Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತರಿಗೆ ಅನ್ಯಾಯಗುವುದನ್ನು ಸಹಿಸುವುದಿಲ್ಲ: ಡಾ.ಕುಮಾರ

ನಾನೂ ಕೂಡ ರೈತನ ಮಗನಾಗಿದ್ದು, ಹೇಮಾವತಿ ನಾಲೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಭಾವುಕರಾದ ಘಟನೆ ಇಂದು ನಡೆಯಿತು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಾಗಮಂಗಲ, ಕೆ.ಆರ್.ಪೇಟೆ ಮತ್ತು ಮಳವಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಾಲೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಶುಕ್ರವಾರ ಕರೆದಿದ್ದ ನೇರ ಖರೀದಿ ಸಭೆಯಲ್ಲಿ ಅವರು ಮಾತನಾಡಿದರು.

ಹೇಮಾವತಿ ನಾಲೆಗಾಗಿ ನೇರ ಖರೀದಿಯಲ್ಲಿ ಭೂಮಿ ಕಳೆದುಕೊಂಡಿದ್ದ ನಾಗಮಂಗಲ ತಾಲ್ಲೂಕಿನ‌ ಬೆಳ್ಳೂರು ಹೋಬಳಿ ಚಿಕ್ಕ ಜಟಕದ ಕಿರಣ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಪ್ರತಿ ಗುಂಟೆ ಜಮೀನಿಗೆ 17,500 ಸಾವಿರದಂತೆ ಮಾರಾಟವಾಗಿದೆ. ನೀವು ಕೇವಲ 3 ಸಾವಿರದಂತೆ ದರ ನೀಡುತ್ತಿದ್ದೀರಿ, ಇದರಿಂದ ನಮಗೆ ತೀವ್ರ ಅನ್ಯಾಯವಾಗುತ್ತಿದೆ. ನಮ್ಮ ಜಮೀನಿನ ಮಧ್ಯಭಾಗದಲ್ಲಿಯೇ ನಾಲೆ ಹೋಗಿದೆ. ನಾವು ಏನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.

ಹಾಲತಿ ಗ್ರಾಮದ ತಿಮ್ಮಪ್ಪ, ಯಗಟಹಳ್ಳಿಯ ಮಂಜು ಅವರುಗಳು ನೀವು ನೊಂದಣಿ ಇಲಾಖೆ ದರದಂತೆ ಪರಿಹಾರ ನೀಡಿದರೆ ರೈತರಿಗೆ ಮೋಸವಾಗುತ್ತದೆ. ನಮಗೆ ಉತ್ತಮ ದರ ನೀಡಿ ನಮ್ಮ ಅಕ್ಕ ಪಕ್ಕದ ಜಮೀನುಗಳು ಗುಂಟೆಗೆ 1 ಲಕ್ಷದಂತೆ ಮಾರಾಟವಾಗಿವೆ ಎಂದು ಬೇಡಿಕೆ ಇಟ್ಟರು. ಬಿಂಡೇನಹಳ್ಳಿಯ ರೈತ ಪುಟ್ಟಸ್ವಾಮಿ ಮತ್ತಿತರರು ನೀವು ಗುಂಟೆಗೆ 8 ಸಾವಿರ ನೀಡುತ್ತೀರಿ ಎನ್ನುತ್ತೀರಿ. ಆ ಹಣ ಪಡೆದು ನಾವೇನು ಮಾಡೋದು ಎಂದು ಬೇಸರದಿಂದ ನುಡಿದರು.

ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿಯ ಬಿ.ಸಿ.ಮೋಹನ್ ಕುಮಾರ್ ಮಾತನಾಡಿ, ನೀವು ನೊಂದಣಿ ಇಲಾಖೆಯ ಮಾನದಂಡದಂತೆ ದರ ನೀಡಿದರೆ ರೈತರಿಗೆ ಅನ್ಯಾಯವಾಗುತ್ತದೆ. ಈಗಾಗಲೇ ರೈತರು ನಾಲೆಗೆ ಭೂಮಿ ಕಳೆದುಕೊಂಡು 25 ರಿಂದ 40 ವರ್ಷಗಳಾಗಿವೆ. ಈಗ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಯಂತೆ ಪರಿಹಾರ ನೀಡಿದರೆ ಹೇಗೆ? ಜಿಲ್ಲಾಧಿಕಾರಿಗಳು ಮುಕ್ತ ಮನಸ್ಸಿನಿಂದ ಯೋಚಿಸಿ ರೈತರಿಗೆ ಉತ್ತಮ ದರ ನೀಡಲಿ ಎಂದು ಮನವಿ ಮಾಡಿದರು.

ರೈತರ ಈ ಮಾತುಗಳನ್ನು ಕೇಳಿದ ಜಿಲ್ಲಾಧಿಕಾರಿ ಕುಮಾರ ಅವರು, ನೀರಾವರಿ ಇಲಾಖೆ ನಮಗೆ ಪ್ರಸ್ತಾವನೆ ಕಳಿಸಿರುವುದು 2015ರಲ್ಲಿ.ಆದರೆ ನಾಲೆ 2008ರಲ್ಲಿಯೇ ಮುಕ್ತಾಯವಾಗಿದೆ. ನಾವು 2015ರ ನೊಂದಣಿ ಇಲಾಖೆ ದರಪಟ್ಟಿಯಂತೆ ನೀಡಿದರೆ ಅತ್ಯಂತ ಕನಿಷ್ಟ ದರ ರೈತರಿಗೆ ನೀಡಿದಂತಾಗುತ್ತದೆ. ಇಲ್ಲಿ ವ್ಯವಸ್ಥೆಯ ವೈಫಲ್ಯದಿಂದ ಏಳೆಂಟು ವರ್ಷಗಳಷ್ಟು ಕಾಲ ರೈತರಿಗೆ ಪರಿಹಾರ ನೀಡುವಲ್ಲಿ ತಡವಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸು ತ್ತೇನೆ. ಇಂದು ನಡೆದ ಸಭೆಯಲ್ಲಿ ತೆಗೆದುಕೊಂಡ ದರ ನಿಗದಿಯನ್ನು ರದ್ದುಪಡಿಸಿ, 2020 ರಿಂದ 2023ರವರೆಗೆ ನೊಂದಣಿ ಇಲಾಖೆಯಲ್ಲಿ ಯಾವ ಮೊತ್ತಕ್ಕೆ ಜಮೀನುಗಳು ಮಾರಾಟವಾಗಿದೆ ಎಂಬ ದರಪಟ್ಟಿ ತರಿಸಿ ಅದನ್ನು ಭೂಸ್ವಾಧೀನ ಕಾಯ್ದೆಯಂತೆ ಮಾರಾಟವಾದ ದರಕ್ಕೆ ನಾಲ್ಕು ಪಟ್ಟು ಸೇರಿಸಿ ಪರಿಹಾರ ನೀಡುತ್ತೇವೆ ಎಂದರು. ಇದಕ್ಕೆ ರೈತರು ಸಮ್ಮತಿ ವ್ಯಕ್ತಪಡಿಸಿದರು.

ಈ ವೇಳೆ ಜಿ.ಪಂ. ಸಿಇಒ, ಕಾವೇರಿ ನೀರಾವರಿ ನಿಗಮದ ಹೇಮಾವತಿ ಎಡದಂಡೆ ನಾಲೆ ನಾಗಮಂಗಲದ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಾದ ಸಿ.ಎನ್. ಶಿಲ್ಪ, ಯಡಿಯೂರು ವಿಭಾಗದ ಎಸ್.ಟಿ ಶ್ರೀನಿವಾಸ್ ಎಇಇ ಗಳಾದ ಜೆ.ಬಿ.ರುದ್ರೇಶ್, ಎಸ್.ಜೆ. ಸುಧಾ ಜೈನ್, ರಾಜೇಗೌಡ, ಎಡಿಎಲ್ ಆರ್ ಪ್ರಮೋದ್, ಭೂಸ್ವಾಧೀನ ಇಲಾಖೆಯ ಪಾರ್ವತಿ, ಹರದನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ರವಿ, ಹೇಮಾವತಿ ನೀರು ಬಳಕೆದಾರರ ಸಂಘದ ನಿರ್ದೇಶಕರುಗಳಾದ ಯಗಟಹಳ್ಳಿ ರಾಜಣ್ಣ, ಕೃಷ್ಣಾಪುರದ ಬೋರೇಗೌಡ, ದೇವಲಾಪುರ ಹೋಬಳಿಯ ದೇವಲಾಪುರ, ಬಿಂಡೇನಹಳ್ಳಿ, ಹಿದುವ, ದೇವರಮಲ್ಲನಾಯಕನಹಳ್ಳಿ, ದೊಡ್ಡಜಕ್ಕನಹಳ್ಳಿ, ಬೆಳ್ಳೂರು ಹೋಬಳಿಯ ಚಿಕ್ಕಜಟಕ, ಕೃಷ್ಣಾಪುರ, ಚಂದನಹಳ್ಳಿ, ಕಸಬಾ ಹೋಬಳಿಯ ವೀರಸಂದ್ರ, ಹಾಲತಿ, ಯಗಟಹಳ್ಳಿ ಗ್ರಾಮಗಳ ರೈತರು ಮಳವಳ್ಳಿ ತಾಲ್ಲೂಕಿನ ಮುಟ್ಟನಹಳ್ಳಿ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!