡ, ಕುಮಾರಗೌಡ, ಅನಂದ್, ಅಭಿಷೇಕ್, ಗಿರೀಶ್, ಯಶೋಧಮ್ಮ, ಮಂದಗೆರೆ ಪುಟ್ಟಸಿದ್ದಮ್ಮ, ಮಂಜುನಾಥ್, ಮಹಮದ್ ಇಮ್ರಾನ್ ಸೇರಿದಂತೆ ಹಲವು ರೋಗಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!