Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರ| 3 ತಿಂಗಳಲ್ಲಿ 20 ಸಾವಿರ ಆಸ್ತಿಗಳ ಇ-ಖಾತೆ – ರವಿಕುಮಾರ್

ಹಲವು ನಾಗರೀಕರ ಬಹುದಿನದ ಬೇಡಿಕೆಯಾದ ಇ- ಖಾತಾ ವಿತರಿಸುವ ಯೋಜನೆಯನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ ಹಲವು ನಾಗರೀಕರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ನಗರ ವ್ಯಾಪ್ತಿಯ ನಾಗರೀಕರು ಮುಂದಾಗಬೇಕೆಂದು ಶಾಸಕ ಪಿ.ರವಿಕುಮಾರ್ ಮನವಿ ಮಾಡಿದರು.

ಮಂಡ್ಯ ನಗರಸಭೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಮಂಡ್ಯ ನಗರಸಭೆ ವ್ಯಾಪ್ತಿಯ ಸುಮಾರು 20 ಸಾವಿರ ಆಸ್ತಿ ಮಾಲೀಕರಿಗೆ ಇ- ಖಾತಾ ವಿತರಿಸುವ ಅಭಿಯಾನ ಸಹಕಾರಿಯಾಗಲಿದ್ದು, ಇದನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ನಗರದ ನಾಗರೀಕರು ಹಾಗೂ ಜನಪ್ರತಿನಿಧಿಗಳ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

4 ವಿಭಾಗಗಳಲ್ಲಿ ಅರ್ಜಿ ಸ್ವೀಕೃತಿ
ನಗರ ವ್ಯಾಪ್ತಿ ನಾಗರೀಕರ ಕಂದಾಯ ಅಥವಾ ಇತರೆ ಖಾಸಗಿ ಆಸ್ತಿಗಳಲ್ಲಿ ನಿರ್ಮಾಣಗೊಂಡಿರುವ ವಸತಿ ಅಥವಾ ಇತರೆ ಕಟ್ಟಡಗಳು ಮತ್ತು ನಿವೇಶನಗಳಿಗೆ ಮುಂದಿನ 3 ತಿಂಗಳೊಳಗೆ ಇ-ಖಾತಾ ವಿತರಿಸಲು ಸಮರೋಪಾದಿ ಕಾರ್ಯ ನಿರ್ವಹಣೆಗೆ ನಗರಾಡಳಿತ ಸಜ್ಜಾಗಿದ್ದು, ನಗರ ವ್ಯಾಪ್ತಿಯ 35 ವಾರ್ಡ್ ಗಳ ಪೈಕಿ ತಲಾ 8 ವಾರ್ಡ್ ಗಳಂತೆ 4 ವಿಭಾಗಗಳ ಮೂಲಕ ಅರ್ಜಿ ಸ್ವೀಕರಿಸಲಾಗುವುದು ಎಂದು ವಿವರಿಸಿದರು.

ಪ್ರಸ್ತುತ ಮಂಡ್ಯ ನಗರಸಭಾ ಕಾರ್ಯಾಲಯದ ಆವರಣದಲ್ಲಿ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಮುಖ 4 ವಿಭಾಗಗಳಲ್ಲಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗುವುದೆಂದರು.

ದಾಖಲೆಗಳ ಸಲ್ಲಿಕೆ
ಇ-ಖಾತಾ ಅಭಿಯಾನಕ್ಕೆ ಅರ್ಜಿ ಸಲ್ಲಿಸುವ ಆಸ್ತಿಗಳ ಮಾಲೀಕರು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಋಜುವಾತುಪಡಿಸುವ ನೋಂದಾಯಿತ ಮಾರಾಟ ಪತ್ರ, ದಾನ ಪತ್ರ, ವಿಭಾಗಪತ್ರ ಮತ್ತು ಸರ್ಕಾರ, ನಿಗಮ ಮಂಡಳಿ ಹಾಗೂ ಕಂದಾಯ ಇಲಾಖೆ ನೀಡಿರುವ ಮಂಜೂರಾತಿ ಪತ್ರ ಹಾಗೂ ಹಕ್ಕುಪತ್ರ, ಸಕ್ಷಮ ಪ್ರಾಧಿಕಾರ ಅನುಮೋದಿಸುವ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ, ಇ.ಸಿ., ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರು ಹಾಗೂ ಸ್ವತ್ತಿನ ಪೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ ಕುಮಾರ್,  ಮಾಜಿ ಅಧ್ಯಕ್ಷ ಹೆಚ್.ಎಸ್. ಮಂಜು, ಆಯುಕ್ತರಾದ ಪಂಪಾಶ್ರೀ, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಹಾಗೂ ನಗರಸಭಾ ಸದಸ್ಯರು, ಮುಡಾ ಅಧ್ಯಕ್ಷ ನಹೀಮ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ