ರಾಜ್ಯ ಬಿಜೆಪಿ ಸರ್ಕಾರ ರೋಹಿತ ಚಕ್ರತೀರ್ಥ ಎಂಬ ವಿಕೃತನ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ಮಹನೀಯರ ಸಾಧನೆ ತಿರುಚಿ ಅವಮಾನ ಮಾಡಿದ್ದು,ಪಠ್ಯ ಪುಸ್ತಕ ಹಿಂಪಡೆದು ಹಿಂದಿನ ಪಠ್ಯಪುಸ್ತಕ ಮುಂದುವರೆಸಬೇಕೆಂದು ದಸಂಸ ಕಾರ್ಯಕರ್ತರು ಆಗ್ರಹಿಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯಪುಸ್ತಕದಲ್ಲಿ ಒಂದರ ಮೇಲೊಂದರಂತೆ ಸಾಕಷ್ಟು ಮಾಹಿತಿ ತಿರುಚಿದೆ. ಪ್ರಬುದ್ಧ ಭಾರತ ಮತ್ತು ಕರ್ನಾಟಕ ಕಟ್ಟಲು ಶ್ರಮಿಸಿದ,ಸಾಮಾಜಿಕ ನ್ಯಾಯದ ಸಮಾಜಕ್ಕಾಗಿ ಶ್ರಮಿಸಿದ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್,ಅಣ್ಣ ಬಸವಣ್ಣ,ರಾಷ್ಟಕವಿ ಕುವೆಂಪು, ಮಹಾತ್ಮ ಗೌತಮಬುದ್ಧ, ಮಹಾರಾಜರು, ಸಮಾಜ ಸುಧಾರಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜಗುರು, ಸುರಪುರದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು.
ಪಠ್ಯ ಪರಿಶೀಲನಾ ಸಮಿತಿಯು ಮಕ್ಕಳಿಗೆ ವೈಚಾರಿಕ ವಿಚಾರಗಳನ್ನು ತಿಳಿಸಬೇಕು.ಆದರೆ ರೋಹಿತ ಚಕ್ರತೀರ್ಥರವರು ಮನುವಾದಿಗಳಿಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಇದು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ, ಪಠ್ಯದಲ್ಲಿ ಆಗಿರುವ ಲೋಪವನ್ನು ಪಡಿಸಬೇಕು. ರೋಹಿತ ಚಕ್ರತೀರ್ಥ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಪದವನ್ನು ಕಿತ್ತುಹಾಕಲಾಗಿದೆ.ಅವರ ಜನ್ಮ ದಿನಾಂಕ,ಜನ್ಮಸ್ಥಳ,ತಂದೆ ತಾಯಿ ಹೆಸರು ಕೈಬಿಡಲಾಗಿದೆ.ಅಂಬೇಡ್ಕರ್ ಬಗ್ಗೆ ವಿಷಕಾರಿರುವ ಬಿಜೆಪಿ ನೇತೃತ್ವದ ಸರ್ಕಾರ ಶಾಲಾ ಪಠ್ಯಪುಸ್ತಕವನ್ನು ಶಾಲೆಗಳಿಗೆ ತಲುಪಿಸಿರುವುದು ಖಂಡನಾರ್ಹ. ಅಂಬೇಡ್ಕರವರ ವಿಚಾರವನ್ನೇ ತಿರುಚಿರುವ ಸುಳ್ಳಗಳೇ ತುಂಬಿರುವ ಈ ಪಠ್ಯಪುಸ್ತಕಗಳು ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಎಂ.ವಿ. ಕೃಷ್ಣ, ಮುಖಂಡರಾದ ಪವನ್ ಕುಮಾರ್, ಯತೀಶ್, ಶಿವಲಿಂಗಯ್ಯ, ಕೃಷ್ಣಪ್ಪ, ಮಹದೇವಸ್ವಾಮಿ, ಚುಂಚಯ್ಯ,ಅಪ್ಪಾಜಿ ಪ್ರತಿಭಟನೆಯಲ್ಲಿದ್ದರು.