Tuesday, September 17, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಶ್ರಮಿಕನಗರಗಳ ಸಮಸ್ಯೆ; ಆದೇಶ ಪಾಲಿಸಲು ಜಿಲ್ಲಾಧಿಕಾರಿ ಖಡಕ್ ಸೂಚನೆ

ಮಂಡ್ಯ ಜಿಲ್ಲಾ ಶ್ರಮಿಕ ನಗರ (ಸ್ಲಂಗಳು)ಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಾವು ನೀಡಿರುವ ಆದೇಶವನ್ನು 15 ದಿನಗಳಲ್ಲಿ ಪಾಲನೆ ಮಾಡಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಮಂಡ್ಯ ನಗರದ (ಸ್ಲಂ) ಶ್ರಮಿಕ ನಗರಗಳ ಸಮಸ್ಯೆಗಳ ಕುರಿತು ಬಹಳ ಮಹತ್ವದ ಸಭೆ ನಡೆಸಿ ಅವರು, 15 ದಿನಗಳ ಒಳಗೆ ನಾನು ಮಾಡಿರುವ ಆದೇಶಗಳು ಪಾಲಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ, ಹಲವು ಶ್ರಮಿಕ ನಗರಗಳ ವಿಚಾರವಾಗಿ ಅಧಿಕಾರಿಗಳ ನಿರ್ಲಕ್ಷತೆ ಬಗ್ಗೆ ಕಿಡಿಕಾರಿದರು.

ಶ್ರಮಿಕ ನಗರ ನಿವಾಸಿಗಳ ಒಕ್ಕೂಟದಿಂದ ಶ್ರಮಿಕ ನಗರಗಳಲ್ಲಿ ಯಾವ ಕೆಲಸಗಳು ನೆನೆಗುದಿಗೆ ಬಿದ್ದಿವೆ ಎಂಬುದರ ಬಗ್ಗೆ ಅಜೆಂಡವನ್ನು ಡ್ರಾಪ್ಟ್ ಮಾಡಿ ನೀಡಲಾಗಿತ್ತು, ಇದರನ್ವಯ ಚರ್ಚೆ ನಡೆಸಿದ ಡಾ.ಕುಮಾರ ಅವರು ಅಧಿಕಾರಿಗಳ ಬೆವರಿಳಿಸಿದರು.

ಕಾಳಿಕಾಂಬ ಶ್ರಮಿಕ ನಗರ ವಿಚಾರವನ್ನು ಕೂಲಂಕುಷವಾಗಿ ಚರ್ಚಿಸಿ ಒತ್ತುವರಿ, ಅಕ್ರಮ ಸಮುದಾಯ ಭವನ ನಿರ್ಮಾಣ ಮಾಡಿಕೊಂಡಿರುವ ಸರ್ವೆ ನಂಬರ್ 845 ಕ್ಕೆ ನೋಟಿಸ್ ಜಾರಿ ಮಾಡುವಂತೆ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು. ಮಂಡ್ಯ ಶಾಸಕರ ಬಳಿ ಈ ವಿಚಾರವಾಗಿ ಚರ್ಚಿಸುತ್ತೇನೆ, ಸ್ಲಂ ಬೋರ್ಡ್ ವಕೀಲರ ಜೊತೆ ಕೂಡಲೇ ಮಾತಾಡಿ ಸರ್ವೆ ನಂಬರ್ 843, 844 ಈ ವ್ಯಾಜ್ಯದ ಬಗ್ಗೆ ಆದೇಶ ಮಾಡಿಸಲು ಸೂಚಿಸಿದರು.

ಮಂಡ್ಯನಗರದ ಕಾಳಪ್ಪ ಬಡಾವಣೆ ವಿಚಾರವಾಗಿ ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲು ಶಾಸಕರಿಗೆ ತಿಳಿಸಿ ಸಮಯವನ್ನು ನಿಗದಿಪಡಿಸುತ್ತೇನೆ, ಆರ್ ಟಿ ಓ ಸ್ಲಂ ಗೆ ಸಂಬಂಧಪಟ್ಟಂತೆ ಸರ್ಕಾರಿ ಖರಾಬ್ ಗುಂಡಿ ಜಾಗವನ್ನು ಪರಿಶೀಲಿಸಿ ಒತ್ತುವರಿ ತೆರವು ಮಾಡಲು ತಹಶೀಲ್ದಾರ್ ಮತ್ತು ಎಸಿ ಅವರಿಗೆ ಆದೇಶ ಮಾಡಿದರು.

ಹೊಸಹಳ್ಳಿ ಗುರುಮಠ ಸ್ಲಂ ವಿಚಾರದಲ್ಲಿ ಸರ್ಕಾರಿ ಕಟ್ಟೆ ಎಂದು ಇರುವುದನ್ನು ರದ್ದು ಪಡಿಸಲು ಮತ್ತೆ ಮರು ಘೋಷಣೆಗೆ ಪ್ರಸ್ತಾಪವನ್ನು ಸಲ್ಲಿಸಲು ಸರ್ಕಾರಕ್ಕೆ ಕಳಿಸುತ್ತೇವೆ. ಸಂಘಟನೆಯಿಂದ ನೀವು ಕೂಡ ಪಾಲೋಪ್ ಮಾಡಿ ಎಂದು ತಿಳಿಸಿದರು

ನ್ಯೂ ತಮಿಳು ಕಾಲೋನಿ ಖಾತೆ ವಿಷಯಕ್ಕೆ ಸಂಬಂಧಿಸಿದಂತೆ ಪರಿಚಯ ಪತ್ರ ಕೊಟ್ಟು ಹಕ್ಕುಪತ್ರ ಕೊಟ್ಟ ಮೇಲೆ ಮತ್ತೆ ಯಾಕೇ ಕಮಿಟಿ ಮುಂದೆ ಇಡಬೇಕು ಎಂದು ಅಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಖಾತೆ ಮಾಡಿ ಎಂದು ಖಡಕ್ ಸೂಚನೆ ನೀಡಿದರು.

ಗಾಡಿಖರ್ಖಾನೆ ಶ್ರಮಿಕ ನಗರದಲ್ಲಿ ಉಳಿದ 8 ನಿವೇಶನಗಳನ್ನು ಸ್ಲಾಟರ್ ಹೌಸ್ ನ 5 ಕುಟುಂಬಗಳಿಗೆ ಸೇರಿದಂತೆ ಸ್ಲಂ ಬೋರ್ಡ್ ಕೇಂದ್ರ ಕಚೇರಿ ಗೆ ಅನುಮೋದನೆಗೆ ಕಳಿಸಿ, ನಂತರ ನಾನು ಮಂಜೂರು ಮಾಡುತ್ತೇನೆಂದು ತಿಳಿಸಿದರು. ಎಲ್ಲಾ ನಿವೇಶನಗಳು ಹಂಚಿಕೆ ಅದ ತಕ್ಷಣ ಖಾತೆ ಮಾಡಲು ನಗರಸಭೆಗೆ ಹಸ್ತಾಂತರ ಮಾಡಲು ಸೂಚನೆ ನೀಡಿದರು.

ಹೊನ್ನಯ್ಯ ಬಡಾವಣೆಗೆ ಖಾತೆ ಮಾಡಲಾಗುತ್ತಿದೆ, ಯಾವ ಮನೆಯಲ್ಲಿಯು ಪ್ರತ್ಯೇಕ ಶೌಚಾಲಯ ಇಲ್ಲ ಅವರಿಗೆ UGD ಪೈಪ್ ಲೈನ್ ಮಾಡಿಸಲು, ಇದರ ಹಿಂದಿನ ಸಭೆಯಲ್ಲಿ ಗಮನಕ್ಕೆ ತರಲಾಗಿ, ಈ ಸಭೆಯಲ್ಲಿ ಕಾಮಗಾರಿಗೆ 25ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಒಂದು ತಿಂಗಳ ಒಳಗೆ ಟೆಂಡರ್ ಪ್ರಕ್ರಿಯೆ ಮಾಡಿ ಕಾಮಗಾರಿಯನ್ನು ಮುಗಿಸಿ ಕೊಡುತ್ತೇವೆ ಎಂದು ಆಯುಕ್ತರು ಸಭೆಗೆ ತಿಳಿಸಿದರು.

ಮದ್ದೂರು ತಮಿಳು ಕಾಲೋನಿಯ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಲು ಅಭಿವೃದ್ದಿ ಕಾರ್ಯ ಕ್ಕೆ 8 ಕೋಟಿ ರೊಪಾಯಿ ಮಂಜೂರು ಮಾಡಲು ಕೇಂದ್ರ ಕಚೇರಿಗೆ ಪ್ರಸ್ತಾವಣೆ ಸಲ್ಲಿಸಿದೆ, ಮೂರು ತಿಂಗಳ ಒಳಗೆ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಸ್ಲಂ ಬೋರ್ಡ್ ಎಇಇ ತಿಳಿಸಿದರು.

ಮಂಡ್ಯದ ಕೆಲವು ಶ್ರಮಿಕ ನಗರಗಳಲ್ಲಿ ಹೆಚ್ಚುವರಿ ಕುಟುಂಬಗಳಿಗೆ 5 ಎಕರೆ ಜಾಗವನ್ನು ಮೀಸಲು ಇಡಲು ತಹಸೀಲ್ದಾರ್ ಮತ್ತು ಎಸಿ ಅವರಿಗೆ ಸೂಚನೆ ನೀಡಿದರು, ಅಲ್ಲದೇ ತಹಶೀಲ್ಧಾರ್ ರವರು ವಿ ಎ, ಆರ್ ಐ ಗಳನ್ನು ಕರೆದು ಸಭೆ ಮಾಡಿ ಸರ್ಕಾರಿ ಜಾಗಗಳ ಬಗ್ಗೆ ಮಾಹಿತಿ ಪಡೆದು ಜಾಗ ಮೀಸಲು ಇಡುತ್ತೇನೆ ಎಂದು ತಿಳಿಸಿದರು

ಒಟ್ಟಾರೆ ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಬಹಳಷ್ಟು ಅಧಿಕಾರಿಗಳ ನಿರ್ಲ್ಯಕ್ಷವನ್ನು ಕಟುವಾಗಿ ಖಂಡಿಸಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಮಾಡಬೇಕಾದ ಕೆಲಸಗಳಿಗೆ ಗಡುವು ಕೊಟ್ಟರು. ಕೆಲಸಗಳು ಆಗದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮಾ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಿದ್ದರಾಜು, ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಎಲ್ಲಾ ಶ್ರಮಿಕ ನಗರಗಳ. ಪದಾಧಿಕಾರಿಗಳಾದ ನಿಂಗಮ್ಮ, ರತ್ನ, ರಾಜು, ಶಿವಲಿಂಗಣ್ಣ, ವೈದುನಾ, ರವಿ, ದೇವಣ್ಣ, ಮಹದೇವ, ಲತಾ, ಗಾಯತ್ರಿ, ನಾಗೇಶ್, ಹರೀಶ್ ಹಾಗೂ ಕುಮಾರ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!