Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಹೆಸರು ಬದಲಾವಣೆ ಸರಿಯಲ್ಲ : ಗುರುಪ್ರಸಾದ್ ಕೆರಗೋಡು

 

ಮಂಡ್ಯ ನಗರದ ಹೃದಯ ಭಾಗದಲ್ಲಿ ನೂರು ಅಡಿ ಅಗಲವಿರುವ ಸುಮಾರು ಒಂದು ಮೈಲು. ಅದಕ್ಕಿಂತಲೂ ಹೆಚ್ಚಿರಬಹುದಾದ ವಾಹನ ಮತ್ತು ಜನಸಂಚಾರಕ್ಕೆ ಸುಗಮವಾಗಿರುವ ಏಕೈಕ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ಅಂದಿನಿಂದ ಇಂದಿನವರೆಗೂ ರಾಷ್ಟ್ರ ನಾಯಕನ ಹೆಸರಿನಲ್ಲೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ನಡುವೆ ಈ ಹೆಸರು ಬದಲಾವಣೆಗೆ ಪ್ರಯತ್ನ ನಡೆಯುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಾಯಕ ಗುರುಪ್ರಸಾದ್ ತಿಳಿಸಿದ್ದಾರೆ.

ಇತ್ತೀಚೆಗೆ ಮಂಡ್ಯ ನಗರಸಭೆಗೆ ನಾಡಪ್ರಭು ಕೆಂಪೇಗೌಡ ಪುತ್ಥಳಿ ಪ್ರತಿಷ್ಠಾನ ಸಮಿತಿ ಎಂಬ ಸಂಘಟನೆಯು ಮನವಿ ಸಲ್ಲಿಸಿ, ನೂರಡಿ ರಸ್ತೆಗೆ ನಾಡಪ್ರಭು ಕೆಂಪೇಗೌಡರ ಹೆಸರಿಡುವಂತೆ ಕೇಳಿಕೊಂಡಿದೆ, ಆದರೆ ಈಗಾಗಲೇ ಅಂಬೇಡ್ಕರ್ ರಸ್ತೆ ಎಂದೇ ಜನಜನಿತವಾಗಿರುವ ರಸ್ತೆಗೆ ಬೇರೆ ಯಾವುದೇ ಹೆಸರಿಡುವುದು ಬೇಡ, ಇರುವ ಹೆಸರಿನಲ್ಲೆ ರಸ್ತೆಯನ್ನು ಗುರುತಿಸುವಂತಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ಹೆಸರಿಡುವುದನ್ನು ನಾವು ವಿರೋಧಿಸುವುದಿಲ್ಲ, ಆದರೆ ಅವರ ಹೆಸರನ್ನು ಇತರೆ ಮುಖ್ಯರಸ್ತೆಗಳಿಗೆ ನಾಮಕರಣ ಮಾಡಲಿ, ಈ ನಿಟ್ಟಿನಲ್ಲಿ ನಗರಸಭೆ ಕ್ರಮ ಕೈಗೊಳ್ಳಲಿ ಎಂದು ಗುರುಪ್ರಸಾದ್ ಅವರು ನುಡಿಕರ್ನಾಟಕ.ಕಾಮ್ ಗೆ ಪ್ರತಿಕ್ರಿಯಿಸಿದ್ದಾರೆ.

ನಗರಸಭೆ ನಿರ್ಣಯ ಕೈಗೊಂಡು ನಾಮಕರಣ ಮಾಡಿರುವ 1980ನೇ ಇಸವಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ಚಾಲ್ತಿಯಲ್ಲಿದೆ, ನಗರಸಭೆ ನಾಮಫಲಕ ಹಾಕಿಲ್ಲದ ಕಾರಣವೂ ಅಥವಾ ರಸ್ತೆಯು ನೂರು ಅಡಿ ಅಗಲ ಇರುವ ಕಾರಣದಿಂದಲೋ ರಸ್ತೆಗೆ ನೂರಡಿ ರಸ್ತೆ ಎಂದು ಬಿಂಬಿತವಾಗಿದೆ. ಆದರೆ ಡಾ. ಬಿ ಆರ್ ಅಂಬೇಡ್ಕರ್ ರಸ್ತೆ ಎಂಬುದು ಜನಜನಿತವಾಗಿದೆ. ಈಗಲೂ ಸಹ ಬಹುತೇಕ ಅಂಗಡಿ ಮುಂಗಟ್ಟು, ಕಟ್ಟಡಗಳಲ್ಲಿ ಮತ್ತು ಸಂಘ- ಸಂಸ್ಥೆ. ವಕೀಲರು ಅಷ್ಟೇ ಅಲ್ಲದೆ ಪತ್ರಿಕಾ ಕಚೇರಿ ವಿಳಾಸಗಳಲ್ಲಿ ಡಾ.ಬಿ ಆರ್ ಅಂಬೇಡ್ಕರ್ ರಸ್ತೆ ಎಂದು ನಮೂದಿಸಿರುವುದು ರಸ್ತೆಗೆ ನಾಮಕರಣ ಮಾಡಲಾಗಿರುವ ಹೆಸರನ್ನು ಸೂಚಿಸಿದೆ. ಆದ್ದರಿಂದ ಇಂತಹ ರಸ್ತೆಯ ಹೆಸರನ್ನು ಬದಲಾಯಿಸುವುದು ಬೇಡ ಎಂದು ನಗರಸಭೆಗೆ ವಿವಿಧ ಸಂಘಟನೆಗಳು ಮನವಿ ಮಾಡುವ ಬಗ್ಗೆ ಸಭೆ ಸೇರಿ ಚರ್ಚಿಸಲಾಗಿದೆ ಎಂದರು.

ಇತ್ತೀಚೆಗೆ ನಡೆದ ಸಭೆಯಲ್ಲಿ ನಗರಸಭಾ ಸದಸ್ಯರಾದ ಗೀತಾ, ಪ್ರಕಾಶ್, ಮುಖಂಡರಾದ ಶಿವಪ್ರಕಾಶ್, ಶ್ರೀಧರ್ ಮುಂತಾದವರು ಭಾಗವಹಿಸಿ ಚರ್ಚೆ ನಡೆಸಿ, ಅಂತಿಮವಾಗಿ ನಗರಸಭೆಗೆ ಮನವಿ ಸಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದೇವೆಂದು ಅವರು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!