Thursday, September 19, 2024

ಪ್ರಾಯೋಗಿಕ ಆವೃತ್ತಿ

ಆದಿವಾಸಿ ಕುಟುಂಬಗಳಿಗೆ ಕಂಬಳಿ ವಿತರಣೆ ಅವಿಸ್ಮರಣೀಯ: ವಿನಯ್ ಕುಮಾರ್

ನಾಗರಹೊಳೆ ಆದಿವಾಸಿ ಕುಟುಂಬಗಳಿಗೆ ಕಂಬಳಿ ವಿತರಣೆ ಮಾಡಿರುವುದು, ತಮ್ಮ ಬದುಕಿನಲ್ಲಿ ಅನಿರೀಕ್ಷಿತವಾಗಿ ಬಂದ ಅತ್ಯಂತ ಪುಣ್ಯದ ಕಾರ್ಯ, ಇದು ಜೀವನದ ಉದ್ದಕ್ಕೂ ನೆನಪಿನಲ್ಲಿ ಉಳಿಯಬಹುದಾದ ಅವಿಸ್ಮರಣೀಯ ಸಂದರ್ಭ ಎಂದು ಮಧುರ ಮಂಡ್ಯ ಲಯನ್ ಸಂಸ್ಥೆಯ ನೂತನ ಅಧ್ಯಕ್ಷ ಎಂ ವಿನಯ್ ಕುಮಾರ್ ಹೇಳಿದರು.

ಅರುವಿ ಟ್ರಸ್ಟ್, ಮಧುರ ಮಂಡ್ಯ ಲಯನ್ ಸಂಸ್ಥೆ ಮಂಡ್ಯ ಹಾಗೂ ಮಂಡ್ಯದ ಉದಾರಿ ಮನಸುಗಳ ಸಹಯೋಗದಲ್ಲಿ ಈ ನೆಲದ ಮೂಲ ನಿವಾಸಿಗಳು ನಾಗರಹೊಳೆಯ ಆದಿವಾಸಿ ನೂರು ಕುಟುಂಬಗಳಿಗೆ ಕಂಬಳಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಕಲವೂ ಇದ್ದು ಬದುಕು ನಡೆಸುವುದು ದುಃಸ್ತರ ಅಂದುಕೊಳ್ಳುವ ನಾವು ಸಮಸ್ಯೆಗಳನ್ನೇ ಹೊದ್ದುಕೊಂಡು ಮಲಗುವ ನೆಲ ಜಲ ಪರಿಸರ ಸಂರಕ್ಷಣೆಗಾಗಿ ತಮ್ಮ ಬದುಕನ್ನ ಮುಡುಪಾಗಿಟ್ಟಿರುವ ಆದಿವಾಸಿ ಬಂಧುಗಳಗೆ ಕಂಬಳಿಗಳನ್ನು ವಿತರಣೆ ಮಾಡುತ್ತಿರುವುದಕ್ಕೆ ನನ್ನೊಳಗೆ ಒಂದು ಸಾರ್ಥಕ ಭಾವ ಮೊಳಕೆಯೊಡೆಯುತ್ತಿದೆ, ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಈ ರೀತಿಯ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದರು.

ಕಳೆದ ಎಂಟು ವರ್ಷಗಳಿಂದ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವ ಅರುವಿ ಟ್ರಸ್ಟ್ ನ ವಾರ್ಷಿಕೋತ್ಸವ ಸಮಾರಂಭದ ಸಂದರ್ಭದಲ್ಲಿ ಪ್ರತಿ ವರ್ಷವೂ ಆಯೋಜಿಸಿಕೊಂಡು ಬರುತ್ತಿರುವ ಸಮಾಜ ಸೇವಾ ಕಾರ್ಯದ ಭಾಗವಾಗಿ ಈ ವರ್ಷ ನಾಗರಹೊಳೆಯ ಆದಿವಾಸಿ ಕುಟುಂಬಗಳಿಗೆ ಕಂಬಳಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಅರುವಿ ಟ್ರಸ್ಟ್ ಸಂಸ್ಥಾಪಕರಾದ ಅರುಣ ಈಶ್ವರ ನೇತೃತ್ವದಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಂಡ್ಯದಿಂದ ಸುಮಾರು 150ಕ್ಕೂ ಹೆಚ್ಚು ಜನರ ತಂಡವೊಂದು ಭಾಗವಹಿಸಿದ್ದು ವಿಶೇಷವಾಗಿತ್ತು.

ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡುಗಳ ನಾಶದಿಂದಾಗಿ ನಾಡಿಗೆ ಕಂಟಕ ಎದುರಾಗುತ್ತಿವೆ. ಇದರ ಪರಿಣಾಮವಾಗಿ ಅಕಾಲಿಕ ಮಳೆ ಬರಗಾಲ ಅತಿವೃಷ್ಟಿ ಅನಾವೃಷ್ಟಿ ಜೊತೆಗೆ ಕಾಡು ಪ್ರಾಣಿಗಳು ಕಾಡಿನಿಂದ ಊರುಕೇರಿ ನಗರಗಳಿಗೆ ಪ್ರವೇಶಿಸುತ್ತಿವೆ ಇದರಿಂದ ನಾಗರೀಕರಿಗೆ ಭಯ ಹಾಗೂ ಆತಂಕಗಳು ಕಾಡತೊಡಗಿವೆ ಇದಕ್ಕೆ ಪರಿಹಾರವಾಗಿ ನಾವು ಕನಿಷ್ಠ ಕಾಡನ್ನು ಬೆಳೆಸದಿದ್ದರೂ
ಪರವಾಗಿಲ್ಲ ಆದರೆ ಇರುವ ಕಾಡನ್ನು ಉಳಿಸಿಕೊಳ್ಳಬೇಕಾದರೆ ಕಾಡಿನಲ್ಲಿ ವಾಸವಾಗಿರುವ ಆದಿವಾಸಿ ಸಮುದಾಯ ಉಳಿಯಬೇಕಾಗುತ್ತದೆ .ಆದಿವಾಸಿ ಸಮುದಾಯ ಉಳಿದರೆ ಕಾಡು ಉಳಿಯುತ್ತದೆ, ಕಾಡು ಉಳಿದರೆ ಆದಿವಾಸಿ ಸಮುದಾಯ ಹಾಗೂ ನಾಡು ಕೂಡ ಉಳಿಯುತ್ತದೆ. ಈ ಆಶಯದ ಜೊತೆಗೆ ಆದಿವಾಸಿ ಕುಟುಂಬಗಳಿಗೆ ಪುಟ್ಟ ಸಹಾಯ ಮಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು,

ಕಾರ್ಯಕ್ರಮದಲ್ಲಿ ಕಾವೇರಿ ನೀರಾವರಿ ನಿಗಮದ ಕಿರಿಯ ಅಭಿಯಂತರರಾದ ಜಿ.ಎನ್ ಕೆಂಪರಾಜು, ಮಂಜುನಾಥ್ ಮುತ್ತಗೆರೆ, ಕಾಳೇಗೌಡ ರೈಸ್ ಮಿಲ್ ನ ಗುರಣ್ಣ, ಲಯನ್ ಆನಂದ್ , ಲಯನ್ ಕೃಷ್ಣಪ್ಪ, ಲಯನ್ ನಂದೀಶ್,  ಕಾರಸವಾಡಿ ಮಹಾದೇವು, ಮಂಗಲ ಲಂಕೇಶ್, ದೇವರಾಜ್ ಕೊಪ್ಪ, ನಾರಾಯಣ್ ಎಸ್ ಉಮಾಪತಿ ಡಿ, ಶೇಖರ್ ಹನಿಯಂಬಾಡಿ, ಬಸವರಾಜ್ ಸಂತೆಕಸಲಗೆರೆ, ಕೋಮಲ್ ಕುಮಾರ್, ಮಹಾಲಕ್ಷ್ಮಿ ಕೋಮಲ, ಆನಂದ್, ನಾಗಮ್ಮ, ತಾಯಮ್ಮ, ಪದ್ಮ ಮೋಹನ್ ಭಾಗವಹಿಸಿದ್ದರು,

ಇದೇ ಸಂದರ್ಭದಲ್ಲಿ ಕಾಡು ಕುರುಬ ಸಮುದಾಯದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಈ ಎಲ್ಲಾ ಕಾರ್ಯಕ್ರಮವನ್ನು ನಾಗರಹೊಳೆ ಆದಿವಾಸಿ ಮುಖಂಡರಾದ ತಿಮ್ಮ, ಕಾಳ ಮನೋಹರ್ ಹಾಗೂ ರಾಷ್ಟ್ರಮಟ್ಟದ ಬುಡಕಟ್ಟು ಕಲಾವಿದರಾದ ರಮೇಶ್ ಸಂಘಟಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!