Friday, September 20, 2024

ಪ್ರಾಯೋಗಿಕ ಆವೃತ್ತಿ

ನಿಮಗಿದು ವಿಚಿತ್ರ ಅನ್ನಿಸುವುದಿಲ್ಲವೇ!?

✍️ ಮಾಚಯ್ಯ ಎಂ ಹಿಪ್ಪರಗಿ

ಎತ್ತಿಂದೆತ್ತ ನೋಡಿದರೂ, ಇದ್ಯಾಕೋ ‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ’ ಗಾದೆ ಮಾತಿನಂತೆ ಕಾಣುತ್ತೆ. ಯಾವ ವಿಚಾರ ಅಂತ ಜಾಸ್ತಿ ತಲೆ ಕೆಡಿಸ್ಕೋಬೇಡಿ. ಪ್ರತಾಪ್ ಸಿಮ್ಮನ ಪರವಾಗಿ ವಕಾಲತ್ತು ವಹಿಸುತ್ತಿರುವ ಕುಮಾರಸ್ವಾಮಿಯವರ ನಡೆಗಳು ಹೀಗೆ ಗುಮಾನಿ ಹುಟ್ಟಿಸುತ್ತಿವೆ. ನೀವೇ ಯೋಚಿಸಿ ನೋಡಿ; ಪ್ರತಾಪ್ ಸಿಮ್ಮನ ತಮ್ಮ ಹಾಸನದ ಬೇಲೂರು ವ್ಯಾಪ್ತಿಯಲ್ಲಿ ಶುಂಠಿ ಬೆಳೆಯುತ್ತೇನೆ ಅಂತ ಕೇವಲ ಒಂದು ತಿಂಗಳ ಕರಾರು ಮಾಡಿಕೊಂಡು ನೂರಾರು ಮರಗಳನ್ನು ಕಳ್ಳತನದಲ್ಲಿ ಕಡಿದು ಸಾಗಿಸಿದ್ದು ಈಗ ಹಳೆಯ ವಿಚಾರ. ಅವನ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿದೆ. ಇಷ್ಟಾದರೂ, ಇದುವರೆಗೆ ಒಬ್ಬನೇ ಒಬ್ಬ ಬಿಜೆಪಿ ನಾಯಕ ಪ್ರತಾಪ್ ಸಿಮ್ಮನ ಪರವಾಗಿ ನಿಂತು ಹೇಳಿಕೆ ಕೊಟ್ಟಿಲ್ಲ. ಆತನನ್ನು ಬಚಾವು ಮಾಡಲು ಮುಂದೆ ಬಂದಿಲ್ಲ. ಅದ್ಯಾರೋ ಶ್ರೀಕಾಂತ್ ಎಂಬ ಹದಿನಾರು ಕೇಸುಗಳ ಹಮ್ಮೀರನಿಗೆ ‘ರಾಮಭಕ್ತ’ ಎಂಬ ನಕಲಿ ಹಣೆಪಟ್ಟಿ ಕಟ್ಟಿ ಅರಚಾಡುವಷ್ಟು ಉತ್ಸಾಹವಿರುವ ಬಿಜೆಪಿಯವರಿಗೆ ಎರಡು ಬಾರಿ ಸಂಸದನಾದ ಪ್ರತಾಪ್ ಸಿಮ್ಮನ ಪರವಾಗಿ ಸಣ್ಣಗೆ ಧ್ವನಿ ಹೊರಡಿಸಲೂ ಪುರಸೊತ್ತಿಲ್ಲವೇ!? ಅಥವಾ ಆಸಕ್ತಿಯಿಲ್ಲವೇ!? ಸಿಮ್ಮನ ತಮ್ಮ ಮರಗಳ್ಳ ಸಿಂಗಳೀಕನ ಕೇಸು ಸ್ಟ್ರಾಂಗ್ ಆಗಿ ಇರುವುದರಿಂದಲೇ ಯಾವೊಬ್ಬ ಬಿಜೆಪಿ ನಾಯಕ ತುಟಿ ಬಿಚ್ಚುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ತಮ್ಮ ಪಕ್ಷದವನೂ ಅಲ್ಲದ; ಅನಾದಿಕಾಲದ ಆತ್ಮೀಯನೂ ಅಲ್ಲದ; ಒಂದು ಕಾಲದಲ್ಲಿ ದೇವೇಗೌಡರನ್ನು ಬುಲ್‌ಶಿಟ್, ಕರ್ನಾಟಕಕ್ಕಂಟಿದ ಶಾಪ ಅಂತೆಲ್ಲ ಹೀನಾಯವಾಗಿ ಲೇವಡಿ ಮಾಡಿದ್ದ ಪ್ರತಾಪ್ ಸಿಮ್ಮನ ಪರವಾಗಿ ಕುಮಾರಸ್ವಾಮಿ ವಕಾಲತ್ತು ವಹಿಸಿಕೊಂಡು ಮೇಲಿಂದ ಮೇಲೆ ಪತ್ರಿಕಾಗೋಷ್ಠಿ ಮಾಡುತ್ತಾರೆಂದರೆ, ಇದು ಅಜೀಬ್ ಅನ್ನಿಸುವುದಿಲ್ಲವೇ? ಆ ಅಜೀಬುತನಕ್ಕೂ ಒಂದು ಕಾರಣವಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಏನೆಂದರೆ, ಹಾಸನದ ಇಡೀ ಆಡಳಿತವನ್ನು ತನ್ನ ಹದ್ದುಬಸ್ತಿನಲ್ಲಿಟ್ಟುಕೊಂಡಿರುವ ದೇವೇಗೌಡರ ಕುಟುಂಬವೇ ಉದ್ದೇಶಪೂರ್ವಕವಾಗಿ ಪ್ರತಾಪ್ ಸಿಮ್ಮನ ತಮ್ಮನ ಈ ಹಗರಣವನ್ನು ಬೆಳಕಿ ಬರುವಂತೆ ಮಾಡಿದೆ ಎನ್ನುವುದೀಗ ಹಳೆಯ ಸುದ್ದಿ. ಆ ಮೂಲಕ ಪ್ರತಾಪ್ ಸಿಮ್ಮ ಎಂಪಿ ಎಲೆಕ್ಷನ್‌ನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವಂತಾದರೆ ಮೈಸೂರು ಕ್ಷೇತ್ರವನ್ನೂ ಮೈತ್ರಿ ಪಾರ್ಟ್ನರ್‌ಶಿಪ್‌ನಲ್ಲಿ ಜೆಡಿಎಸ್ ತೆಕ್ಕೆಗೆ ಸೆಳೆದುಕೊಳ್ಳಬಹುದೆನ್ನುವುದು ಗೌಡರ ಫ್ಯಾಮಿಲಿಯ ಲೆಕ್ಕಾಚಾರ.

ಆದರೆ, ಯಥಾಪ್ರಕಾರ ಸಿದ್ರಾಮಯ್ಯನವರ ಸರ್ಕಾರದ ಮೇಲೆ ಗೂಬೆ ಕೂರಿಸಲು ಜೋರು ಪ್ರಯತ್ನಗಳು ನಡೆದವು. ಕಾಂಗ್ರೆಸ್ ನಡೆಸುತ್ತಿರುವ ಚಿತಾವಣೆಯಂತೆ ಇದನ್ನು ಬಿಂಬಿಸಲಾಯ್ತು. ಬಿಟ್ಟ ಹೂಸಿನ ಸದ್ದನ್ನು ಹೇಗಾದರೂ ಮರೆಮಾಚಬಹುದು, ಆದರೆ ವಾಸನೆಯನ್ನು ಅದೆಷ್ಟು ಹೊತ್ತು ತಡೆಹಿಡಿಯಲಾದೀತು? ನಿಧಾನಕ್ಕೆ, ಇದರ ಹಿಂದೆ ಗೌಡರ ಫ್ಯಾಮಿಲಿಯ ಹಿಕಮತ್ತು ಇರೋದು ಬೆಳಕಿಗೆ ಬರಲಾರಂಭಿಸಿತು. ರಾಜ್ಯಮಟ್ಟದ ಹೆಸರಾಂತ ಪತ್ರಿಕೆಯೇ ತನ್ನ ‘ಪ್ರದೇಶ ಸಮಾಚಾರ’ ವಿಭಾಗದಲ್ಲಿ ಇಂತದ್ದೊಂದು ಗುಮಾನಿಯ ವರದಿ ಪ್ರಕಟಿಸಿದ ಮೇಲೆ ಹೆಚ್ಚೇನೂ ಅನುಮಾನಗಳು ಉಳಿಯಲಿಲ್ಲ.

ಯಾವಾಗ ತಮ್ಮ ಕುಟುಂಬದ ಪಾತ್ರ ಬಯಲಾಗಲಾರಂಭಿಸಿತೋ, ಆಗ ಕುಮಾರಸ್ವಾಮಿಯವರಿಗೆ ತುಸು ಕಸಿವಿಸಿಯಾಗಿದೆ. ಹೊಸದಾಗಿ ಕುದುರಿಕೊಳ್ಳುತ್ತಿರುವ ಮೈತ್ರಿಗೆ ಇದು ಹಿನ್ನಡೆ ಉಂಟುಮಾಡಬಹುದೇ ಎಂಬ ಅಳುಕು ಕಾಡಲಾರಂಭಿಸಿದೆ. ಆ ಅಪವಾದವನ್ನು ತೊಡೆದುಕೊಳ್ಳುವ ಸಲುವಾಗಿಯೇ ಬಿಜೆಪಿ ನಾಯಕರೇ ಬೆಂಬಲಕ್ಕೆ ಬಾರದಿದ್ದರೂ, ಕುಮಾರಸ್ವಾಮಿ ಪ್ರತಾಪನ ಪರವಾಗಿ ಪತ್ರಿಕಾಗೋಷ್ಠಿ ನಡೆಸಲಾರಂಭಿಸಿದ್ದಾರೆ. ಈ ಹಗರಣ ಬಯಲಿಗೆ ಬರುವಲ್ಲಿ ತಮ್ಮ ಕುಟುಂಬದ ಪಾತ್ರವಿಲ್ಲ ಎಂಬುದನ್ನು ಬಿಜೆಪಿಗೆ ನಂಬಿಸಲು ಈ ಕಸರತ್ತು ಮಾಡಿದಂತೆ ಕಾಣುತ್ತಿದೆ. ಅದಕ್ಕೇ ಆರಂಭದಲ್ಲಿ ‘ಕುಂಬಳಕಾಯಿ…’ ಗಾದೆಯನ್ನು ಉದಾಹರಿಸಿದ್ದು.

ಅಲ್ಲವೇ? ಇಲ್ಲದಿದ್ದರೆ, ಬಿಜೆಪಿ ನಾಯಕರಿಗೇ ಬೇಡವಾದ ಉಸಾಬರಿ ಕುಮಾರಸ್ವಾಮಿಗೆ ಯಾಕೆ ಬೇಕಾಗುತ್ತಿತ್ತು!?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!