Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನರ ಸೇವೆ ಮಾಡಲು ರಾಜಕೀಯಕ್ಕೆ ಪಾದಾರ್ಪಣೆ: ಫೈಟರ್ ರವಿ

ನಾಗಮಂಗಲ ತಾಲೂಕಿನ ಜನರ ಕಷ್ಟ- ಸುಖಗಳಲ್ಲಿ ಭಾಗಿಯಾಗಿರುವ ನನಗೆ ಇನ್ನು ಹೆಚ್ಚಿನ ಜನಸೇವೆ ಮಾಡಲು ರಾಜಕಾರಣಕ್ಕೆ ಪಾದರ್ಪಣೆ ಮಾಡಲು ನಿರ್ಧರಿಸಿರುವುದಾಗಿ ಸಮಾಜ ಸೇವಕ ಫೈಟರ್ ರವಿ ತಿಳಿಸಿದರು.

ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಇಂದು ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಇದರಿಂದ ನಾನು ಜನಸೇವೆ ಮಾಡಲು ರಾಜಕೀಯಕ್ಕೆ ಪಾದರ್ಪಣೆ ಮಾಡಲು ಇಚ್ಛಿಸಿದ್ದೇನೆ ಎಂದರು.

ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತೇನೆಂಬ ಹಿನ್ನೆಲೆಯಲ್ಲಿ ನನ್ನ ಸಮಾಜ ಸೇವೆಗಳನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿದೆ. ಜನರಿಗೆ ನಾನು ಹತ್ತಿರವಾಗುತ್ತಿರುವುದನ್ನು ಸಹಿಸದೆ ನನ್ನ ಮೇಲೆ ಹಾಗೂ ಬೆಂಬಲಿಗರ ಮೇಲೆ ವಿನಾಕಾರಣ ದೌರ್ಜನ್ಯಗಳು ನಡೆಯುತ್ತಿವೆ. ಇದಕ್ಕೆಲ್ಲ ಅಂತ್ಯ ಹಾಡಲು ರಾಜಕೀಯ ಬರುವ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.

2023ರ ವಿಧಾನಸಭಾ ಚುನಾವಣೆಗೆ ತಾಲೂಕಿನ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದ್ದು, ನನ್ನ ಸೇವೆ ಗಮನಿಸಿ ಯಾವುದೇ ಪಕ್ಷ ಸ್ಪರ್ಧೆಗೆ ಅವಕಾಶ ಕೊಟ್ಟರೆ ಪಕ್ಷದ ನಿಷ್ಟಾವಂತನಾಗಿ ಸ್ಪರ್ಧೆಗೆ ಸಿದ್ಧನಾಗಿದ್ದು, ಶೀಘ್ರವಾಗಿ ಯಾವ ಪಕ್ಷ ಸೇರುವುದನ್ನು ತಿಳಿಸುತ್ತೇನೆ ಎಂದರು.

ಜೆಡಿಎಸ್ ಪಕ್ಷದ ವರಿಷ್ಠರಾದ, ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರ ಬಗ್ಗೆ ಅಪಾರ ಗೌರವ,ಅಭಿಮಾನವಿದೆ. ಆ ಪಕ್ಷದಿಂದ ಅವಕಾಶ ಕೊಟ್ಟರೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದರು.

ಯಾವುದೇ ಪಕ್ಷದಿಂದ ಅವಕಾಶ ಸಿಗದಿದ್ದರೆ ಜನರ ಅಭಿಮಾನ ಹಾಗೂ ಸೇವೆಗಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡಲಿದ್ದೇನೆ. ಸೋಲು-ಗೆಲುವು ನಿರ್ಧರಿಸುವುದು ಈ ತಾಲೂಕಿನ ಜನರ ನಿರ್ಧಾರ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!