ಅಪಾಯದಲ್ಲಿರುವ ಜೀವಗಳಿಗೆ ರಕ್ತವು ಅತ್ಯಾಮೂಲ್ಯವಾದದ್ದು, ಇದರ ಮಹತ್ವವನ್ನು ಅರಿತು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಲಂಕೇಶ್ ಅವರು ತಮ್ಮ ಜನ್ಮದಿನವಾದ ಶುಕ್ರವಾರ 66ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯವಾದ ಕಾಣಿಕೆ ನೀಡಿದ್ದಾರೆ.
ಮಂಡ್ಯ ನಗರದಲ್ಲಿರುವ ಜಿಲ್ಲಾಸ್ಪತ್ರೆಯ ರಕ್ತನಿಧಿಕೇಂದ್ರದಲ್ಲಿ ನೆಲದನಿ ಬಳಗ ಮಂಗಲ ಆಯೋಜಿಸಿದ್ದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಲಂಕೇಶ್ ಜನ್ಮದಿನ ಪ್ರಯುಕ್ತ 66ನೇ ಬಾರಿ ರಕ್ತದಾನ ಮತ್ತು ರಕ್ತದಾನ ಜಾಗೃತಿ ಅಭಿಯಾನ ಕಾರ‍್ಯಕ್ರಮದಲ್ಲಿ ರಕ್ತದಾನ ಮಾಡುವ ಮೂಲಕ ಯುವಜನರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಸುರೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ 10ರಿಂದ 15ಬಾರಿ ರಕ್ತದಾನ ಮಾಡುವುದನ್ನು ಗಮನಿಸಿದ್ದೇವೆ, ಆದರೆ ಯುವ ಉತ್ಸಾಹಿ ಮಂಗಲ ಲಂಕೇಶ್ ಅವರು 66ನೇ ಬಾರಿ ರಕ್ತದಾನ ಮಾಡಿ ಮಾನವೀಯತೆ ಮೌಲ್ಯಗಳನ್ನು ಜೀವಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು.
ನಾನು ಕಂಡಂತೆ ಸಮಾಜಮುಖಿ ಚಿಂತಕ ಮಂಗಲ ಲಂಕೇಶ್, ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಗೆಳೆಯರ ಸಂಭ್ರಮ ಹಾಗೂ ರಾಷ್ಟೀಯ ನಾಯಕರ ಸುದಿನಗಳಲ್ಲಿ ರಕ್ತದಾನ ಮತ್ತು ಸಮಾಜಮುಖಿ ಕಾರ‍್ಯಗಳನ್ನು ಮಾಡುತ್ತಾ ಬಂದಿದ್ದಾರೆ. ನೆಲದನಿ ಬಳಗದ ಮೂಲಕ ನೂರಾರು ಸೇವಾ ಕಾರ‍್ಯಗಳನ್ನು ಸಮಾಜಕ್ಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ರಕ್ತದಾನವೇ ಶ್ರೇಷ್ಠ ದಾನ. ಇದು ಸಂಪೂರ್ಣವಾಗಿ ನಿಜ. ಜೀವನ್ಮರಣದ ಹೋರಾಟದಲ್ಲಿರುವವರಿಗೆ ರಕ್ತದಾನ ಮಾಡುವ ಮೂಲಕ ಬದುಕು ನೀಡುವುದು ನಿಜಕ್ಕೂ ಉತ್ತಮವಾದ ಕೆಲಸ. ಹಾಗೆಯೇ ರಕ್ತದಾನ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು. ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು. ಇತ್ತೀಚಿನ ಅಧ್ಯಯನಗಳು ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುವುದರಿಂದ ವ್ಯಕ್ತಿಯ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಾಬೀತು ಮಾಡಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ನೆಲದನಿ ಬಳಗದ ನಂಜುಂಡೇಗೌಡ ಮತ್ತು ಬೃಂದ ಹಾಗೂ ಇತರರು ರಕ್ತದಾನ ಮಾಡಿ ಮಾನವೀಯತೆ ಮೆರೆದರು. ಕಾರ‍್ಯಕ್ರಮದಲ್ಲಿ ಮಹಿಳಾ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಸುಕನ್ಯಾ ರಂಗನಾಥ ಹೊಸಹೊಳಲು, ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಗಾಯಿತ್ರಿ ಮತ್ತು ಮುರುಳಿಧರ್ ಭಟ್ ಹಾಗೂ ಸಿಬ್ಬಂದಿ ಮಹಮ್ಮದ್ ರಫಿ, ನೀಲಗಿರಿ , ವಾಣಿಶ್ರೀ, ಕೌಸಲ್ಯ ಯುವತಿ ಮಂಡಳಿಯ ಅರುಣ ಕೆಂಪರಾಜ್, ರಾಜು ಮತ್ತಿತರರಿದ್ದರು.




