Thursday, September 19, 2024

ಪ್ರಾಯೋಗಿಕ ಆವೃತ್ತಿ

ಅರ್ಥಪೂರ್ಣ ಬದುಕು ನಡೆಸಿ, ಹೆಜ್ಜೆ ಗುರುತು ಮೂಡಿಸಬೇಕು: ಡಾ.ಮಹೇಶ ಜೋಷಿ

ಲೋಕದ ಜಡವಸ್ತುಗಳು ಉಪಯೋಗಕ್ಕೆ ಬರುವಾಗ ಮನುಷ್ಯ ಸಮಾಜದ ಉಪಯೋಗಕ್ಕೆ ನಿಲುಕಬೇಕು. ಕಾಲ ವ್ಯರ್ಥ ಮಾಡದೆ ಅರ್ಥಪೂರ್ಣ ಬದುಕು ನಡೆಸಿ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಅಭಿಪ್ರಾಯಪಟ್ಟರು.

ಡಾ.ಎಸ್.ಶ್ರೀನಿವಾಸ್ ಶೆಟ್ಟಿ ಅಭಿನಂದನ ಸಮಿತಿ ವತಿಯಿಂದ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಶ್ರೀನಿವಾಸ ಶೆಟ್ಟಿ ದಂಪತಿಗಳಿಗೆ ಅಭಿನಂದನೆ ಹಾಗೂ ಸುಮನಸ ಅಭಿನಂದನಾ ಗ್ರಂಥ ಸಮರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟುವಾಗ ಉಸಿರು ಇರುತ್ತದೆ ಹೋಗುವಾಗ ಹೆಸರು ಮಾಡಿ ಹೋಗಬೇಕು. ಕ್ರಿಯಾಶೀಲ ವ್ಯಕ್ತಿಗಳು ಕೆಲಸ ಮಾಡಲು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ, ಕಲೆ ಸಾಹಿತ್ಯ ಅನೇಕ ರಂಗಗಳಿವೆ.ಕಾಯಕವೇ ಕೈಲಾಸ ಎಂದು ಕೆಲಸ ಮಾಡುವವರೂ ಇದ್ದಾರೆ.ಶ್ರೀನಿವಾಸ ಶೆಟ್ಟರು ಅಂತಹವರಲ್ಲಿ ಒಬ್ಬರು. ಎಲ್ಲರಿಂದಲೂ ಒಂದು ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಯಾರು ಆಸಕ್ತಿ,ಉತ್ಸಾಹದಿಂದ ಕೆಲಸ ಮಾಡುತ್ತಾರೋ ಅವರು ಬದಲಾವಣೆ ತರುತ್ತಾರೆ. ಹೊಸದಾರಿ ಹುಡುಕಿಕೊಳ್ಳುತ್ತಾರೆ. ಅವರು ವಿಶೇಷ ವ್ಯಕ್ತಿಗಳು.ಅಂತಹ ವಿಶೇಷ ವ್ಯಕ್ತಿ ಶ್ರೀನಿವಾಸಶೆಟ್ಟಿ ಎಂದು ಬಣ್ಣಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಒಬ್ಬ ವ್ಯಕ್ತಿಗೆ ಮೂರು ರೀತಿಯ ಜೀವನ ಇರುತ್ತದೆ. ಒಂದು ವೈಯಕ್ತಿಕ, ಸಾರ್ವಜನಿಕ ಹಾಗೂ ಸಾಮಾಜಿಕ. ವೈಯಕ್ತಿಕವಾಗಿ ಸಾಧನೆ ಮಾಡಿರುವ ಶೆಟ್ಟರು ಸಾಮಾಜಿಕವಾಗಿ ಹಾಗೂ ಸಾರ್ವಜನಿಕವಾಗಿ ನಿವೃತ್ತಿಯ ನಂತರ ಹೆಚ್ಚು ಕೆಲಸಗಳನ್ನು ಮಾಡಬೇಕು. ನಿಮ್ಮಲ್ಲಿರುವ ಪ್ರತಿಭೆಯ ಮೂಲಕ ಕನ್ನಡಕ್ಕಾಗಿ ಕೆಲಸ ಮಾಡಿ ಎಂದರು.

ನಿಜವಾದ ಶ್ರೀಮಂತರು ಎಂದರೆ ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಾಗದ್ದನ್ನು ಹೊಂದಿರುವವರು. ಯುವಜನರು ದೇಶದ ಬಗ್ಗೆ ಕಳಕಳಿ ಹೊಂದಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು
ಪತ್ರಕರ್ತ ಡಿ.ಎನ್.ಶ್ರೀಪಾದು ಅಭಿನಂದನಾ ನುಡಿಗಳನ್ನಾಡಿದರು.

ಸಮಾರಂಭದಲ್ಲಿ ಗಣ್ಯರು ಡಾ.ಎಸ್ ಶ್ರೀನಿವಾಸ ಶೆಟ್ಟಿ, ಅನಿತಾ ಶೆಟ್ಟಿ ದಂಪತಿಗಳನ್ನು ಅಭಿನಂದಿಸಲಾಯಿತು.  ಡಾ.ಶ್ರೀನಿವಾಸ್ ಶೆಟ್ಟಿ ಅಭಿನಂದನಾ ಗ್ರಂಥ ಸುಮನಸವನ್ನು ಬಿಡುಗಡೆ ಮಾಡಲಾಯಿತು. ಅಭಿನಂದಿತರಾದ ಶ್ರೀನಿವಾಸಶೆಟ್ಟರು ಕೃತಜ್ಞತೆ ಸಲ್ಲಿಸಿದರು. ಸಂಸ್ಕೃತ ವಿವಿ ನಿವೃತ್ತ ಉಪಕುಲಪತಿ ಡಾ.ಪದ್ಮಾಶೇಖರ್ ಅವರು, ಸುಮನಸ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ, ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮೈಸೂರು ವಿಭಾಗದ ಎಲ್‌ಐಸಿ ಹಿರಿಯ ವಿಭಾಗಾಧಿಕಾರಿ ಜಿ. ಸತ್ಯನಾರಾಯಣ ಶಾಸ್ತ್ರಿ., ಎಲ್‌ಐಸಿ ಸೇಲ್ಸ್ ಟ್ರೈನಿಂಗ್ ಸೆಂಟರ್‌ನ ಪ್ರಾಚಾರ್ಯ ವೆಂಕಟರಮಣ ಶಿರೂರು, ಧಾರವಾಡ ಡಾ.ಡಿ.ಜಿ.ಶೆಟ್ಟಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಹೆಚ್.ಎಸ್.ಮುದ್ದೇಗೌಡ, ಗೌರವಾಧ್ಯಕ್ಷ ಬಿ. ಟಿ.ಜಯರಾಮ್, ಶ್ರೀನಿವಾಸ ಶೆಟ್ಟರ ಪತ್ನಿ ಅನಿತಾಶೆಟ್ಟಿ, ತಾಯಿ ರತ್ನಮ್ಮ ಶೆಟ್ಟಿ ಸೇರಿದಂತೆ ಉಪಸ್ಥಿತರಿದ್ದರು.
ಮಂಡ್ಯದ ಸಂಗೀತ ಕಲಾವಿದರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!