ಮಕ್ಕಳ ಕಲಿಕೆಗೆ ಅನುಕೂಲವಾಗುವ ಪೂರಕ ಸಾಮಗ್ರಿಗಳನ್ನು ಸರ್ಕಾರಿ ಶಾಲೆಗೆ ಒದಗಿಸುವುದು ಅತ್ಯಗತ್ಯವಾಗಿದೆ ಎಂದು ವಿಯಾವಿ ಸೆಲ್ಯೂಷನ್ಸ್ ಇಂಡಿಯಾ ಪ್ರೈ ಲಿ., ಆಡಳಿತಾಧಿಕಾರಿ ಸ್ವರ್ಣ ಅನೂಪ್ ತಿಳಿಸಿದರು.
ಮಂಡ್ಯ ತಾಲೂಕಿನ ಕರಡಿಕೊಪ್ಪಲು ಗ್ರಾಮದಲ್ಲಿ ವಿಯಾವಿ ಸೆಲ್ಯೂಷನ್ಸ್ ಇಂಡಿಯಾ ಪ್ರೈ. ಲಿ., ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ನಡೆದ 52 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಕಂಪ್ಯೂಟರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡುವುದರ ಜೊತೆಗೆ,ಕುತೂಹಲದಿಂದ ಜ್ಞಾನ ವೃದ್ಧಿಗೆ ಅಗತ್ಯವಿರುವ ಕಲಿಕಾ ಸಾಮಾಗ್ರಿಗಳನ್ನು ನೀಡುವ ಅಗತ್ಯತೆ ಇದೆ ಎಂದರು. ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ವಿಶೇಷವಾದ ಆಸಕ್ತಿ ಇದೆ. ಗ್ರಾಮೀಣ ಪರಿಸರ ಗ್ರ ಮಕ್ಕಳಲ್ಲಿ ಏಕಾಗ್ರತೆ ಉಂಟು ಮಾಡುವ ಕಲಿಕೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ಸರ್ಕಾರಿ ಶಾಲೆಯ ಬೆಳವಣಿಗೆಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕಳೆದ ಐದು ವರ್ಷಗಳಿಂದ ಲೇಖನ ಸಾಮಗ್ರಿಗಳು, ಸ್ಮಾರ್ಟ್ ಕ್ಲಾಸ್ ತರಗತಿಗಳಿಗೆ ಅನುಕೂಲವಾಗುವ ಸಾಮಗ್ರಿಗಳನ್ನು ಕ್ರಿಯಾ ಯೋಜನೆ ರೂಪಿಸಿಕೊಂಡು ಅಗತ್ಯ ಅನುದಾನದ ಪಡೆದು ಉತ್ತಮ ಕಲಿಕಾ ಸಾಮಗ್ರಿಗಳನ್ನು ನೀಡುತ್ತಾ ಬಂದಿದೆ. ಸರ್ಕಾರಿ ಶಾಲೆಯಲ್ಲಿನ ಮಕ್ಕಳಲ್ಲಿ ಭೌತಿಕ ಮತ್ತು ಭೌದ್ದಿಕ ವಿಕಾಸಕ್ಕಾಗಿ ಅನುಕೂಲ ಕಲ್ಪಿಸುವ ಉದ್ದೇಶ ಸಂಸ್ಥೆಯದ್ದಾಗಿದೆ. ಸರ್ಕಾರಗಳನ್ನೇ ಅವಲಂಭಿಸದೆ ಬೇರೆ ಬೇರೆ ಯೋಜನೆಯಡಿ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಬಹುದಾಗಿದೆ ಎಂದು ಹೇಳಿದರು.
ಬ್ಯಾಂಕಿಂಗ್ ವಲಯ, ಕಾರ್ಪೋರೇಟ್ ಕಂಪನಿಗಳು ಶಿಕ್ಷಣದ ಉನ್ನತೀಕರಣಕ್ಕೆ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ನಿಧಿ ನಿಗಧಿಪಡಿಸಲಾಗಿದ್ದು, ಇದರ ಸದುಪಯೋಗದೊಡನೆ ಗ್ರಾಮೀಣ ಪ್ರದೇಶದ ನೂರಾರು ಮಕ್ಕಳಿಗೆ ಇದರ ಪ್ರಯೋಜನವಾಗಿದೆ ಎಂದರು.
ಉಪ್ಪರಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರೀಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಜೇಗೌಡ, ಎಸ್‌ಡಿಎಂಸಿ ಸದಸ್ಯರಾದ ಕುಮಾರ್, ಸತೀಶ್, ಮಂಜು, ಶಿವರಾಂ, ತಾಯಮ್ಮ, ವಿ.ಸಿ. ಫಾರಂನ ಮುಖ್ಯ ಶಿಕ್ಷಕ ಪ್ರಸನ್ನ, ಶಿಕ್ಷಕರುಗಳಾದ ಕಾಶಪ್ಪ, ಉಷಾರಾಣಿ, ಮೀನಾಕ್ಷಿ ಮತ್ತಿತರರು ಇದ್ದರು.




