Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಗ್ ರಿಲೀಫ್ ಪಡೆದ ಕನಕಪುರದ ಬಂಡೆ : ಡಿ.ಕೆ.ಶಿವಕುಮಾರ್ ನಾಮಪತ್ರ ಅಂಗೀಕಾರ

ಸಾಕಷ್ಟು ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಾಮಪತ್ರ ಅಂಗೀಕಾರಗೊಂಡಿದೆ. ಇದರಿಂದ ಕನಕಪುರದಲ್ಲಿ ಡಿಕೆಶಿ ಸ್ಪರ್ಧಿಸುವುದು ಅಂತಿಮವಾಗಿದೆ.

ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ನಾಮಪತ್ರದಲ್ಲಿ ಯಾವುದೇ ಲೋಪದೋಷಗಳಿಲ್ಲ. ಎಲ್ಲವೂ ಕ್ರಮಬದ್ಧವಾಗಿದೆ. ಹೀಗಾಗಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ನಾಮಪತ್ರವನ್ನು ಕನಕಪುರ ಚುನಾವಣಾಧಿಕಾರಿ ಮಾನ್ಯ ಮಾಡಿದ್ದಾರೆ. ಇದರಿಂದ ಆತಂಕದಲ್ಲಿದ್ದ ಡಿ ಕೆ ಶಿವಕುಮಾರ್​ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

“ರಾಜಕೀಯ ಜೀವನದಿಂದ ನನ್ನ ಮುಗಿಸಲು ಬಿಜೆಪಿ ಸತತವಾಗಿ ಪ್ರಯತ್ನ ನಡೆಸುತ್ತಿದೆ. ಈ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸದಂತೆ ತಡೆ ಹಿಡಿಯಲು ನನ್ನ ಉಮೇದುವಾರಿಕೆ ರಿಜೆಕ್ಟ್‌ ಮಾಡುತ್ತಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಬಿಜೆಪಿಯ ಷಡ್ಯಂತ್ರ ಅರಿತು ಮುನ್ನೆಚ್ಚರಿಕೆಗಾಗಿ ಸುರೇಶ್ ನಾಮಪತ್ರ ಸಲ್ಲಿಸಿದ್ದರು” ಎಂದು ಡಿ ಕೆ ಶಿವಕುಮಾರ್‌ ಶುಕ್ರವಾರ ಬೆಳಿಗ್ಗೆ ಸುದ್ದಿಗೋಷ್ಠಿ ಕರೆದು ಹೇಳಿದ್ದರು.

ಮುಂದುವರಿದು, ಯಡಿಯೂರಪ್ಪ ಅವರ ಸರ್ಕಾರ ಬೇರೆಯವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ನೀಡದೇ, ಕೇವಲ ನನ್ನ ಪ್ರಕರಣ ಮಾತ್ರ ನೀಡಿದ್ದಾರೆ. ಅಡ್ವಕೇಟ್ ಜನರಲ್ ಇದು ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಹೇಳಿದ್ದರೂ ದೆಹಲಿಯವರ ಒತ್ತಡದಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆ. ರಾಜಕೀಯದಿಂದಲೇ ನನ್ನನ್ನು ತೆಗೆದುಹಾಕಲು ಷಡ್ಯಂತ್ರ ರೂಪಿಸಿದ್ದಾರೆ” ಎಂದು ಆರೋಪಿಸಿದ್ದರು.

“ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆದಿದೆ. ರಾಜಕೀಯದಿಂದ ನನ್ನನ್ನು ದೂರಮಾಡಲು ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಡಿ ಕೆ ಸುರೇಶ್ ಅವರು ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ” ಎಂದರು.

“ಈಗಿನ ತಂತ್ರಜ್ಞಾನದಲ್ಲಿ ಯಾರು ಮಾಹಿತಿ ನೋಡುತ್ತಾರೆ, ಯಾರು ಡೌನ್ಲೋಡ್ ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿ ಸಿಗುತ್ತದೆ. ಬಿಜೆಪಿ ಸೆಲ್ ನನ್ನ ದಾಖಲೆ ಪರಿಶೀಲಿಸುತ್ತಿದೆ. ಅಧಿಕಾರಿಗಳ ದುರ್ಬಳಕೆಗೆ ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ನಾವು ಜಾಗರೂಕವಾಗಿ ಹೆಜ್ಜೆ ಇಟ್ಟಿದ್ದೇವೆ. ನನಗೆ ಅರ್ಜಿ ಹೇಗೆ ತುಂಬಬೇಕು ಗೊತ್ತಿದೆ. ನನ್ನ ದಾಖಲೆಗಳು ಸರಿಯಾಗಿವೆ. ನನ್ನ ಅರ್ಜಿ ಸ್ವೀಕೃತವಾಗಲಿದೆ ಎಂಬ ನಂಬಿಕೆ ಇದೆ. ಆದರೆ ಬಿಜೆಪಿಯವರ ಷಡ್ಯಂತ್ರ ಏನು ಬೇಕಾದರೂ ಆಗಬಹುದು. ಕಳೆದ ಬಾರಿಯೇ ನನ್ನ ಅರ್ಜಿ ತಿರಸ್ಕರಿಸಲು ಮುಂದಾಗಿದ್ದರು” ಎಂದು ಹೇಳಿದರು.

“ನನಗೆ ಬೇಕಾದಷ್ಟು ಅಧಿಕಾರಿಗಳು, ಮಾಧ್ಯಮ ಸ್ನೇಹಿತರು ಇದ್ದು, ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ನನ್ನ ಮೇಕೆದಾಟು, ಭಾರತ ಜೋಡೋ ಯಾತ್ರೆ, ಸ್ವಾತಂತ್ರ್ಯ ನಡಿಗೆ ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಭ್ರಷ್ಟಾಚಾರ, ಕೋವಿಡ್ ಭ್ರಷ್ಟಾಚಾರಗಳ ಬಗ್ಗೆ ನನ್ನ ಅವಧಿಯಲ್ಲಿ ದೊಡ್ಡ ಹೋರಾಟ ನಡೆದು ಮಂತ್ರಿ ರಾಜೀನಾಮೆ ನೀಡಬೇಕಾಯಿತು. ಈತನಿಂದ ಈ ಪರಿಸ್ಥಿತಿ ಬಂದಿದೆ ಎಂದು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಏನೇ ಕುತಂತ್ರ ಪ್ರಯೋಗ ಮಾಡಿದರೂ ನಾನು ನ್ಯಾಯಾಲಯ ಹಾಗೂ ಜನರ ತೀರ್ಪು ನಂಬಿದ್ದೇನೆ” ಎಂದರು.

“ರಾಹುಲ್ ಗಾಂಧಿ ಅವರನ್ನು ಒಂದು ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಿ, ಕೇವಲ 22 ದಿನಗಳಲ್ಲಿ ವಿಚಾರಣೆ ಮಾಡಿ ಅವರಿಗೆ ಇದುವರೆಗೂ ಯಾರಿಗೂ ನೀಡದ ಶಿಕ್ಷೆ ಪ್ರಕಟಿಸಿ, 24 ಗಂಟೆಗಳಲ್ಲಿ ಅವರ ಸಂಸತ್ ಸದಸ್ಯತ್ವ ರದ್ದು ಮಾಡಿ, ಅವರ ಮನೆ ಖಾಲಿ ಮಾಡಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರು ಯಾವುದೇ ಅಕ್ರಮ ಮಾಡದಿದ್ದರೂ ಯಂಗ್ ಇಂಡಿಯಾ ಸೇರಿದಂತೆ ಅನೇಕ ಪ್ರಕರಣ ದಾಖಲಿಸಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಅವರನ್ನೇ ಬಿಟ್ಟಿಲ್ಲ ನನ್ನನ್ನು ಬಿಡುತ್ತಾರಾ” ಎಂದು ಪ್ರಶ್ನಿಸಿದರು.

2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಅಚ್ಚರಿಯ ಬೆಳವಣಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಸದ ಡಿ.ಕೆ. ಸುರೇಶ್ ಅವರು ಕನಕಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ, ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಿದಾಗ ರಾಜ್ಯದ ಜನರ ಗಮನ ಸೆಳೆಯಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!