ರಾಜ್ಯ ಸರ್ಕಾರ ಘೋಷಿಸಿರುವ ಬರ ಪರಿಹಾರದಲ್ಲಿ ತಾರತಮ್ಯ ಉಂಟಾಗಿದ್ದು, ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಎಲ್ಲ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕು ರೈತಸಂಘ ಹಾಗೂ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಶ್ರೀರಂಗಪಟ್ಟಣ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.
ಕನ್ನಂಬಾಡಿ ಅಣೆಕಟ್ಟೆಯಲ್ಲಿ ಶೇಖರಣೆ ಆಗಿದ್ದ ನೀರನ್ನು ನೆರೆಯ ತಮಿಳುನಾಡಿಗೆ ಹರಿಸಿ ಜಲಾನಯನ ಪ್ರದೇಶದ ರೈತರನ್ನು ವಂಚಿಸಲಾಗಿದೆ, ಪ್ರಸ್ತುತ ನೀಡುತ್ತಿರುವ ಬರ ಪರಿಹಾರ ನಿಧಿಯಲ್ಲೂ ತಾರತಮ್ಯವೆಸಗುತ್ತಿರುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 16 ರಿಂದ 17 ಸಾವಿರ ಮಂದಿ ಖಾತೆದಾರರಿದ್ದು, ಈ ಪೈಕಿ ಕೇವಲ 409 ಮಂದಿ ರೈತರ ಖಾತೆಗೆ ಪರಿಹಾರ ನೀಡಿರುವುದು ರೈತ ವಿರೋಧಿ ತೀರ್ಮಾನವಲ್ಲವೇ ಎಂದು ಅತೃಪ್ತಿ ಹೊರ ಹಾಕಿದರು.
ಕೂಡಲೇ ರಾಜ್ಯ ಸರ್ಕಾರದ ಕಂದಾಯ ಹಾಗೂ ಕೃಷಿ ಸಚಿವರು ಸಂಕಷ್ಟದಲ್ಲಿರುವ ಪ್ರತಿ ರೈತರಿಗೆ ಸೂಕ್ತ ಬರ ಪರಿಹಾರ ನೀಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬೇಕು, ಕನಿಷ್ಠ ಎಕರೆಗೆ 10 ಸಾವಿರ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಪರಶುರಾಮ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ತಾಲ್ಲೂಕು ರೈತಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ರಮೇಶ್, ಪಾಂಡು, ಜಯರಾಮು, ಕರವೇ ಮುಖಂಡ ಚಂದಗಾಲು ಶಂಕರ್, ದಸಂಸ ಮುಖಂಡ ರವಿಚಂದ್ರ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.




