Sunday, May 19, 2024

ಪ್ರಾಯೋಗಿಕ ಆವೃತ್ತಿ

ವಿಧಾನಸಭಾ ಚುನಾವಣೆ | ಮಳವಳ್ಳಿ ಮೀಸಲು ಕ್ಷೇತ್ರದ ಅಧಿಪತಿ ಯಾರು?

ಮಂಡ್ಯ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಮಳವಳ್ಳಿಯಲ್ಲಿ ಚುನಾವಣಾ ಕದನ ಜೋರಾಗಿ  ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಡುವೆಯೇ ನೇರ ಕಾಳಗ ನಡೆಯುತ್ತಿದ್ದು,ಬಿಜೆಪಿ ಕೂಡ ಪ್ರಬಲ ಪೈಪೋಟಿ ನೀಡುವೆ ಎನ್ನುತ್ತಿದೆ‌.

ಮೀಸಲು ಕ್ಷೇತ್ರ ಮಳವಳ್ಳಿಯ ಕೆಲವು ದಶಕಗಳ ರಾಜಕೀಯ ಇತಿಹಾಸ ನೋಡುವುದಾದರೆ, 2004 ರಿಂದ ಇಲ್ಲಿಯವರೆಗೆ ನಡೆದಿರುವ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪಿ‌.ಎಂ.ನರೇಂದ್ರ ಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಅನ್ನದಾನಿ ತಲಾ ಎರಡು ಬಾರಿ ಗೆಲುವು ಸಾಧಿಸಿದ್ದಾರೆ.

ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು,ಇವೆರೆಡರ ನಡುವೆ ಬಿಜೆಪಿ ಕೂಡ ಪೈಪೋಟಿ ನೀಡಲು ಸಜ್ಜಾಗಿದೆ.

ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ ಮತ್ತು ಜೆಡಿಎಸ್‌ನ ಕೆ.ಅನ್ನದಾನಿ ನಡುವೆ ಈ ಬಾರಿ ಬಿಜೆಪಿ ಮುನಿರಾಜು ಕೂಡಾ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.ಕಣದಲ್ಲಿ ಈ ಬಾರಿ 14 ಸ್ಪರ್ಧಿಗಳು ಅಖಾಡಲ್ಲಿದ್ದಾರೆ. ಪ್ರಮುಖ ಮೂರು ಪಕ್ಷದ ಅಭ್ಯರ್ಥಿಗಳ ಜತೆಗೆ ಬಿಎಸ್ಪಿಯಿಂದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಆಪ್‌ನಿಂದ ಬಿ.ಸಿ.ಮಹದೇವಸ್ವಾಮಿ, ಭಾರತೀಯ ಬೆಳಕು ಪಾರ್ಟಿಯಿಂದ ಸಿ.ಎಂ.ನಾಗರಾಜಮೂರ್ತಿ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಎಂ.ನಂದೀಶ್‌ಕುಮಾರ್, ಪಕ್ಷೇತರರಾಗಿ ಸಿ.ಅನ್ನದಾನಿ, ಜೆ.ಉಮಾ, ಎಂ.ಎಸ್.ಮಾಧವ್‌ಕಿರಣ್, ಎಂ.ಎಲ್.ಮೋಹನ್‌ಕುಮಾರ್, ಮಂಟೇಲಿಂಗು, ಟಿ.ಎನ್.ಸತೀಶ್‌ಕುಮಾರ್, ಎಚ್.ಬಿ.ಸುಧಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

2013ರ ಚುನಾವಣಾ ಫಲಿತಾಂಶ

ಗೆದ್ದವರು
ಪಿ.ಎಂ.ನರೇಂದ್ರಸ್ವಾಮಿ
ಪಕ್ಷ ಕಾಂಗ್ರೆಸ್
ಪಡೆದ ಮತ 61,869

ಸೋತವರು
ಡಾ.ಕೆ.ಅನ್ನದಾನಿ
ಪಕ್ಷ ಜೆಡಿಎಸ್
ಪಡೆದ ಮತ 61,331
ಗೆಲುವಿನ ಅಂತರ 538

2018ರ ಚುನಾವಣಾ ಫಲಿತಾಂಶ

ಗೆದ್ದವರು
ಡಾ.ಕೆ.ಅನ್ನದಾನಿ
ಪಕ್ಷ ಜೆಡಿಎಸ್
ಪಡೆದ ಮತ 1,03,038

ಸೋತವರು
ಪಿ.ಎಂ.ನರೇಂದ್ರಸ್ವಾಮಿ
ಪಕ್ಷ ಕಾಂಗ್ರೆಸ್
ಪಡೆದ ಮತ 76,278
ಗೆಲುವಿನ ಅಂತರ 26,760

ಕ್ಷೇತ್ರದ ಮತದಾರರು
ಪುರುಷರು 1,24,284
ಮಹಿಳೆಯರು 1,24,187
ಇತರೆ 23
ಒಟ್ಟು 2,48,494

ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಪಿ.ಎಂ.ನರೇಂದ್ರ ಸ್ವಾಮಿ
ಮಳವಳ್ಳಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದೆ. ಕಳೆದ ಬಾರಿಯ ಸೋಲಿನಿಂದ ಹೊರಬರಲು ಪೂರಕವಾದ ವಾತಾವರಣ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ. ಒಕ್ಕಲಿಗ ಮುಖಂಡರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎನ್ನುವ ವಿರೋಧಿಗಳ ಸುಳ್ಳಿಗೆ ಬಲಿಯಾಗಿದ್ದ ನರೇಂದ್ರ ಸ್ವಾಮಿ ಅವರಿಗೆ ಈ ಬಾರಿ ಅಂತಹ ಪರಿಸ್ಥಿತಿ ಕಂಡುಬರುತ್ತಿಲ್ಲ.

ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರೇ ನರೇಂದ್ರಸ್ವಾಮಿ ಅವರ ಪರವಾಗಿ ಖುದ್ದು ಅಖಾಡಕ್ಕೆ ಇಳಿದು ಕೆಲಸ ಮಾಡುತ್ತಿದ್ದಾರೆ.ಅವರ ಪರ ಒಕ್ಕಲಿಗ ಸಮುದಾಯ ಕೂಡ ವಿರೋಧ ಮರೆತು,ಅವರ ಕಾಲದಲ್ಲಾದ ಅಭಿವೃದ್ಧಿ ಕೆಲಸಗಳನ್ನು ಕಂಡು ಮಳವಳ್ಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಅವರ ಜೊತೆ ಕೈ ಜೋಡಿಸಿದೆ‌. ಒಕ್ಕಲಿಗ
ಸಮುದಾಯದ ವಿರೋಧಿ ಎನ್ನುವುದು ಕೇವಲ ಆರೋಪವಷ್ಟೇ ಎನ್ನುವ ಬಗ್ಗೆ ಒಕ್ಕಲಿಗರ ನಾಯಕರು ಹಾಗೂ ಸ್ಥಳೀಯ ಮುಖಂಡರು ತಮ್ಮ ಸಮುದಾಯದವರಿಗೆ ಮನವರಿಕೆ ಮಾಡಿಕೊಟ್ಟಿರುವುದು, ನರೇಂದ್ರಸ್ವಾಮಿ ಮೇಲಿನ ಕೋಪವನ್ನು ತಣ್ಣಗೆ ಮಾಡಿ, ಅವರೆಡೆಗೆ ಅಭಿಮಾನ ಮೂಡುವಂತೆ ಮಾಡಿದೆ.

ಇದರ ಜೊತೆಗೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿ ಅಲಂಕರಿಸಬಹುದೆನ್ನುವ ಕಾರಣಕ್ಕೆ ಒಕ್ಕಲಿಗ ಮತ್ತು ಕುರುಬ ಸಮುದಾಯ ಪಿಎಂಎನ್ ಬೆಂಬಲಕ್ಕೆ ನಿಂತಿದೆ. ಈಗಾಗಲೇ ನರೇಂದ್ರ ಸ್ವಾಮಿ ಪರ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಸಭೆ ನಡೆಸಿ ಪ್ರಚಾರ ನಡೆಸಿದ್ದಾರೆ. ಡಿಕೆಶಿ ಅವರು ಒಕ್ಕಲಿಗ ಸಮುದಾಯದ ನನಗೆ ಉನ್ನತ ಹುದ್ದೆ ಸಿಗಲಿದ್ದು,ಅದಕ್ಕಾಗಿ ನರೇಂದ್ರ ಸ್ವಾಮಿ ಗೆಲ್ಲಿಸುವಂತೆ ಮನವಿ ಮಾಡಿರುವುದು ಅವರಿಗೆ ಬಲ ತುಂಬಿದೆ.

ಹಾಗೆಯೇ ಕಳೆದ ಮೂರು ದಿನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನರೇಂದ್ರ ಸ್ವಾಮಿ ಪರ ಪ್ರಚಾರ ನಡೆಸಿ,ಮಳವಳ್ಳಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.ಈ ಬಾರಿ ಕಾಂಗ್ರೆಸ್ ಸರ್ಕಾರ ಬರಲಿದ್ದು,ಮಳವಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಸಲು ನರೇಂದ್ರ ಸ್ವಾಮಿ ಅವರನ್ನು ಈ ಬಾರಿ ಭಾರೀ ಮತಗಳ ಅಂತರದಿಂದ ಗೆಲ್ಲಿಸುವಂತೆ ಕರೆ ನೀಡಿದ್ದಾರೆ.
ಪ್ರಮುಖವಾಗಿ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕಾಂಗ್ರೆಸ್ ಪಕ್ಷದ ಪರ ನಿಂತಿದ್ದಾರೆ. ದಳಪತಿಗಳ ವಿರುದ್ಧ ಅಸಮಾಧಾನ ಗೊಂಡಿರುವ ಅವರು ಸಿದ್ದರಾಮಯ್ಯ ಅವರ ಸಭೆಯಲ್ಲಿ ಬಹಿರಂಗವಾಗಿಯೇ ಜೆಡಿಎಸ್ ಶಾಸಕ ಅನ್ನದಾನಿ ವಿರುದ್ಧ ವಾಗ್ದಾಳಿ ನಡೆಸಿರುವುದು ನರೇಂದ್ರ ಸ್ವಾಮಿಗೆ ಪ್ಲಸ್ ಆಗಲಿದೆ.

ಅಂತೆಯೇ ದಲಿತ ಸಮುದಾಯದ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಪ್ರಚಾರ ನಡೆಸಿದ್ದಾರೆ.ಈ ಕಾರಣದಿಂದ ಕೈ ಬಲಪಡಿಸಲು ಪರಿಶಿಷ್ಟ ಜಾತಿಯ ಸಮುದಾಯ ಅವರೊಟ್ಟಿಗೆ ನಿಂತಿದೆ‌. ಮಲ್ಲಿಕಾರ್ಜುನ ಖರ್ಗೆಯವರ ಸಭೆಗೆ ನಿರೀಕ್ಷೆಗೂ ಮೀರಿ ಜನಸಾಗರ ಸೇರಿತ್ತು.ಕೋಮುವಾದಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ದೂರವಿಟ್ಟು ನರೇಂದ್ರ ಸ್ವಾಮಿ ಆಯ್ಕೆ ಮಾಡುವಂತೆ ಕರೆ ನೀಡಿರುವುದು ಪರಿಶಿಷ್ಟ ಜಾತಿಯ ಮತಗಳು ಕಾಂಗ್ರೆಸ್ ಪಕ್ಷದ ಪರವಾಗುವ ನಿರೀಕ್ಷೆ ಇದೆ.

ಮಳವಳ್ಳಿ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಗೆದ್ದು,ಹಲವು ಖಾತೆಗಳ ಸಚಿವರಾಗಿದ್ದ, ಬಿ.ಸೋಮಶೇಖರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವುದು,ಸ್ಥಳೀಯ ವಿವಿಧ ಪಕ್ಷಗಳ ನಾಯಕರು ಕಾಂಗ್ರೆಸ್ ಸೇರಿರುವುದು ನರೇಂದ್ರ ಸ್ವಾಮಿ ಕೈ ಬಲಪಡಿಸಿದೆ. ಲಿಂಗಾಯತ ಸಮುದಾಯದ ಪ್ರಭಾವಿ, ಪ್ರಥಮ ರಾಜ್ಯಸಭೆ ಸದಸ್ಯ ಎನ್ನುವ ಹೆಗ್ಗಳಿಕೆ ಹೊಂದಿರುವ ಬಿ.ಪಿ.ನಾಗರಾಜಮೂರ್ತಿ ಅವರ ಕುಟುಂಬ ಕಾಂಗ್ರೆಸ್ ಸೇರಿರುವುದು ವರದಾನವಾಗಿದೆ.

ಅನ್ನದಾನಿಗೆ ಎಚ್‌ಡಿಕೆ ಹೆಸರೇ ಆಸರೆ
ಜೆಡಿಎಸ್ ಅಭ್ಯರ್ಥಿ ಶಾಸಕ ಕೆ.ಅನ್ನದಾನಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರೇ ಆಸರೆಯಾಗಿದೆ. 2018 ರ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದ ಒಕ್ಕಲಿಗ ಸಮುದಾಯ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂಬ ಹಿನ್ನಲೆಯಲ್ಲಿ ಅನ್ನದಾನಿ ಗೆಲುವು ಕಾಣಲು ಸಾಧ್ಯವಾಗಿತ್ತು. ಎಚ್‌ಡಿಕೆ ಸಿಎಂ ಆಗಬೇಕೆನ್ನುವ ಅಲೆ ನಿರೀಕ್ಷೆಗೂ ಮೀರಿದ ಮತಗಳು ಜೆಡಿಎಸ್‌ಗೆ ಹರಿದು ಬರುವಂತೆ ಮಾಡಿದ್ದವು. ಕಳೆದ ಬಾರಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ಕೂಡ ನಡೆದು,ಅಂತಿಮವಾಗಿ ಬಿಜೆಪಿಯ ಸಾಂಪ್ರಾದಾಯಿಕ ಮತಗಳು ದಳದ ಪಾಲಾಗಿದ್ದವು. ಆದರೆ ಈ ಬಾರಿ ಅಂತಹ ಪೂರಕ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ‌.
ಮೈಷುಗರ್ ಕಾರ್ಖಾನೆ ಉಳಿವಿಗೆ ನಡೆಸಿದ ಪಾದಯಾತ್ರೆ ಸೇರಿದಂತೆ ಒಂದಷ್ಟು ಕೆಲಸಗಳು ಅನ್ನದಾನಿ ಅವರ ವರ್ಚಸ್ಸು ಹೆಚ್ಚಿಸಿತ್ತು. ಆದರೆ ಒಂದೂವರೆ ವರ್ಷ ಜೆಡಿಎಸ್ ಸರ್ಕಾರವಿದ್ದರೂ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ ಎನ್ನುವ ಕೊರಗು ಕ್ಷೇತ್ರದ ಜನರ ಬಾಯಲ್ಲಿ ಕೇಳಿಬರುತ್ತಿದೆ‌.593 ಕೋಟಿ ವೆಚ್ಚದ ಬಿ.ಜಿ.ಪುರ ಏತ ನೀರಾವರಿ ಐದು ವರ್ಷಗಳಾದರೂ ಕಾರ್ಯಾರಂಭ ಮಾಡದಿರುವುದು ಅನ್ನದಾನಿ ಅವರಿಗೆ ಹಿನ್ನಡೆ ತರಲಿದೆ.ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ ಎಂದು ಅವರ ಪಕ್ಷದ ನಾಯಕರೇ ಹೇಳುತ್ತಿದ್ದಾರೆ.

ಇದರೊಟ್ಟಿಗೆ ಪಕ್ಷ ಬಿಟ್ಟವರ ಪ್ರಮಾಣ ಹೆಚ್ಚಾಗಿರುವುದಕ್ಕೆ ಅನ್ನದಾನಿಯವರೇ ಕಾರಣ. ಅದರಲ್ಲಿಯೂ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಪ್ರಭಾವಿ ಮುಖಂಡರು ಪಕ್ಷದಿಂದ ಹೊರಬಂದು ಶಾಸಕರ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ. ಇದು ದಳಕ್ಕೆ ಗುಂಪು ಗುಂಪಾಗಿ ಬರುತ್ತಿದ್ದ ಮತಗಳು ವಿಭಜನೆಯಾಗುವಂತೆ ಮಾಡಿದೆ. ಇನ್ನು ಜೆಡಿಎಸ್ ಕಾರ್ಯಕರ್ತರು ವ್ಯವಸ್ಥಿತವಾಗಿ ಚುನಾವಣೆ ಮಾಡುತ್ತಿರುವುದು ಅನ್ನದಾನಿಗೆ ಪ್ಲಸ್ ಆಗಿದೆ. ಆದರೆ ಕಳೆದ ಚುನಾವಣೆಯಲ್ಲಿ ಅಕ್ಕಪಕ್ಕದ ಶಾಸಕರಿಂದ ಸಿಕ್ಕ ಬೆಂಬಲ ಈ ಬಾರಿ ಇದ್ದಂತೆ ಕಾಣುತ್ತಿಲ್ಲ.ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದು ಜೆಡಿಎಸ್‌ನ ಅಭ್ಯರ್ಥಿ ಅನ್ನದಾನಿ ಗೆಲ್ಲಿಸುವಂತೆ ಕರೆ ನೀಡಿದ್ದಾರೆ. ಜತೆಗೆ ಕಾಂಗ್ರೆಸ್‌ನಿಂದಲೂ ಹಲವು ಮುಖಂಡರು ದಳಕ್ಕೆ ಸೇರ್ಪಡೆಯಾಗಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.ಆಡಳಿತದಲ್ಲಿ ಸುಧಾರಣೆ ತರದಿರುವುದು,ಅಕ್ರಮಗಳಿಗೆ ಅವಕಾಶ ನೀಡಿದ್ದಾರೆ,ಅಟ್ರಾಸಿಟಿ ಕೇಸ್ ಹಾಕಿಸಿರುವುದು ಮೈನಸ್ ಪಾಯಿಂಟ್.

ಹಸ್ತ-ತೆನೆ ನಡುವೆ ಕಮಲ ಮಾಡುತ್ತಾ ಕಮಾಲ್?
ಮಳವಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಬಿ.ಸೋಮಶೇಖರ್ ಸಾಕಷ್ಟು ಪ್ರಯತ್ನ ನಡೆಸಿದ್ದರು.ಅದರೆ ಮಾಜಿ ಸಿಎಂ ಯಡಿಯೂರಪ್ಪ ಅವರ ಶಿಷ್ಯ ಮುನಿರಾಜು ತೀವ್ರ
ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. 2013 ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಕೆಜೆಪಿಯಿಂದ ಸ್ಪರ್ಧಿಸಿದ್ದ ಮುನಿರಾಜು 26,397 ಮತ ಪಡೆದಿದ್ದರು. ಆ ಚುನಾವಣೆಯಲ್ಲಿ ಪಿ.ಎಂ.ನರೇಂದ್ರ ಸ್ವಾಮಿ 538 ಮತಗಳ ಸಣ್ಣ ಅಂತರದಲ್ಲಿ ಜಯ ಗಳಿಸಿದ್ದರು.
ಈ ಬಾರಿಯ ಅಖಾಡದಲ್ಲಿ ಅದೇ ಮುನಿರಾಜು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದು, ಸಂಚಲನ ಸೃಷ್ಟಿಸಿದ್ದಾರೆ. ಮಳವಳ್ಳಿಯಲ್ಲಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ಅವರು ಜೆಡಿಎಸ್, ಕಾಂಗ್ರೆಸ್‌ಗೆ ಪೈಪೋಟಿ ನೀಡುವ ಮಟ್ಟಿಗೆ ವಾತಾವರಣವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಮುನಿರಾಜು ಹೆಸರು ಸಾಕಷ್ಟು ಸದ್ದು ಮಾಡುತ್ತಿದೆ‌. ಅವರ ಸ್ಪರ್ಧೆ ಕಳೆದ ಬಾರಿ ನರೇಂದ್ರ ಸ್ವಾಮಿಗೆ ವರದಾನವಾಗಿತ್ತು.ಈ ಬಾರಿಯೂ ಅದೇ ರೀತಿ ಪಿಎಂಎನ್ ಅವರಿಗೆ ವರದಾನವಾಗಲಿದೆ‌ ಎಂಬ ಸಾಧ್ಯತೆ ಕೂಡ ಜನರಿಂದ ವ್ಯಕ್ತವಾಗುತ್ತಿದೆ‌.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳು ನನಗೆ ಮತ ತಂದು ಕೊಡಲಿದೆ ಎಂದು ಮುನಿರಾಜು ನಂಬಿದ್ದಾರೆ. ಇನ್ನು ಬಿಜೆಪಿ ಸಾಂಪ್ರಾದಾಯಿಕ ಮತ ಹಾಗೂ ಜೆಡಿಎಸ್, ಕಾಂಗ್ರೆಸ್‌ನ ಅತೃಪ್ತ ಮತಗಳು ನನಗೆ ಸಿಗಲಿದೆ ಎಂದುಕೊಂಡಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಅವರು, ಹಲವು ವರ್ಷದಿಂದ ಮಳವಳ್ಳಿಯಲ್ಲಿಯೇ ಇದ್ದಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಬಹುದಿತ್ತೆನ್ನುವ ಮಾತುಗಳೂ ಕೇಳಿ ಬರುತ್ತಿದೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!