Friday, September 20, 2024

ಪ್ರಾಯೋಗಿಕ ಆವೃತ್ತಿ

ಬದುಕುವ ಹಕ್ಕು- ಆಯ್ಕೆ – ಘನತೆ ಮತ್ತು ಸ್ವಾತಂತ್ರ್ಯ……

✍️ ವಿವೇಕಾನಂದ ಎಚ್.ಕೆ

ವಾದಗಳು, ಸಿದ್ದಾಂತಗಳು, ನಿಲುವುಗಳು ಇರುವುದು ನಮಗಾಗಿಯೋ ಅಥವಾ ನಾವು ಇರುವುದು ಇವುಗಳಿಗಾಗಿಯೋ……………

ಪುರೋಹಿತ ಶಾಹಿ,
ಬ್ರಾಹ್ಮಣ್ಯ,
ಮನುವಾದ,
ಅಂಬೇಡ್ಕರ್ ವಾದ,
ಸಮಾಜವಾದ,
ಸಮತಾವಾದ,
ಮಾವೋವಾದ,
ಗಾಂಧಿ ವಾದ,
ಲೋಹಿಯಾ ವಾದ,
ನಾಜಿ ವಾದ,
ಬಸವ ತತ್ವ,
ಕ್ರೈಸ್ತ ಧರ್ಮ,
ಇಸ್ಲಾಂ ಧರ್ಮ,
ಬೌದ್ಧ ಧರ್ಮ,
ಹಿಂದೂ ಧರ್ಮ,
ಜೈನ ಧರ್ಮ,
ಸಿಖ್ ಧರ್ಮ,
ಪಾರ್ಸಿ ಧರ್ಮ,
ಜೋರಾಷ್ಟ್ರಿಯನ್ ಧರ್ಮ,
ಅಲ್ಲಾ ಯೇಸು,
ರಾಮ ಕೃಷ್ಣ,
ಸರ್ಕಾರ,
ಪೋಲೀಸ್,
ನ್ಯಾಯಾಲಯ,
ಕಾನೂನು,
ಸಂವಿಧಾನ,

ಎಷ್ಟೊಂದು ವಿಧಗಳು………..

ಹುಟ್ಟು ಸಾವಿನ ನಡುವಿನ ಸುಮಾರು 70/80 ವರ್ಷದ ಸಮಯವನ್ನು ಉಪಯುಕ್ತವಾಗಿ ಕಳೆಯಲು ಎಷ್ಟೊಂದು ಸರ್ಕಸ್ ಮಾಡಬೇಕಾಗಿದೆ……

2/3 ಹೊತ್ತಿನ ಊಟ, ಒಂದಷ್ಟು ದೈಹಿಕ ವಾಂಛೆಗಳು, ಸ್ವಲ್ಪ ನಿದ್ದೆ, ಸಂಸಾರ, ಇಷ್ಟು ಮಾತ್ರಕ್ಕೆ, ಅದನ್ನು ಕ್ರಮಬದ್ಧ ಗೊಳಿಸಲು ಏನೇನೇಲ್ಲಾ ಸಿದ್ದಾಂತಗಳು…….

ತೆಗೆದುಕೊಂಡು ಬಂದಿರುವುದು ಏನಿಲ್ಲ,
ತೆಗೆದುಕೊಂಡು ಹೋಗುವುದೂ ಏನು ಇಲ್ಲ,
ಸಾವನ್ನು ಗೆಲ್ಲಲೂ ಸಾಧ್ಯವಿಲ್ಲ,
ಹಾಗಿದ್ದರೂ ಎಷ್ಟೊಂದು ತಾಕಲಾಟಗಳು…….

ಆದರೂ,
ಇನ್ನೂ ಸಾಮಾನ್ಯ ಜನರ ನೆಮ್ಮದಿ ಗಗನ ಕುಸುಮವಾಗಿದೆ.
ನಾಗರಿಕ ಸಮಾಜ ಕನಸೇ ಆಗಿದೆ……

ಸಹಜ ಸರಳ ಪ್ರಕೃತಿಯಿಂದ ದೂರವಾಗುತ್ತಾ ಅನುಕೂಲ ಸಿಂದು ವಿಚಾರಗಳನ್ನು ಅಳವಡಿಸಿಕೊಂಡಿರುವುದೇ ಇದಕ್ಕೆ ಬಹುತೇಕ ಕಾರಣ.

ಬದಲಾಗುವ ಸಮಯ ಬಂದಿದೆ… ‌‌‌.‌……..

ಬನ್ನಿ ನೊಂದವರೆ ನನ್ನೊಂದಿಗೆ
ಸಪ್ತ ಸಾಗರದಾಚೆಯ ನಾಡಿಗೆ
ಸಿಹಿ ನೀರ ಸರೋವರದ ಮಧ್ಯದ ಬೀಡಿಗೆ…..

ಈ ಭೂಮಿಯೇನು ಇವರಪ್ಪನದಲ್ಲ,
100×100 ಸೈಟುಗಳೇ ಭೂಮಿಯಲ್ಲ,
ನಾಮ ಬುರ್ಖಾ ಕ್ರಾಸ್ ಗಳೇ ಧರ್ಮಗಳಲ್ಲ,
ಬೃಹತ್ ಬಂಗಲೆಗಳೇ ನೆಮ್ಮದಿಯ ತಾಣವಲ್ಲ,
ಶ್ರೀಮಂತಿಕೆಯೇ ಬದುಕಿನ ಸತ್ಯವಲ್ಲ,
ಶಾಸ್ತ್ರ ಸಂಪ್ರದಾಯಗಳೇ ಬದುಕಲ್ಲ,
ನೀತಿ ನಿಯಮಗಳೇ ಜೀವನವಲ್ಲ,……

ನಾವೇನು ಕಳ್ಳರಲ್ಲ,
ದಟ್ಟ ಕಾಡಿನ ಸ್ವಚ್ಚ ಗಾಳಿಯ ಮುಗ್ಧ ಮನಸಿನ ನಾಡಿಗೆ ಹೋಗೋಣ,
ನೀವು ಹಾಡಿದ್ದೇ ಹಾಡು, ಕುಣಿದದ್ದೇ ನೃತ್ಯ,….

ನಿಮ್ಮ ಹೆಸರನ್ನೂ ಕೇಳುವುದಿಲ್ಲ,
ಭಾವನೆಗಳನ್ನು ಕೆದಕುವುದಿಲ್ಲ,
ಮರದ ಹಣ್ಣು ಗಿಡದ ತರಕಾರಿ ನೆಲದ ಗೆಡ್ಡೆಗಳು,
ತಣ್ಣನೆಯ ಗಾಳಿ, ಗಿರಿ ಮಡಿಲ ನೀರು ಉಣಬಡಿಸುವೆ…..

ಕೆಮ್ಮು ನೆಗಡಿಗಳಿಲ್ಲ, ರೋಗರುಜಿನಗಳಿಲ್ಲ,
ಹುಣ್ಣಿಮೆಯ ಬೆಳಕು, ಅಮವಾಸ್ಯೆಯ ಕತ್ತಲು,
ಭೋರ್ಗರೆವ ಮಳೆ,
ಹಿಮ ರಾಶಿಯ
ಸೌಂದರ್ಯ ಸವಿಯೋಣ ಬನ್ನಿ…..

ಬೇಸರವಿಲ್ಲ, ಕೋಪವಿಲ್ಲ ದ್ವೇಷವಿಲ್ಲ,
ಪ್ರತಿ ಕ್ಷಣವೂ ಬದುಕಿನೊಂದಿಗೆ ಸರಸ ಸಲ್ಲಾಪವೇ ಎಲ್ಲಾ,,….

ಕಿಡ್ನಿ ಕದಿಯುವವರಿಲ್ಲ,
ಭ್ರೂಣ ಹತ್ಯೆ ಮಾಡುವವರಿಲ್ಲ,
ಜಾತಿ ನಿಂದನೆ ಇರುವುದಿಲ್ಲ,
ಹಣ ದೋಚುವವರಿಲ್ಲ,…..

ನಿನಗಷ್ಟೇ ಬೆಲೆ, ಉಳಿದದ್ದು ಲೆಕ್ಕಕ್ಕೇ ಇಲ್ಲ,
ಬಟ್ಟೆಯ ಹಂಗಿಲ್ಲ, ಅಶ್ಲೀಲತೆಯ ಸೋಂಕಿಲ್ಲ,
ಬಹುಮಾನವೂ ಇಲ್ಲ, ಶಿಕ್ಷೆಯೂ ಇಲ್ಲ…..

ಕಪಟಿಗಳ ಉಪಟಳವೂ ಇಲ್ಲ,
ಬೆನ್ನಿಗೆ ಚೂರಿ ಹಾಕುವವರಿಲ್ಲ, ಇಲ್ಲ,
ಹೃದಯಕ್ಕೆ ತಿವಿಯುವವರೂ ಇಲ್ಲ…..

ನಿನಗೆ ನೀನೆ ರಾಜ, ನೀನೇ ಸಾಮ್ರಾಟ, ನೀನೇ ಚಕ್ರವರ್ತಿ,
ನಿಮ್ಮ ಬದುಕು ನಿಮ್ಮ ಆಯ್ಕೆ….

ಅನಾಗರಿಕರನ್ನು ತೊರೆದು ಬನ್ನಿ,
ಆತ್ಮವಂಚಕರನ್ನು ಬಿಟ್ಟು ಬನ್ನಿ,
ಹೊಸ ನಾಗರಿಕ ಜಗತ್ತಿಗೆ ಕರೆದೊಯ್ಯುವೆ ಬನ್ನಿ,

ಬನ್ನಿ ನೊಂದವರೆ ನನ್ನೊಂದಿಗೆ
ಸಪ್ತ ಸಾಗರದಾಚೆಯ ನಾಡಿಗೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!