Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಮಗಾರಿ ನಿಲ್ಲಿಸುವಂತೆ ಸೂಚನೆ ಕೊಟ್ಟಿರುವುದು ಸರಿಯಲ್ಲ: ಅನ್ನದಾನಿ

ನಾನು ಶಾಸಕನಾಗಿದ್ದ ವೇಳೆ ಮಾರೇಹಳ್ಳಿ ಬಳಿ ಬಡವರಿಗೆ ನಿವೇಶನ ಹಂಚಿಕೆ ಮಾಡಿ, ವಿವಿಧ ಇಲಾಖೆಗಳಿಂದ ಅನುದಾನ ಬಿಡುಗಡೆ ಮಾಡಿಸಿದ ಪರಿಣಾಮ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇದನ್ನು ಸಹಿಸದ ಶಾಸಕರು ಅದನ್ನು ಅಕ್ರಮ ಎಂದು ಹೇಳಿ ಕಾಮಗಾರಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ಮಳವಳ್ಳಿ ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಮೊದಲ ಬಾರಿ ಶಾಸಕನಾಗಿದ್ದ ವೇಳೆ ಪಟ್ಟಣದ ಬಡವರಿಗೆ ನಿವೇಶನ ಕಲ್ಪಿಸಬೇಕೆಂಬ ಆಕಾಂಕ್ಷೆಯೊಂದಿಗೆ ಆಶ್ರಯ ಬಡಾವಣೆಗೆ ಜಾಗ ಗುರುತಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತು, ನಂತರ ಗೆದ್ದವರು 10 ವರ್ಷ ಶಾಸಕರಾಗಿದ್ದರೂ ಅದನ್ನು ಅಭಿವೃದ್ಧಿ ಪಡಿಸಲು ಮುಂದಾಗಿರಲಿಲ್ಲ ಎಂದರು.

ಮತ್ತೆ 2018ರಲ್ಲಿ ಗೆದ್ದಾಗ ಬಡಾವಣೆಯ ಅಭಿವೃದ್ಧಿಗೆ 2 ಕೋಟಿ ಅನುದಾನ ಬಿಡುಗಡೆ ಮಾಡಿಸಿ ರಸ್ತೆ, ಚರಂಡಿ, ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಪಟ್ಟಣದ ಬಹುತೇಕ ಬಡಾವಣೆಗಳಿಗೆ 20 ಅಡಿ ರಸ್ತೆಗಳೇ ಇರುವುದು, ಶಾಸಕರು ರಾಜಕೀಯ ದೃಷ್ಟಿಯಿಂದ ಯೋಚನೆ ಮಾಡುವುದನ್ನು ಬಿಟ್ಟು ಬಡವರ ಜೀವನದ ಬಗ್ಗೆಯೂ ಚಿಂತನೆ ನಡೆಸಬೇಕೆಂದರು.

ಮಳವಳ್ಳಿ ತಾಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಪರಭಾರೆ ಸಂಬಂಧ ಈಗಾಗಲೇ ಒಂದು ಸಾವಿರ ಎಕರೆ ಭೂಮಿಯನ್ನು ಮರು ವಶಕ್ಕೆ ಪಡೆಯಲಾಗಿದೆ ಎಂಬ ಹೇಳಿಕೆ ಸಂಬಂಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕೂಡಲೇ ಶ್ವೇತಪತ್ರ ಹೊರಡಿಸಬೇಕು, ಸಾವಿರ ಎಕರೆ ಮರುವಶದ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ನಮಗೆ ಇರುವ ಮಾಹಿತಿಯ ಪ್ರಕಾರ 200 ಎಕರೆ ಮಾತ್ರ ವಶಕ್ಕೆ ಪಡೆಯಲಾಗಿದೆ. ವಾರದೊಳಗೆ ತಪ್ಪಿತಸ್ಥರ ವಿರುದ್ಧ ಕೈಗೊಂಡು ಪ್ರಕರಣ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದರು.

ಇದೇ ವೇಳೆ ಜೆಡಿಎಸ್ ಎಸ್ಸಿ ವಿಭಾಗದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಬೆಳಕವಾಡಿ ಬಿ.ಎಂ.ಕಾಂತರಾಜು ಅವರಿಗೆ ನೇಮಕಾತಿ ಪತ್ರ ನೀಡಿ ಅಭಿನಂದಿಸಲಾಯಿತು.

ಗೋಷ್ಠಿ ಯಲ್ಲಿ ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ನಾಗೇಶ್, ಎಂ.ಟಿ.ಪ್ರಶಾಂತ್, ಸಿದ್ದರಾಜು, ರವಿ, ಜೆಡಿಎಎಸ್ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷ ಜಯರಾಮು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬುಲೆಟ್ ನಿಂಗಣ್ಣ, ಜೆಡಿಸ್ ತಾಲೂಕಿನ ಮಾಜಿ ಅಧ್ಯಕ್ಷ ಮಲ್ಲೇಗೌಡ, ಕಾರ್ಯಾಧ್ಯಕ್ಷ ಪುಟ್ಟಬುದ್ಧಿ, ಮುಖಂಡರಾದ ನಾಗರಾಜು, ಮೆಹಬೂಬ್ ಪಾಷಾ, ಸದಾನಂದ, ಮಲ್ಲೇಶ್, ಚಿಕ್ಕಪ್ರಕಾಶ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!