Wednesday, October 23, 2024

ಪ್ರಾಯೋಗಿಕ ಆವೃತ್ತಿ

ಅಗ್ನಿಪಥ್ ಯೋಜನೆ ಕೈಬಿಡಿ-ಕನ್ಹಯ್ಯಾಲಾಲ್ ಹಂತಕರಿಗೆ ಉಗ್ರ ಶಿಕ್ಷೆ ನೀಡಲು ಒತ್ತಾಯ

ಭಾರತದ ಹೆಮ್ಮೆಯ ಸೇನೆಯ ಘನತೆಯನ್ನು ಮಣ್ಣುಪಾಲು ಮಾಡುವ ಅಗ್ನಿಪಥ್ ಯೋಜನೆಯನ್ನು ಕೈಬಿಡಬೇಕು ಹಾಗೂ ರಾಜಾಸ್ತಾನದ ಉದಯಪುರದಲ್ಲಿ ಕನ್ಹಯ್ಯಾಲಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದವರಿಗೆ ತ್ವರಿತವಾಗಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಸಿಪಿಐಎಂ ಕಾರ್ಯಕರ್ತರು ಜಮಾವಣೆಗೊಂಡು ಕನ್ಹಯ್ಯಲಾಲ್ ಹತ್ಯೆ ಖಂಡಿಸಿದರು. ದೇಶದಲ್ಲಿ ಭಯ ಮತ್ತು ದ್ವೇಷಮಯ ವಾತಾವರಣ ಸೃಷ್ಟಿಯಾಗಲು ಹಿಂದೂ ಕೋಮುವಾದಿಗಳು ಮತ್ತು ಮುಸ್ಲಿಂ ಮೂಲಭೂತವಾದಿಗಳು ಕಾರಣರಾಗಿದ್ದಾರೆ. ಈ ಎರಡೂ ರೀತಿಯ ವಿಕೃತಿಗಳನ್ನು ದೇಶದಿಂದ ಮೂಲೋತ್ಥಾಟನೆ ಮಾಡದೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ಬಣ್ಣದ ಕೋಮುವಾದಿ ಶಕ್ತಿಗಳನ್ನು ಸದೆ ಬಡಿಯಬೇಕು. ಕನ್ನಯ್ಯಾಲಾಲ್ ಹತ್ಯೆ ಆರೋಪಿಗಳಿಗೆ ಉಗ್ರವಾದ ಶಿಕ್ಷೆ ನೀಡುವ ಮೂಲಕ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಶಕ್ತಿಗಳಿಗೆ ಪ್ರಖರ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕೇವಲ ನಿವೃತ್ತಿ ವೇತನ ಉಳಿಸಲು ದೇಶದ ರಕ್ಷಣೆಯನ್ನು ಬಲಿಗೊಟ್ಟು ಅಗ್ನಿಪಥ್ ಯೋಜನೆ ರೂಪಿಸಿದೆ. ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿ ನಡೆದಿಲ್ಲ. ಖಾಯಂ ಸೈನಿಕರ ನೇಮಕಾತಿ ಬದಲು ನಾಲ್ಕು ವರ್ಷಗಳ ಸೇವೆಯ ನಂತರ ಆ ಸೈನಿಕರಿಗೆ ಯಾವುದೇ ಜೀವನ ಭದ್ರತೆ ಇಲ್ಲದಿರುವುದು ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ಕೂಡಲೇ “ಅಗ್ನಿಪಥ್” ಎಂಬ ಗುತ್ತಿಗೆ ಪದ್ದತಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಇತಿಹಾಸವನ್ನು ತಿರುಚಿ, ನಾಡಿನ ಮಹಾನ್ ದಾರ್ಶನಿಕರು, ಕವಿಗಳಿಗೆ ಅವಮಾನ ಮಾಡಿ, ಅಂಬೇಡ್ಕರ್, ನಾರಾಯಣಗುರು ಅವರನ್ನು ಹೀಗಳೆದು, ವೈದಿಕ ವಿಷವನ್ನು ಮಕ್ಕಳ ತಲೆಗೆ ತುಂಬುವ ವಿಕೃತ ಪಠ್ಯಪುಸ್ತಕ ವಿತರಣೆಯನ್ನು ಕೂಡಲೇ ನಿಲ್ಲಿಸಬೇಕು.ಹಿಂದಿನ ಪುಸ್ತಕಗಳನ್ನೇ ವಿತರಿಸಬೇಕು. ವಿಕೃತ ಮನಸ್ಸಿನ ರೋಹಿತ್ ಚಕ್ರತೀರ್ಥನನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ, ಪತ್ರಕರ್ತೆ, ಹೆಸರಾಂತ ವಕೀಲೆ ತೀಸ್ತಾ ಸೆಟಲ್ವಾಡ್, ಗುಜರಾತ್ ಹತ್ಯಾಕಾಂಡದ ಸಂಚುಕೋರರನ್ನು ದಾಖಲೆ ಸಮೇತ ಬಯಲಿಗೆಳೆದ ಮಾಜಿ ಪೊಲೀಸ್ ಅಧಿಕಾರಿ ಶ್ರೀಕುಮಾರ್ ಮತ್ತು ಮಾಧ್ಯಮದ ಸುಳ್ಳುಗಳನ್ನು ಬಯಲಿಗೆಳೆದು ಸತ್ಯದ ಅನಾವರಣ ಮಾಡುತ್ತಿದ್ದ ಆಲ್ಟ್‌ನ್ಯೂಸ್ ಸಹ ಸಂಪಾದಕ, ಪತ್ರಕರ್ತ ಮಹಮ್ಮದ್ ಜುಬೇರ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದರು.

CPIM ಪಕ್ಷದ ಕೇರಳ ರಾಜ್ಯ ಸಮಿತಿ ಕಚೇರಿ, ಎಕೆಜಿ ಭವನದ ಮೇಲೆ ನಿನ್ನೆ ರಾತ್ರಿ ನಡೆಸಿರುವ ಬಾಂಬ್ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಇಂತಹ ದಾಳಿಗಳ ಮೂಲಕ CPIM ಪಕ್ಷವನ್ನು ಹೆದರಿಸಲು ಮತ್ತು ಎದುರಿಸಲು ಸಾಧ್ಯವಿಲ್ಲ. ಇದು ಜನ ಬೆಂಬಲ ಇಲ್ಲದ ಹೇಡಿಗಳ ಕೃತ್ಯ, ಇಂತಹ ಹೇಡಿತನವನ್ನು ಬಿಟ್ಟು CPIM ಪಕ್ಷವನ್ನು ಪ್ರೌಢಿಮೆಯಿಂದ ಎದುರಿಸಿ ಎಂದು ಎಚ್ಚರಿಸಿದರು.

ಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್ ಕೃಷ್ಣೇಗೌಡ, ಮುಖಂಡರಾದ ಎಂ.ಪುಟ್ಟಮಾದು, ಸಿ.ಕುಮಾರಿ, ಟಿ ಯಶವಂತ, ಶೋಭಾ, ಹನುಮೇಶ್ ಬಿ. ಸುರೇಂದ್ರ ಮುಂತಾದವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!