Thursday, September 19, 2024

ಪ್ರಾಯೋಗಿಕ ಆವೃತ್ತಿ

ಯೂಟರ್ನ್ ಕುಮಾರನದು ಕ್ಷಣಕ್ಕೊಂದು ಬಣ್ಣ: ಡಿ.ಕೆ ಶಿವಕುಮಾರ್‌ ವ್ಯಂಗ್ಯ

ಕುಮಾರಸ್ವಾಮಿ ಅವರು ಈ ಹಿಂದೆ ತಾವೇ ನೀಡಿರುವ ಯು ಟರ್ನ್ ಹೇಳಿಕೆಗಳ ಬಗ್ಗೆ ಉತ್ತರ ನೀಡಲಿ. ಅವರು ಮೊದಲು ನುಡಿದಂತೆ ನಡೆಯಲಿ, ಕೊಟ್ಟ ಮಾತು ತಪ್ಪುವುದನ್ನು ಬಿಡಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಕುಟುಕಿದರು.

ಮಂಡ್ಯದಲ್ಲಿ ಮಂಗಳವಾರ ನಡೆದ ಜನಾಂದೋಲನ ಸಭೆಯಲ್ಲಿ ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶ್ವತ್ಥನಾರಾಯಣ, ಯೋಗಿಶ್ವರ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ, ಯೂ ಟರ್ನ್ ಹೊಡೆದಿದ್ದ ಹೇಳಿಕೆಗಳನ್ನು ವಿಡಿಯೋ ಮೂಲಕ ತೆರೆಯ ಮೇಲೆ ಪ್ರದರ್ಶಿಸುತ್ತ ಮಾತನಾಡಿದರು.

“ಜನ ತೀರ್ಪು ನೀಡಿದ್ದಾರೆ. ಆದ ಕಾರಣಕ್ಕೆ ಗಂಡು ಭೂಮಿ ಮಂಡ್ಯದಲ್ಲಿ ಗೆಲುವು ಕಂಡಿದ್ದೀರಿ. ಇಲ್ಲಿಗೆ ಬಂದು ನಿಮ್ಮ ತಿರುವು-ಮುರುವು ಹೇಳಿಕೆಗಳ ಬಗ್ಗೆ ಉತ್ತರ ನೀಡಬೇಕು. ನಿಮ್ಮ ಅಮೃತದ ನುಡಿಮುತ್ತುಗಳನ್ನು ಈ ನೆಲದ ಮೇಲೆ ಉದುರಿಸಬೇಕು. ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ” ಎಂದು ಕುಮಾರಸ್ವಾಮಿ ಅವರನ್ನು ಛೇಡಿಸಿದರು.

“ಮೋದಿ ಅವರ ಕೈ ಹಿಡಿದು ಕೇವಲ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಣ್ಣ ಹೇಳಿದ್ದರು. ಆದರೆ ಈಗ ನಾವು ಐದು ಜನ ಮಂತ್ರಿಗಳಿದ್ದೇವೆ, ನಾನು ಆ ರೀತಿ ಮಾತು ಕೊಡಲು ಮೂರ್ಖನೇ ಎಂದು ಹೇಳುತ್ತಿದ್ದಾರೆ. ಈ ಹೇಳಿಕೆಗಳಿಗೆ ಬಿಜೆಪಿ ಹಾಗೂ ಕುಮಾರಸ್ವಾಮಿ ಇಬ್ಬರೂ ಉತ್ತರ ಕೊಡಬೇಕು. 10 ನಿಮಿಷದಲ್ಲಿ ನಾನು ತೋರಿಸಿದ ಮೈತ್ರಿ ನಾಯಕರ ಮಾತುಗಳಿಗೆ ಉತ್ತರ ಕೊಡಲಿ” ಎಂದು ಆಗ್ರಹಿಸಿದರು.

“ಕುಮಾರಸ್ವಾಮಿ ಅವರನ್ನು ಕಾವೇರಿ ನೀರಿನ ವಿಚಾರದ ಸಭೆಗೆ ಕರೆದಿದ್ದೆವು. ಅದಕ್ಕೆ ಅವರು ದ್ರಾಕ್ಷಿ, ಗೋಡಂಬಿ ತಿನ್ನಲು ಬರಬೇಕೆ ಎಂದಿದ್ದರು. ಆದರೆ ಅದೇ ದಿನ ಪಾಂಡವಪುರದಲ್ಲಿ ಬಾಡೂಟದಲ್ಲಿ ಭಾಗವಹಿಸಿದ್ದರು. ಕಾವೇರಿ ನೀರು, ರೈತರು, ರಾಜ್ಯದ ಹಿತ ಅವರಿಗೆ ಮುಖ್ಯವಾಗಿರಲಿಲ್ಲ. ಕುಮಾರಣ್ಣ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ನಮಗೆ ಮಾತ್ರ ನಿಮ್ಮ ಹಿತ ಮುಖ್ಯ” ಎಂದರು.

“ಕುಮಾರಸ್ವಾಮಿ ನನ್ನ ಕುಟುಂಬದ ಬಗ್ಗೆ ಮಾತನಾಡಲಿ ಎಂದೇ ಅವರ ಕುಟುಂಬದ ಬಗ್ಗೆ ಮಾತನಾಡುತ್ತಾ ಬರುತ್ತಿದ್ದೇನೆ. ನಿಮ್ಮ ಅತ್ತೆಯ ಕೆಐಡಿಬಿ ಭೂಮಿ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಇದೇ ಬಿಜೆಪಿಯವರು ನಿನ್ನ ಕುಟುಂಬಕ್ಕೆ ಹಂಚಿಕೆಯಾಗಿರುವ ಮುಡಾ ಸೈಟುಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ” ಎಂದು ಸವಾಲು ಹಾಕಿದರು.

“ನನ್ನ ಅಧ್ಯಕ್ಷತೆಯಲ್ಲಿ, ಸಿದ್ದರಾಮಯ್ಯ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ. ಬಿಜೆಪಿಗೆ 65 ಜೆಡಿಎಸ್ ಗೆ 19 ಸ್ಥಾನಗಳು ಬಂದವು. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ. ಮುಂದಿನ 10 ವರ್ಷವೂ ಕಾಂಗ್ರೆಸ್ ಸರ್ಕಾರವಿರುತ್ತದೆ” ಎಂದರು.

ಉದ್ಯೋಗ ಕೊಡಿಸಿದರೆ ಒಂದು ಕೋಟಿ ನಮಸ್ಕಾರ

“ಎಸ್ ಎಂ ಕೃಷ್ಣ ಅವರು ಮದ್ದೂರಿನ ಸೋಮನಹಳ್ಳಿ, ಮಂಡ್ಯದ ತೂಬಿನಕೆರೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆ ಮಾಡಿದರು. ಕುಮಾರಸ್ವಾಮಿ ಅವರೇ ಮೋದಿ ಅವರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೈಗಾರಿಕಾ ಮಂತ್ರಿ ಮಾಡಿದ್ದಾರೆ. ಮಂಡ್ಯ ಮತ್ತು ಹಾಸನ ಭಾಗದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಕೈಗಾರಿಕೆ ಮಾಡುತ್ತೇನೆ ಎಂದು ಹೇಳಿದ್ದೀರ. ನಮ್ಮ ಜನರಿಗೆ ಉದ್ಯೋಗ ಸಿಗುತ್ತದೆ ಎಂದರೆ ನಾವು ನಿಮಗೆ ಸಹಕಾರ ನೀಡುತ್ತೇವೆ. ನಮ್ಮ ಯುವಕರಿಗೆ ಕೆಲಸ ನೀಡಪ್ಪ ಒಂದು ಕೋಟಿ ನಮಸ್ಕಾರ ಹೇಳುತ್ತೇನೆ” ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಧಮ್ ಇಲ್ಲ

“ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಧಮ್ ಇಲ್ಲ. ಹೀಗಾಗಿ ಮಾಧ್ಯಮಗಳಲ್ಲಿ ಕೇವಲ ನನ್ನ ಮತ್ತು ಕುಮಾರಸ್ವಾಮಿ ಅವರ ವಿಚಾರವನ್ನೇ ಮಾಧ್ಯಮಗಳು ತೆಗೆದುಕೊಳ್ಳುತ್ತಿವೆ” ಪಾದಯಾತ್ರೆ ಬಗ್ಗೆ ಲೇವಡಿ ಮಾಡಿದರು.

ಪಾಪ ವಿಮೋಚನಾ ಯಾತ್ರೆ

“ಬಿಜೆಪಿ, ಜೆಡಿಎಸ್ ಪಾದಯಾತ್ರೆಯು ಪಾಪ ವಿಮೋಚನೆಯ ಯಾತ್ರೆ. ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೀರಿ. ಕುಮಾರಸ್ವಾಮಿ ಅವರೇ ನಿಮ್ಮ ಸಹೋದರರ ಆಸ್ತಿಪಟ್ಟಿ ಬಿಚ್ಚಿಡಿ ಎಂದರೂ ಬಿಚ್ಚಿಡುತ್ತಿಲ್ಲ. ನೀವು ಎಲ್ಲಿಗೆ ಬೇಕಾದರೂ ಚರ್ಚೆಗೆ ಕರೆಯಿರಿ ನಾನು ಸಿದ್ದನಿದ್ದೇನೆ” ಎಂದು ಸವಾಲು ಹಾಕಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!