Thursday, September 19, 2024

ಪ್ರಾಯೋಗಿಕ ಆವೃತ್ತಿ

ಆಮಿಷಗಳಿಗೆ ಬಲಿಯಾಗದೆ ಪ್ರಜಾಪ್ರಭುತ್ವದ ಹಬ್ಬ ಆಚರಿಸೋಣ – ಡಾ.ಹೆಚ್.ಎನ್ ಗೋಪಾಲಕೃಷ್ಣ

ವಿಧಾನಸಭಾ ಚುನಾವಣೆಯ ಮತದಾನ ಮೇ 10 ರಂದು ಜಿಲ್ಲೆಯಲ್ಲಿ ನಡೆಯಲಿದ್ದು,ಈ ದಿನ ಎಲ್ಲಾ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ತಪ್ಪದೇ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ನಗರದಲ್ಲಿ ಇಂದು ಪೊಲೀಸ್ ಕಾಲೋನಿಯಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ”ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರೀಯ ಹಬ್ಬದ ಮಾದರಿಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಮೂಲ್ಯವಾದ ಶಕ್ತಿ ಮತದಾನದ ಹಕ್ಕನ್ನು ನಮಗೆ ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನಮಾಡಬೇಕು ಎಂಬುದು ಸ್ವೀಪ್ ಕಾರ್ಯಕ್ರಮಗಳ ಉದ್ದೇಶವಾಗಿದೆ. ಈಗಾಗಲೇ ಜಿಲ್ಲಾಡಳಿತ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿ 18 ವರ್ಷ ಮೇಲ್ಪಟ್ಟವರಿಂದ ಅರ್ಜಿ ಸ್ವೀಕರಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದೆ. ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.

ಮಂಡ್ಯ ಜಿಲ್ಲೆ ರಾಜ್ಯದಲ್ಲೇ ರಾಜಕೀಯವಾಗಿ ಸೂಕ್ಷ್ಮತೆ, ಪ್ರಕ್ರಿಯೆ ಹಾಗೂ ಸಾಕ್ಷರತೆ ಹೊಂದಿರುವ ಜಿಲ್ಲೆಯಾಗಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸರಾಸರಿ 72% ಮತದಾನ ಆಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಸರಾಸರಿ ಮತದಾನ 82.37% ನಡೆದಿದೆ. 82.37% ಮತದಾನ ಜಿಲ್ಲೆಯಲ್ಲಿ ನಡೆದಿದ್ದರೂ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಇರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಗಳನ್ನು ನಗರ ಪ್ರದೇಶದಲ್ಲಿ ಹಮ್ಮಿಕೊಂಡು ಮನೆ- ಮನೆಗೆ ಭೇಟಿ ನೀಡಿ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ. ಮತಗಟ್ಟೆಯಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇಂದಿನಿಂದ ಮತದಾರರಿಗೆ ವೋಟರ್ ಸ್ಲಿಪ್ ನ್ನು ಮನೆ-ಮನೆಗೆ ತಲುಪಿಸುವ ಕೆಲಸ ಸಹ ಮಾಡಲಾಗುತ್ತಿದೆ. ಇದರಿಂದ ಅವರು ಮತಗಟ್ಟೆ ಸಂಖ್ಯೆಯ ವಿಳಾಸವನ್ನು ತಿಳಿದುಕೊಳ್ಳಬಹುದು ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪ್ರತಿಯೊಂದು ಮತವು ಅಮೂಲ್ಯ. ಮತದಾನ ಮಾಡುವುದರಿಂದ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದರೊಂದಿಗೆ ದೇಶದ ಅಭಿವೃದ್ಧಿಗೆ ಸಹಕಾರ ನೀಡಬಹುದು. ಹಿರಿಯ ನಾಗರೀಕರು, ವಿಕಲಚೇತನರಿಗೆ ವಿಶೇಷವಾಗಿ ಮತದಾನ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮತಗಟ್ಟೆಗಳಲ್ಲಿ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಮಾತನಾಡಿ, ಪ್ರತಿಯೊಬ್ಬರು ಮತದಾನ ಮಾಡಲು ಜಿಲ್ಲಾಡಳಿತ ಬಹಳಷ್ಟು ಶ್ರಮವಹಿಸುತ್ತಿದೆ. ಯಾರಾದರೂ ಅಮಿಷ ನೀಡುವುದು, ಒತ್ತಡ ತಂದರೆ ತಕ್ಷಣ ದೂರು ನಿರ್ವಾಹಣಾ ಕೋಶ 1950 ಅಥವಾ ಪೊಲೀಸ್ ಇಲಾಖೆಯ 112 ಕ್ಕೆ ನಿರ್ಭೀತಿಯಿಂದ ಕರೆ ಮಾಡಿ. ತಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವೋಟರ್ ಸ್ಲಿಪ್ ನೀಡುವ ಕಾರ್ಯಕ್ಕೆ ಎಲ್ಲಾ ಗಣ್ಯರು ಚಾಲನೆ ನೀಡಿದರು.

ಸೈಕಲ್ ಜಾಥಾ
ಮಂಡ್ಯನಗರದ ಪೊಲೀಸ್ ಕಾಲೋನಿಯಲ್ಲಿರುವ ಸರ್ಕಾರಿ ಶಾಲಾ ಆವರಣದಿಂದ ಸೈಕಲ್ ಜಾಥಾಗೆ ಚಾಲನೆ ನೀಡಲಾಯಿತು. ಸೈಕಲ್ ಜಾಥಾ ಬನ್ನೂರು ರಸ್ತೆ, 100 ಅಡಿ ರಸ್ತೆ, ಆರ್.ಪಿ ರಸ್ತೆ, ಸಂಜಯ್ ಸರ್ಕಲ್ ಮೂಲಕ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಹತ್ತಿರ ಸಮಾಪ್ತಿಗೊಂಡಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಸಂಜೀವಪ್ಪ, ಸ್ವೀಪ್ ಐಕಾನ್ ಡಾ.ಎಂ.ಎಸ್ ಚಲುವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸೀತಾಲಕ್ಷ್ಮಿ, ವಾರ್ತಾಧಿಕಾರಿ ನಿರ್ಮಲ ಎಸ್.ಹೆಚ್, ನೆಹರು ಯುವ ಕೇಂದ್ರದ ಹರ್ಷ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!