ಕೇವಲ ಒಂದು ದಿನ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದರೆ ಸಾಲದು. ದಿನನಿತ್ಯ ಆಚರಿಸುವಂತಾಗಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಸಿ.ಜೆ ಶ್ರೀನಿವಾಸ್ ಹೇಳಿದರು.
ಶ್ರೀರಂಗಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಮೈಸೂರಿನ ಫಿಲೋಮಿನಾ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸುತ್ತೇವೆ.ನಂತರ ಮುಂದಿನ ವರ್ಷ ಮತ್ತೆ ಪರಿಸರ ದಿನದಂದೇ ನಮಗೆ ನೆನಪು ಬರೋದು. ತಾವು ನೆಟ್ಟ ಗಿಡಗಳ ದಿನನಿತ್ಯ ಪೋಷಣೆ ಮಾಡಿದರೆ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದರು.
ಫಿಲೋಮಿನಾ ಕಾಲೇಜು ಪ್ರಾಧ್ಯಾಪಕ ಡಾ.ಪ್ರಶಾಂತ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ವೇಳೆ ಶೇ.46 ರಷ್ಟು ಅರಣ್ಯ ಪ್ರದೇಶವಿದ್ದು ಇದೀಗ ಮಾನವ ಆಧುನೀಕರಣದ ಹೆಸರಿನಲ್ಲಿ ಹಾಗೂ ತನ್ನ ಅತಿಯಾದ ದುರಾಸೆಯಿಂದ ಶೇ. 24.62 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ ಎಂದು ಬೇಸರ ವ್ಯಕ್ತಪಡಿಸಿದರು. 1992 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸುವಂತೆ ತೆಗೆದುಕೊಂಡ ಮಹತ್ತರವಾದ ನಿರ್ಣಯಕ್ಕೆ ಇದೀಗ 30ವರ್ಷ ತುಂಬಿದೆ.
ದೇಶದಲ್ಲಿ 130 ಕೋಟಿ ಜನ ಸಂಖ್ಯೆಯಿದ್ದು, ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಣೆ ಮಾಡಿದರೆ ಅರಣ್ಯ ಉಳಿಸ ಬಹುದು ಎಂದರು. ಈ ವೇಳೆ ಫಿಲೋಮಿನಾ ಕಾಲೇಜು ಆಡಳಿತ ಮಂಡಳಿಯ ಪ್ರೊ.ಚಂದನ್, ಪ್ರೊ.ಅರ್ಶಿಯಾ, ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಯಿದಾ ಬಾನು ಸೇರಿದಂತೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದು ನಾನಾ ಜಾತಿಯ ಗಿಡ ನೆಟ್ಟು ನೀರುಣಿಸಿದರು.