ಇನ್ನು ಗಂಡೆ ಆಗಿಲ್ಲ ಆಗಲೇ ನಿಂತುಕೊಳ್ಳಲು ಬಂದಿದ್ದಾನೆ, ಇನ್ನು ಅಭ್ಯರ್ಥಿ ಘೋಷಣೆ ಆಗಿಲ್ಲ ಆಗಲೇ ನಿಲ್ಲಲು ಬಂದಿದ್ಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮುಖಂಡ ಗುರುಚರಣ್ ಅವರ ಕಾಲೆಳೆದರು.
ಮದ್ದೂರಿನಲ್ಲಿ ಶನಿವಾರ ನಡೆದ ಪ್ರಜಾಧ್ವನಿಯಾತ್ರೆಯ ವೇದಿಕೆಯಲ್ಲಿ ತಮ್ಮ ಹಿಂಬದಿಯಲ್ಲಿ ನಿಲ್ಲಲು ಬಂದ ಗುರುಚರಣ್ ಅವರನ್ನು ಕುರಿತು ಡಿಕೆ ಶಿವಕುಮಾರ್ ಮೊದಲು ಕುಳಿತು ಕೊಳ್ಳುವಂತೆ ಹೇಳಿದರು. ನಂತರ ಇನ್ನು ಅಭ್ಯರ್ಥಿಯ ಆಗಿಲ್ಲ ಎನ್ನುವುದನ್ನು ನೆನಪಿಸುವಂತೆ ಮಾತನಾಡಿದರು. ಕೆಲದಿನಗಳ ಹಿಂದೆ ಮದ್ದೂರಿನ ಡಿಕೆ ಶಿವಕುಮಾರ್ ಅವರನ್ನು ಮದ್ದೂರಿನಿಂದಲೇ ಸ್ಪರ್ಧಿಸುವಂತೆ ಗುರುಚರಣ್ ಆಹ್ವಾನಿಸಿದ್ದರು.
ಬಿಜೆಪಿ ದೂರವಿಡಲು ಜೆಡಿಎಸ್‌ಗೆ ಅಧಿಕಾರ ನೀಡಿದ್ದೆವು
37 ಶಾಸಕರಿದ್ದ ಜೆಡಿಎಸ್‌ಗೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿತ್ತು. ಬಿಜೆಪಿ ದೂರವಿಡಲು ಜೆಡಿಎಸ್‌ಗೆ ಅಧಿಕಾರ ನೀಡಿದ್ದೆವು, ಒಂದು ಚುನಾವಣೆಯಲ್ಲಿ ಮಂಡ್ಯಕ್ಕೆ ನಿಖಿಲ್ ಅಭ್ಯರ್ಥಿ ಆದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕಿರಲಿಲ್ಲ.
ಕೆಲ ಮುಖಂಡರ ಅಸಮಾಧಾನ ಇದ್ರೂ ನಾವು ಜೆಡಿಎಸ್ ಬೆಂಬಲಿಸಿದ್ದೇವು. ಇದೇ ಮಂಡ್ಯದಲ್ಲಿ ಕುಮಾರಣ್ಣ ನಾನು ಡಿಕೆ ಜೋಡೆತ್ತು ಎಂದಿದ್ರು. ರಾಜಕಾರಣ ನಿಂತ ನೀರಲ್ಲ, ಏನು ಬೇಕಾದರೂ ಬದಲಾವಣೆ ಆಗಬಹುದು.
ಆದರೆ ಯಾರು ಸಹಾಯ ಮಾಡಿದ್ದಾರೆ, ಯಾರು ತ್ಯಾಗ ಮಾಡಿದ್ದಾರೆ ಅವರನ್ನು ನೆನಯಬೇಕು ಎಂದು ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು. ದೇವೇಗೌಡರು ಪ್ರಧಾನಿಯಾಗಲು ಕಾಂಗ್ರೆಸ್ ಬೆಂಬಲಿಸಿತ್ತು. ಭಗವಂತ, ನಾವು, ನೀವು ಎಲ್ಲರೂ ಸೇರಿ ಕುಮಾರಣ್ಣಗೆ ಅವಕಾಶ ನೀಡಿದ್ದೇವೆ ಎಂದರು.

ಒಕ್ಕಲಿಗರನ್ನು ಸೆಳೆಯಲು ಡಿ.ಕೆ ಸಿಎಂ ಅಸ್ತ್ರ
ಹಳೇ ಮೈಸೂರು ಭಾಗದಲ್ಲಿ ಮತ್ತೆ ಪರೋಕ್ಷವಾಗಿ ಸಿಎಂ ಆಸೆಯನ್ನು ಡಿ.ಕೆ.ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ನಿಮ್ಮ ಮನೆಯ ಮಗನ ಕೈ ಬಲಪಡಿಸಿ. ನಿಮ್ಮ ಮಗನ ಆಡಳಿತ ನೀವು ನೋಡಬೇಕು ಎಂದು ಮದ್ದೂರು ಜನರ ಮುಂದೆ ಪರೋಕ್ಷವಾಗಿ ಸಿಎಂ ಇಂಗಿತವನ್ನು ವ್ಯಕ್ತಪಡಿಸಿದರು.
ಮಂಡ್ಯಗೆ ಏನು ಅನೂಕೂಲವಾಗಿಲ್ಲ
ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ 7 ಕ್ಕೆ ಏಳು ಜೆಡಿಎಸ್ ಗೆಲ್ಲಿಸಿದ್ರಿ. ಕಾಂಗ್ರೆಸ್ ನವರ ಜೆಡಿಎಸ್‌ನವರ ಮನೆಗೆ ಹೋಗಿ ಮಂತ್ರಿ ಮಾಡಿದ್ದೀವಿ ಅಂದ್ರೆ ಅದಕ್ಕೆ ಮಂಡ್ಯ ಕಾರಣ. ಆದರೆ ಮಂಡ್ಯಕ್ಕೆ ಏನು ಅನುಕೂಲವಾಗಲಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲೆಯ ಏಳು ಶಾಸಕರು ಏನಾದ್ರು ಮಾಡಬೇಕು ಅಂದುಕೊಂಡಿಲ್ಲ. ಮಹಿಳೆಯರ ಎಲ್ಲಾ ಸಾಲ ಮನ್ನ ಮಾಡುತ್ತೇನೆ ಎಂದು ಜೆಡಿಎಸ್‌ನವರು ಹೇಳಿದ್ರು. ಅದಕ್ಕೆ ಜೆಡಿಎಸ್‌ಗೆ ಕಳೆದ ಬಾರಿ ಮತ ಹಾಕಿದ್ರಿ. ಮಹಿಳೆಯರ ಮತಗಳು ಬಹಳ ಮುಖ್ಯ. ಮಹಿಳೆಯರು ಮತ ಹಾಕಲು ಯೋಚನೆ ಮಾಡಬೇಕು. ಸಾಲ ಮನ್ನ ಅನ್ನೋದು ಊರಿಗೆ ಇಬ್ಬರಿಗೆ ಮಾತ್ರ. ಆದರೆ ಕಾಂಗ್ರೆಸ್ ಕಾರ‍್ಯಕ್ರಮ ಊರಿನ ಎಲ್ಲಾ ಜನರಿಗೂ ಸಿಗುತ್ತೆ. 10 ಕೆಜಿ ಅಕ್ಕಿ ಕೊಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಬೆಂ-ಮೈ ರಸ್ತೆ ಪ್ರಾರಂಭ ಮಾಡಿದ್ದು ಕಾಂಗ್ರೆಸ್, ಮುಂದಿನ ಚುನಾವಣೆಯಲ್ಲಿ ಮಂಡ್ಯ ಜನರು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.




