Wednesday, September 18, 2024

ಪ್ರಾಯೋಗಿಕ ಆವೃತ್ತಿ

ಡಾ.ಸಿ.ಎನ್.ಮಂಜುನಾಥ್ ನಾಡಿಗೆ ದೊಡ್ಡ ಆಸ್ತಿ: ಬಸವರಾಜ ಹೊರಟ್ಟಿ

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಲಕ್ಷಾಂತರ ರೋಗಿಗಳ ಪಾಲಿಗೆ ದೇವರ ಸಮಾನವಾಗಿರುವ ಡಾ. ಸಿ. ಎನ್. ಮಂಜುನಾಥ್ ಈ ನಾಡಿಗೆ ದೊಡ್ಡ ಆಸ್ತಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಣ್ಣಿಸಿದರು.

ಮಂಡ್ಯ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಎಂ. ಶ್ರೀನಿವಾಸ್ ಪ್ರತಿಷ್ಠಾನ ಏರ್ಪಡಿಸಿದ್ದ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಮತ್ತು ಎಂ. ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಯನ್ನು ಸಾಧಕರಿಗೆ ಪ್ರಧಾನ ಮಾಡಿ ನಂತರ ಅವರು ಮಾತನಾಡಿದರು.

ಡಾ. ಸಿ. ಎನ್. ಮಂಜುನಾಥ್ ರವರು ಜಯದೇವ ಹೃದ್ರೋಗ ಆಸ್ಪತ್ರೆಯನ್ನು ದೇಶದ ಯಾವುದೇ ದೊಡ್ಡ ಆಸ್ಪತ್ರೆಗಿಂತ ತುಂಬಾ ಚೆನ್ನಾಗಿ ಮಾಡಿದ್ದಾರೆ.ಇಲ್ಲಿಗೆ ಹೋದರೆ ಆರೋಗ್ಯ, ಆಯಸ್ಸು ಹೆಚ್ಚಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಅವರು ನಿವೃತ್ತರಾದರೂ ಸರ್ಕಾರ ಅವರ ಸೇವೆಯನ್ನು ಮುಂದುವರಿಸುತ್ತಿರುವುದೇ ಮಂಜುನಾಥ್ ರವರ ಸೇವೆಗೆ ಸಾಕ್ಷಿಯಾಗಿದೆ. ಯಾವ ಸರ್ಕಾರವೂ, ವಿರೋಧಪಕ್ಷವು ಅವರ ಬಗ್ಗೆ ಮಾತನಾಡುವುದಿಲ್ಲ ಅವರೊಬ್ಬ ಪುಣ್ಯಪುರುಷ.ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ನನ್ನ ಪುಣ್ಯ ಎಂದು ಗುಣಗಾನ ಮಾಡಿದರು.

ಶಾಸಕ ಎಂ. ಶ್ರೀನಿವಾಸ್ ರವರು ಸಂಭಾವಿತ, ಶ್ರೇಷ್ಠ ವ್ಯಕ್ತಿ. ನನ್ನ 43 ವರ್ಷದ ರಾಜಕಾರಣ ಇತಿಹಾಸದಲ್ಲಿ ನನಗೆ ಅಚ್ಚುಮೆಚ್ಚಿನ ಸ್ನೇಹಿತರಾಗಿರುವ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಶುಭ ಕೋರಿದರು.

ಡಾ.ಮಂಜುನಾಥ್ ರೀತಿ ಕೆಲಸ ಮಾಡಿ
ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಡಾ. ಸಿ.ಎನ್. ಮಂಜುನಾಥ್ ಅವರ ಸೇವಾ ಮನೋಭಾವ ಎಲ್ಲರಿಗೂ ಮೆಚ್ಚುಗೆಯಾಗಿದೆ. ಜನಾರ್ದನ ರೆಡ್ಡಿಯ ಅಣ್ಣ ಸೋಮಶೇಖರ ರೆಡ್ಡಿ ನಾವೆಲ್ಲ ಯುರೋಪ್ ಪ್ರವಾಸಕ್ಕೆ ಹೋಗಿದ್ದಾಗ, ನಾವೆಲ್ಲ ಧರ್ಮಸ್ಥಳಕ್ಕೆ ಮಂಜುನಾಥ ಸನ್ನಿಧಿಗೆ ಹೋಗುತ್ತೇವೆ. ಅಲ್ಲಿಗೆ ಹೋಗುವುದು ಬೇಡ,ಜಯದೇವ ಆಸ್ಪತ್ರೆಗೆ ಹೋಗಿ ಡಾ. ಮಂಜುನಾಥ್ ಸರ್ ಗೆ ಕೈ ಮುಗಿದರೆ ಒಂದಷ್ಟು ಹೆಚ್ಚು ವರ್ಷ ಬದುಕಿರುತ್ತೇವೆ ಎಂದು ಅಭಿಮಾನದಿಂದ ನುಡಿದಿದ್ದರು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ನೂತನ ನಿರ್ದೇಶಕರಾಗಿ ಡಾ.ಜವರೇಗೌಡ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಬಳಿ ಬಂದಿದ್ದರು‌ ಆಗ ಸಿದ್ದರಾಮಯ್ಯನವರು ಅಧಿಕಾರ ತೆಗೆದುಕೊಳ್ಳುವುದು ದೊಡ್ಡದಲ್ಲ, ಜಯದೇವ ಹೃದ್ರೋಗ ಸಂಸ್ಥೆಯ ಡಾ. ಸಿ. ಎನ್. ಮಂಜುನಾಥ್ ರೀತಿ ಕೆಲಸ ಮಾಡಬೇಕು ಎಂದು ಹೇಳಿದರು.ಇದು ಮಂಜುನಾಥ್ ರವರ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿ ಎಂದರು. ಎಂ.ಶ್ರೀನಿವಾಸಣ್ಣನವರು ಮಾತು ಕಮ್ಮಿ ಕೆಲಸ ಜಾಸ್ತಿ ಎನ್ನುವ ವ್ಯಕ್ತಿತ್ವದವರು. ಅಭಿವೃದ್ಧಿ ವಿಚಾರದಲ್ಲಿ ಅವರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಶ್ರೀನಿವಾಸನಣ್ಣನವರ ಪ್ರತಿಷ್ಠಾನ ಬಹಳ ವಿಶೇಷವಾಗಿ ಸಾಧಕರನ್ನು ಗೌರವಿಸಿ ಬೆನ್ನು ತಟ್ಟುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.

ಸಾಧಕರ ಪ್ರೋತ್ಸಾಹಿಸಿ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್ ರಾಯಪುರ ಮಾತನಾಡಿ, ಯಾವ ಸಮಾಜ ಸಾಧಕರನ್ನು ಗುರುತಿಸುವುದಿಲ್ಲವೋ ಅವರ ಬೆನ್ನು ತಟ್ಟಿ ಶ್ಲಾಘಿಸುವುದಿಲ್ಲವೋ ಆ ಸಮಾಜಕ್ಕೆ ಸಾಧಕರನ್ನು ಪಡೆಯುವ ಅರ್ಹತೆ ಇಲ್ಲ. ನಿಜವಾದ ಸಾಧಕರನ್ನು ಹುಡುಕಿ ಅವರನ್ನು ಒತ್ತಾಯಪೂರ್ವಕವಾಗಿ ವೇದಿಕೆ ಕರೆತಂದು, ನಿಮಗೆ ನಾವು ಸನ್ಮಾನ ಮಾಡುತ್ತಿಲ್ಲ. ನಿಮಗೆ ಹಾರ, ತುರಾಯಿ ಹಾಕಿ ನಮಗೆ ಸನ್ಮಾನ ಮಾಡಿಕೊಳ್ಳುತ್ತಿದ್ದೇವೆ ಎನ್ನಬೇಕು.ಸಾಧಕರನ್ನು ಹುಡುಕಿ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರೊ.ಜಯಪ್ರಕಾಶ ಗೌಡ, ಹನಕೆರೆ ಶಿವರಾಜು ಸೇರಿದಂತೆ ಹಲವು ಗಣ್ಯರು, ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಶಾಸಕ ಎಂ.ಶ್ರೀನಿವಾಸ್ ರವರಿಗೆ ಜನ್ಮದಿನದ ಶುಭಾಶಯ ಕೋರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!