ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನ್ಮುಲ್ ನಿರ್ದೇಶಕ ಡಾಲು ರವಿ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ ಹಸುಗಳ ಮಾಲೀಕರಿಗೆ ಪರಿಹಾರ ಚೆಕ್ ವಿತರಣೆ, ಹಾಲು ಉತ್ಪಾದಕರ ಮರಣಕ್ಕೆ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ಪಾದಕರು ವೈಯುಕ್ತಿಕವಾಗಿ ಹಾಗೂ ರಾಸುಗಳಿಗೆ ಕಡ್ಡಾಯವಾಗಿ ವಿಮೆಯನ್ನು ಮಾಡಿಸಬೇಕು. ರೈತರು ಶೇ.25 ರಷ್ಟು ವಿಮಾ ಕಂತನ್ನು ಪಾವತಿ ಮಾಡಿದರೆ ಸಾಕು. ಉಳಿದ ಶೇ. 75ರಷ್ಟು ವಿಮಾ ಕಂತನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಪಾವತಿ ಮಾಡುವ ಮೂಲಕ ರೈತರ ಹಿತಾಸಕ್ತಿ ಅನುಗುಣವಾಗಿ ಕೆಲಸ ಮಾಡುತ್ತಿದೆ ಎಂದರು.
ಒಕ್ಕೂಟದ ವತಿಯಿಂದ ಸಬ್ಸಿಡಿ ದರದಲ್ಲಿ ಸಿಗುವ ಹಾಲು ಕರೆಯುವ ಯಂತ್ರ, ರಾಸುಗಳ ನೆಲಹಾಸು,ಮೇವು ಕತ್ತರಿಸುವ ಯಂತ್ರಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಉತ್ಪಾದಕರ ಅಭಿವೃದ್ಧಿಗೆ ಮುಂದಾಗಬೇಕೆಂದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಚ್.ಟಿ. ಮಂಜು ಮಾತನಾಡಿ, ಜಿಲ್ಲಾ ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಂಘದ ಆಡಳಿತ ಮಂಡಳಿ ಹಾಗೂ ಸಂಘದ ನೌಕರರ ವರ್ಗದವರು ರೈತರಿಗೆ ಸಹಕರಿಸಬೇಕೆಂದು ಸಲಹೆ ನೀಡಿದರು.
ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಯಲ್ಲಿ ಉತ್ಪಾದಕರು ಕನಿಷ್ಠ ಎರಡು ಮಹಾಸಭೆಗೆ ಕಡ್ಡಾಯವಾಗಿ ಭಾಗವಹಿಸಿ ನಡಾವಳಿ ಪುಸ್ತಕಕ್ಕೆ ಸಹಿ ಮಾಡಬೇಕು ಹಾಗೂ ಸಂಘದಲ್ಲಿ ಕನಿಷ್ಠ ವ್ಯವಹಾರ ಮಾಡಬೇಕು. ರಾಜಕಾರಣ ಬೆರಸದೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಸಂಘದ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದು ಚರ್ಚಿಸಿ, ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಪಾತ್ರರಾಗಬೇಕು ಎಂದು ಹೇಳಿದರು.
ಮನ್ಮುಲ್ ಉಪ ವ್ಯವಸ್ಥಾಪಕ ಮರೀರಚಯ್ಯ, ಮನ್ಮುಲ್ ಮಾರ್ಗ ವಿಸ್ತರಣಾ ಅಧಿಕಾರಿಗಳಾದ ನಾಗಪ್ಪ ಅಲ್ಲಿಬಾದಿ, ಗುರುರಾಜ್ ಸುರಿಗ್ಗಿಹಳ್ಳಿ ಉಪಸ್ಥಿತರಿದ್ದರು.




