ಸಮ ಸಮಾಜ ನಿರ್ಮಾಣದ ಸೂತ್ರದಾರ ಡಾ.ಬಿ.ಆರ್.ಅಂಬೇಡ್ಕರ್‌ವಾದಕ್ಕೆ ಕರ್ನಾಟಕದಲ್ಲಿ ಜೀವ ತಂದವರು ಪ್ರೊ.ಬಿ.ಕೃಷ್ಣಪ್ಪ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಹೇಳಿದರು.
ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕ ಮತ್ತು ಜಿಲ್ಲಾ ಶಾಖೆ ಆಯೋಜಿಸಿದ್ದ ಸ್ವಾಭಿಮಾನಿ ಹೋರಾಟಗಾರ ಮಹಾತ್ಮ ಪ್ರೊ.ಬಿ. ಕೃಷ್ಣಪ್ಪರವರ ನೈಜ ಸಂಘಟನೆಯ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಅಂಬೇಡ್ಕರ್‌ವಾದವನ್ನು ಹಳ್ಳಿ ಹಳ್ಳಿಗಳಿಗೆ ಮುಟ್ಟಿಸಿ, ಸಂಘಟಿಸಿ ಹೊಸಭಾಷ್ಯೆ ಬರೆದು ಬದಲಾವಣೆ ಬೆಳಕು ಚೆಲ್ಲಿದ ಪ್ರೊ.ಕೃಷ್ಣಪ್ಪ ಅವರ ಹೋರಾಟಗಳನ್ನು ಜನರು ಎಂದಿಗೂ ಮರೆಯಬಾರದು. ವ್ಯಕ್ತಿ ನಾಶವಾದರೂ ವ್ಯಕ್ತಿತ್ವ ಮತ್ತು ಅವರ ಸಾಧನೆಗಳು ಮಾರ್ಗದರ್ಶನ ನೀಡುತ್ತವೆ ಎಂದು ನುಡಿದರು.
ಇಂದಿನ ದಿನಗಳಲ್ಲಿ ಶೋಷಿತ ಸಮುದಾಯಗಳು ಶೋಷಣೆಗೆ ಒಳಗಾಗುತ್ತಲೇ ಇವೆ. ಸಂಘಟನೆ ಮನೋಭಾವ ಕುಸಿಯುತ್ತಿದೆ, ಒಡೆದಾಳುವ ನೀತಿ ಷಢ್ಯಂತ್ರ ಹೆಚ್ಚುತ್ತಿದೆ, ಜನಸಮೂಹ ಮತ್ತಷ್ಟು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಗಂಗಾಧರಪ್ಪ, ವೆಂಕಟೇಶ್ ನಾಗಮಂಗಲ, ಪಕೀರಪ್ಪ, ಮಹಿಳಾ ಘಟಕದ ರಾಜ್ಯ ಸಂಚಾಲಕಿ ರತ್ನಮ್ಮ, ರಾಜ್ಯ ಖಜಾಂಚಿ ಬಿ ಎನ್ ಕಟಕಿ, ರಾಜ್ಯ ಮುಖಂಡರಾದ ಶಿವಬಸಪ್ಪ, ಶಿವಮೊಗ್ಗ ಹಾಗೂ ಜಿಲ್ಲಾ ಸಂಚಾಲಕರಾದ ಶಿವರಾಜ್, ಶ್ರೀನಿವಾಸ್, ತಿಮ್ಮಯ್ಯ, ಗುರುರಂಗಯ್ಯ ಸೇರಿದಂತೆ ಹಲವರು ಇದ್ದರು.