Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೂಲಿ-ಕಾರ್ಮಿಕರು ವಲಸೆ ಹೋಗದಂತೆ ನೋಡಿಕೊಳ್ಳಿ: ಡಾ.ಜಿ.ಸಿ ಪ್ರಕಾಶ್

ಬರ ಪರಿಸ್ಥಿತಿ ಹಿನ್ನಲೆ ಜನರಿಗೆ ಸ್ಥಳೀಯವಾಗಿ ಮನರೇಗಾ  ಹಾಗೂ ಇನ್ನಿತರ ಯೋಜನೆಯಡಿ ಕೆಲಸ ನೀಡಿ ಕೂಲಿ-ಕಾರ್ಮಿಕರು ವಲಸೆ ಹೋಗದಂತೆ ನೋಡಿಕೊಳ್ಳಿ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ಅವಲೋಕನ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಬರಗಾಲ ಬಂದಾಗ ಕೃಷಿಕರು ಹಾಗೂ ಗ್ರಾಮಸ್ಥರು ದುಡಿಯುವುದಕ್ಕೆ ಊರು ಬಿಟ್ಟು ಹೋಗುತ್ತಾರೆ. ಆಗಾಗಿ ಅಂತಹ ಜನರು ವಲಸೆ ಹೋಗುವುದನ್ನು ತಡೆಯಿರಿ. ಸ್ಥಳೀಯವಾಗಿ ಅವರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ. ಕೃಷಿ ಹೊಂಡ, ಹೂಳು ಎತ್ತುವುದು ಸೇರಿದಂತೆ ಇನ್ನಿತರ ಕೆಲಸ ನೀಡಿ, ಗ್ರಾಮ ಪಂಚಾಯತಿಯಲ್ಲಿ  ಮನರೇಗಾ ಯೋಜನೆಯಡಿ ಕೆಲಸಕ್ಕಾಗಿ ಮನವಿ ಸಲ್ಲಿಸುವವರಿಗೆ ಆದ್ಯತೆ ಮೇಲೆ   ವಯೋಮಾನ ಆಧಾರಿಸಿ ಅವರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ ಎಂದರು.

ನರೇಗಾ ಯೋಜನೆಯಡಿ ದಿನಗೂಲಿ ರೂ.316 ನೀಡಲಾಗುತ್ತಿದೆ, ಅದನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಕೆ ಮಾಡಿರಿ. ಹೆಚ್ಚುವರಿ ಕೆಲಸ ಬೇಕಿದ್ದರೆ ಮಾಹಿತಿ ನೀಡಿ, ಕೆಲಸ ನೀಡಿ ಎಂದರು.

ಪ್ರವಾಸೋದ್ಯಮ ಸ್ಥಳದಲ್ಲಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ

ರಂಗನತಿಟ್ಟು ಸೇರಿದಂತೆ ಪ್ರವಾಸೋದ್ಯಮ ಸ್ಥಳದಲ್ಲಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ, ಗಿಡಕ್ಕೆ ನೀರು ಹಾಕುವುದು. ಅಲ್ಲಿಯ ಪರಿಸರ ನೋಡಿ ಕೊಳ್ಳುವುದು ಹೀಗೆ ಅಧಿಕಾರಿಗಳು, ಚಿಂತಿಸಿ ಕೂಲಿ-ಕಾರ್ಮಿಕರಿಗೆ ಉದ್ಯೋಗ ನೀಡಿ, ಬರ ಪರಿಸ್ಥಿತಿ ನಿರ್ವಹಣೆಯ ನೋಡಲ್ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ,  ಪಂಚಾಯತಿಯ ಅಧಿಕಾರಿಗಳಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿರಿ ಎಂದರು.

ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರದ ಯೋಜನೆಗಳು ಕೂಡ ನೆರವಾಗಲಿವೆ. ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ, ಪ್ರತಿ ಮಾಹೆ ಡಿ.ಬಿ.ಟಿ ಮುಖೇನ ಹಣ ಸಂದಾಯವಾಗುತ್ತಿದೆಯ ಎಂದು ಖಾತರಿ ಮಾಡಿಕೊಳ್ಳಿ. ಜೊತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.

ಕುಡಿಯುವ ನೀರಿನ ತೊಂದರೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಮೊದಲೇ ನೀರು ದೊರೆಯುವ ಮೂಲಗಳನ್ನು ಪತ್ತೆ ಮಾಡಿಕೊಳ್ಳಿ. ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯ ಏಳು ತಾಲ್ಲೂಕುಗಳು ಬರ ಎಂದು ಘೋಷಣೆಯಾಗಿದೆ. ಎಲ್ಲಾ ನೋಡಲ್ ಅಧಿಕಾರಿಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿ ಎಂದರು.

ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬರ ನಿರ್ವಹಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!