Friday, September 20, 2024

ಪ್ರಾಯೋಗಿಕ ಆವೃತ್ತಿ

ಆತ್ಮ ತೃಪ್ತಿಯಂತೆ ಬದುಕಿದರೆ ಪ್ರತಿ ಕ್ಷಣವು ಹೊಸತು: ಡಾ.ಕುಮಾರ

ನಾವು ಸಂತೋಷವಾಗಿ ನೆಮ್ಮದಿಯಿಂದ ನಮ್ಮ ಮನಸ್ಸಿಗೆ ಹಾಗೂ ಆತ್ಮಕ್ಕೆ ತೃಪ್ತಿಯಾಗುವಂತೆ ಬದುಕಿದರೆ, ಪ್ರತಿ ಕ್ಷಣವು ಹೊಸತು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಮಂಡ್ಯ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ 2024 ರ ಹೊಸವರ್ಷದ ಅಂಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗಿಡ ನೆಟ್ಟು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ಕೇಕ್ ಕತ್ತರಿಸಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಆತ್ಮಸಾಕ್ಷಿ ಹಾಗೂ ಮನಸಾಕ್ಷಿಗೆ ಅನುಗುಣವಾಗಿ ಕಂದಾಯ ಇಲಾಖೆ ನೌಕರರು ಪ್ರಾಮಾಣಿಕವಾಗಿ ಹಾಗೂ ಪರಿಶುದ್ಧವಾಗಿ ನಮಗೆ ಕೊಟ್ಟಿರುವ ಕೆಲಸವನ್ನು ಚಾಚು ತಪ್ಪದೇ, ಪ್ರತಿಯೊಬ್ಬರ ಮನಸ್ಸಿನಲ್ಲಿ ಸಂತೋಷ ತರುವ ರೀತಿ ಮಾಡಿದಾಗ, ಜನಸಾಮಾನ್ಯರಿಗೆ ಕಂದಾಯ ಇಲಾಖೆ ಬಗ್ಗೆ ಅಭಿಮಾನ ಬರುತ್ತದೆ ಎಂದು ಹೇಳಿದರು.

ಜೀವನ ಎನ್ನುವುದು ಅತಿ ಅಮೂಲ್ಯವಾದದ್ದು ಅದನ್ನು ಪರಿಣಾಮಕಾರಿಯಾಗಿ ಅರ್ಥಪೂರ್ಣವಾಗಿ ಕಳೆಯಬೇಕು. ಜೀವನದಲ್ಲಿ ಮೌಲ್ಯಗಳನ್ನು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಹೊಸವರ್ಷದಲ್ಲಿ ಓರೆ ಕೋರೆಗಳನ್ನು ತಿದ್ದುಕೊಂಡು ಬದಲಾವಣೆ ಆಗುವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಂದಾಯ ಇಲಾಖೆ ಬಹಳ ವಿಶೇಷವಾದ ಇಲಾಖೆಯಾಗಿದ್ದು ಬಹಳ ಪ್ರಾಮುಖ್ಯತೆ ಇದೆ ಹಾಗೂ ಗುರುತರವಾದ ಜವಾಬ್ದಾರಿ ಇದೆ. ಬೇರೆ ಇಲಾಖೆಗೂ ಹಾಗೂ ಕಂದಾಯ ಇಲಾಖೆಗೂ ಸಾಕಷ್ಟು ವ್ಯತ್ಯಾಸ ಇರುವುದನ್ನು ನಾವು ನೋಡಬಹುದು. ಆದ್ದರಿಂದ ಕಂದಾಯ ಇಲಾಖೆ ನೌಕರರು ತಾವು ಮಾಡುವ ಕೆಲಸದಲ್ಲಿ ಪರಿಶುದ್ಧತೆ, ನಿಖರತೆ ಇರಬೇಕು ಎಂದು ಹೇಳಿದರು.

ಜನ ಸಾಮಾನ್ಯರಿಗೆ ಅನುಕೂಲವಾಗುವ ರೀತಿ ಕಂದಾಯ ಇಲಾಖೆ ನೌಕರರು ಕೆಲಸ ಮಾಡಬೇಕು. ನೌಕರರು ಮಾಡಿದ ಕೆಲಸದಿಂದ ಕಳೆದ ಆರು ತಿಂಗಳಲ್ಲಿ ಬಾಕಿ ಇದ್ದ 4,600 ಕೋರ್ಟ್ ಕೆಲಸಗಳು ಮುಗಿದಿವೆ, ಪೌತಿ ಖಾತೆ ಆಂದೋಲನ ಯಶಸ್ವಿಯಾಗಿದೆ, ಪಹಣಿ ತಿದ್ದುಪಡಿ, ಸಾಮಾಜಿಕ ಭದ್ರತಾ ಯೋಜನೆ, ಫ್ರೂಟ್ಸ್ ಯೋಜನೆಗಳು ನೌಕರರೆಲ್ಲರೂ ಜೊತೆಗೂಡಿ ಕೆಲಸ ಮಾಡಿರುವುದರಿಂದ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿವೆ ಎಂದರು.

ಕಂದಾಯ ಇಲಾಖೆ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಈ ನಿಟ್ಟಿನಲ್ಲಿ ಒಂದು ವರ್ಷಕ್ಕೆ 20 ಸಾವಿರ ರೂ.ಗಳನ್ನು ತಮ್ಮ ಕುಟುಂಬದವರನ್ನು ಸೇರಿಸಿ ಹೆಲ್ತ್ ಇನ್ಸೂರೆನ್ಸ್ ಮಾಡಿಸಿದರೆ 20 ಲಕ್ಷ ರೂ.ವರೆಗೆ ಮೆಡಿಕಲ್ ಕ್ಲೈಮ್ ಮಾಡಬಹುದು ಅದರ ಬಗ್ಗೆ ಹೆಚ್ಚಿನ ಗಮನ ಕೊಡಿ ಎಂದು ಸಲಹೆ ನೀಡಿದರು.

ಕಂದಾಯ ಇಲಾಖೆ ನೌಕರ ಸಂಘದ ಜಿಲ್ಲಾಧ್ಯಕ್ಷ ಡಿ.ತಮ್ಮಣ್ಣಗೌಡ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಬೇರೆ ಇಲಾಖೆಯ ಕೆಲಸಗಳನ್ನು ಕಂದಾಯ ಸಿಬ್ಬಂದಿಯಿಂದ ಮಾಡಿಸುತ್ತಿದ್ದು ಪ್ರತಿ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸಲು ಹಾಗೂ ಸಂಜೆಯಿಂದ ರಾತ್ರಿ ಸಮಯದಲ್ಲಿ ಗೂಗಲ್ ಮೀಟಿಂಗ್ ಮಾಡುತ್ತಿದ್ದು, ಪ್ರತಿ ಸಾರ್ವಜನಿಕ ರಜಾ ದಿನಗಳಲ್ಲಿಯೂ ಸಹ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಸಿಲ್ದಾರ್ ಅವರು ಒತ್ತಡ ಹಾಕುತ್ತಿರುವುದನ್ನು ಕೈ ಬಿಡಬೇಕು ಎಂದರು.

ರಾಜ್ಯದಲ್ಲಿ ಸರಿ ಸುಮಾರು 4,000 ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಿ ಹಾಲಿ ನೌಕರರ ಕಾರ್ಯ ಒತ್ತಡ ಕಡಿಮೆ ಮಾಡಬೇಕು, ಕಂದಾಯ ಇಲಾಖೆಯಲ್ಲಿ ಕುಟುಂಬದ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆ ಇರುವ ನೌಕರರುಗಳಿಗೆ ಅಂತರ ಜಿಲ್ಲಾ ವರ್ಗಾವಣೆಯನ್ನು ಮರು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ. ತಮ್ಮಣ್ಣಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಉಪಾಧ್ಯಕ್ಷರಾದ ವೆಂಕಟೇಶ್, ಜಗದೀಶ್, ಮಂಜುನಾಥ್, ಪೂರ್ಣಚಂದ್ರ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ರೇವಣ್ಣ, ಲಿಂಗಸ್ವಾಮಿ, ಶ್ರೀನಿವಾಸ್ ಮೂರ್ತಿ, ಚಂದ್ರಕಲಾ, ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!